ನ್ಯೂಸ್

ಕೊನೆಗೂ ಶಿಕ್ಷಕರ ವರ್ಗ; ಅಡ್ಡಿ, ತಡೆಯಾಜ್ಞೆ ದಾಟಿ ಅಂತೂ ಕೂಡಿಬಂತು ಕಾಲ

ಬೆಂಗಳೂರು: ರಾಜ್ಯದ ಶಿಕ್ಷಕ ವಲಯದಲ್ಲಿ ವಾರ ಮೊದಲೇ ದೀಪಾವಳಿ ಸಡಗರ ಮನೆಮಾಡಿದೆ. ಶಿಕ್ಷಕರ ವರ್ಗಾವಣೆಗೆ ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ(ಕೆಎಟಿ) ನೀಡಿದ್ದ ತಡೆಯಾಜ್ಞೆ ತೆರವುಗೊಳ್ಳುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಪರಿಷ್ಕೃತ ವೇಳಾಪಟ್ಟಿ ಬಿಡುಗಡೆ ಮಾಡಿದೆ. ಈ ಮೊದಲೇ ಹೇಳಿದಂತೆ 2019-20ನೇ ಸಾಲಿನ ಸಾಮಾನ್ಯ ವರ್ಗಾವಣೆಗಳಲ್ಲಿನ ಕಡ್ಡಾಯ, ವರ್ಗಾವಣೆ, ವಲಯ ವರ್ಗಾವಣೆ ಮೇಲೆ ಅಥವಾ ಸಮರ್ಪಕ ಮರುಹಂಚಿಕೆಯ ಮೇರೆಗೆ ವರ್ಗಾವಣೆಗೊಂಡಿದ್ದ ಶಿಕ್ಷಕರಿಗೆ ಮೊದಲ ಆದ್ಯತೆ ನೀಡಿದೆ.

ಈ ಹಿಂದೆ ಕಡ್ಡಾಯ ವರ್ಗಾವಣೆಗೆ ಒಳಗಾಗಿದ್ದ ಶಿಕ್ಷಕರು ಈ ಬಾರಿಯ ವರ್ಗಾವಣೆಯಲ್ಲಿ ಈ ಹಿಂದೆ ಅಂದರೆ, ವರ್ಗಾವಣೆ ಪೂರ್ವದಲ್ಲಿ ಎಲ್ಲಿ ಕಾರ್ಯನಿರ್ವಹಿಸುತ್ತಿದ್ದರೋ ಆ ಸಂಬಂಧಪಟ್ಟ ತಾಲೂಕು ಅಥವಾ ಜಿಲ್ಲೆಯೊಳಗೆ ಸ್ಥಳನಿಯುಕ್ತಿ ಪ್ರಯೋಜನ ನೀಡುವುದಕ್ಕೆ ಖಾಲಿ ಹುದ್ದೆ ಲಭ್ಯತೆಗೆ ಒಳಪಟ್ಟು ಸ್ಥಳ ಆಯ್ಕೆ ಮಾಡಿಕೊಳ್ಳಲು ಇಲಾಖೆ ಒಂದು ಬಾರಿ ಅವಕಾಶ ನೀಡುತ್ತಿದೆ.

ವರ್ಗಾವಣೆ ಬಯಸಿ 72 ಸಾವಿರ ಶಿಕ್ಷಕರು ಅರ್ಜಿ ಸಲ್ಲಿಸಿದ್ದಾರೆ. ಕಳೆದ ವರ್ಷ ಹೆಚ್ಚುವರಿ ಮತ್ತು ಕಡ್ಡಾಯವಾಗಿ ವರ್ಗಾವಣೆಗೊಂಡ ಶಿಕ್ಷಕರಿಗೆ ಸೆ.15ರಿಂದ ಕೌನ್ಸೆಲಿಂಗ್ ನಡೆಯಬೇಕಾಗಿತ್ತು. ಆದರೆ, ಕೆಎಟಿ ತಡೆಯಾಜ್ಞೆ ಹಿನ್ನೆಲೆಯಲ್ಲಿ ಸಂಪೂರ್ಣ ವರ್ಗಾವಣೆ ಪ್ರಕ್ರಿಯೆ ಸ್ಥಗಿತವಾಗಿತ್ತು. ಈಗ ತಡೆಯಾಜ್ಞೆ ತೆರವು ಆಗಿರುವುದರಿಂದ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ. ಇದು ತಾಂತ್ರಿಕ ಕಾರಣಗಳಿಂದಾಗಿ ವ್ಯತ್ಯಯ ಉಂಟಾದಲ್ಲಿ, ಅವಶ್ಯಕತೆ ಅನುಗುಣವಾಗಿ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿಕೊಳ್ಳುವ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.

ಅರ್ಜಿ ಸಲ್ಲಿಕೆ, ಹುದ್ದೆಗಳ ಮಾಹಿತಿ ಪ್ರಕಟ ಎಲ್ಲವೂ ಈ ಹಿಂದಿನ ವೇಳಾಪಟ್ಟಿಯ ಪ್ರಕಾರವಾಗಿಯೇ ಆಗಿದೆ. ಮುಂದುವರಿದ ಭಾಗವಾಗಿ ಕೌನ್ಸೆಲಿಂಗ್​ಗೆ ಪರಿಷ್ಕೃತ ವೇಳಾಪಟ್ಟಿಯ ಅನುಗುಣವಾಗಿ ನಡೆಯಲಿದೆ. ಕಡ್ಡಾಯ ವರ್ಗಾವಣೆಗೊಂಡಿದ್ದ ಪ್ರಾಥಮಿಕ ಶಿಕ್ಷಕರಿಗೆ ಅ.26 ಮತ್ತು ಪ್ರೌಢ ಶಿಕ್ಷಕರಿಗೆ ಅ.28ರಿಂದ ಆನ್​ಲೈನ್ ಮೂಲಕ ಆಯಾ ಉಪನಿರ್ದೇಶಕ ಅಧ್ಯಕ್ಷತೆಯಲ್ಲಿ ಕೌನ್ಸೆಲಿಂಗ್ ನಡೆಯಲಿದೆ.

ತಡೆಯಾಜ್ಞೆ ಏಕೆ?: ಹೆಚ್ಚುವರಿ ಮತ್ತು ಕಡ್ಡಾಯ ವರ್ಗಾವಣೆಗೆ ಅವಕಾಶ ಕಲ್ಪಿಸಿರುವಂತೆಯೇ 2016-17ನೇ ಸಾಲಿನಲ್ಲಿ ಕಡ್ಡಾಯ, ಹೆಚ್ಚುವರಿ ವರ್ಗಾವಣೆಗೆ ಶಿಕ್ಷೆಗೆ ಗುರಿಯಾಗಿರುವ ನಮಗೂ ಮತ್ತೊಮ್ಮೆ ವರ್ಗಾವಣೆ ಪಡೆಯಲು ಅವಕಾಶ ನೀಡಬೇಕೆಂದು ಕೆಲವು ಶಿಕ್ಷಕರು ಕೆಎಟಿಗೆ ಹೋಗಿದ್ದರು. ಈ ಮನವಿ ಪರಿಗಣಿಸಿದ ಕೆಎಟಿ ಅಧ್ಯಕ್ಷ ನ್ಯಾ.ಆರ್.ಬಿ.ಬೂದಿಹಾಳ್ ಹಾಗೂ ಎನ್.ಶಿವಶೈಲಂ ಅವರಿದ್ದ ಪೀಠ ವರ್ಗಾವಣೆ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿತ್ತು.

ಲೋಪದೋಷ ಸಲ್ಲದು: ಎಲ್ಲ ರೀತಿಯ ನಿಯಮಗಳು, ಸರ್ಕಾರದ ಆದೇಶಗಳು, ಕೋರ್ಟ್​ನ ನಿರ್ದೇಶನಗಳನ್ನು ಗಮನದಲ್ಲಿಟ್ಟುಕೊಂಡು ವರ್ಗಾವಣೆ ಪ್ರಕ್ರಿಯೆ ನಡೆಸಬೇಕು. ಈ ವೇಳೆ ಯಾವುದೇ ಲೋಪದೋಷಗಳಿಗೆ ಎಡೆಮಾಡಿಕೊಡದಂತೆ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಆರ್.ವಿಶಾಲ್ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ವರ್ಷಗಳ ನಂತರ ವರ್ಗ: 2020-21ನೇ ಶೈಕ್ಷಣಿಕ ಸಾಲಿನಲ್ಲಿ ವರ್ಗಾವಣೆ ನಡೆಯಬೇಕಾಗಿತ್ತು. ಆದರೆ, ಕರೊನಾ ಸೇರಿದಂತೆ ಅನೇಕ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಅದೇ ವರ್ಗಾವಣೆ 2021-22ನೇ ಶೈಕ್ಷಣಿಕ ವರ್ಷದಲ್ಲಿ ಆರಂಭವಾಗುತ್ತಿದೆ. ಅದಕ್ಕೂ ಹಿಂದೆ ಅಂದರೆ, 2019- 20ನೇ ಸಾಲಿನ ವರ್ಗಾವಣೆ ಪ್ರಕ್ರಿಯೆ ಪರಿಶೀಲಿಸಿದರೆ, ಹಲವಾರು ಕಾರಣಗಳಿಂದ ಶಿಕ್ಷಣ ಇಲಾಖೆ ಈ ಹಿಂದೆ ಮೂರು ವರ್ಷ ವರ್ಗಾವಣೆಯನ್ನೇ ನಡೆಸಿರಲಿಲ್ಲ. 2016ರಿಂದ 2018ರ ಅವಧಿಯಲ್ಲಿ ವರ್ಗಾವಣೆಗೆ ಸ್ಥಗಿತವಾಗಿತ್ತು. ಆನಂತರ 2019ರಲ್ಲಿ ನವೆಂಬರ್​ನಲ್ಲಿ ವರ್ಗಾವಣೆ ಮುಕ್ತಾಯವಾಗಿತ್ತು. 16 ಸಾವಿರ ಶಿಕ್ಷಕರು ವರ್ಗಾವಣೆಯ ಫಲ ಪಡೆದಿದ್ದರು.

ಹೊಸ ಕಾಯ್ದೆಯಡಿ ಪ್ರಕ್ರಿಯೆ: ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು(ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020ನ್ನು ಸುಗ್ರೀವಾಜ್ಞೆ ಮೂಲಕ ಜಾರಿಗೆ ತಂದು ಸರ್ಕಾರದ ಒಪ್ಪಿಗೆ ಪಡೆದು ಅಧ್ಯಾಧೇಶ ಹೊರಡಿಸಿ ಕಾಯ್ದೆಯಾಗಿ ರೂಪಿಸಿದೆ. ಈ ಬಾರಿ ವರ್ಗಾವಣೆ ಹೊಸ ಕಾಯ್ದೆ ಪ್ರಕಾರವಾಗಿ ನಡೆಯಲಿದೆ.

ಕೊನೆಗೂ ವರ್ಗಾವಣೆ ಪ್ರಕ್ರಿಯೆ ಆರಂಭವಾಗಿರುವುದು ಶಿಕ್ಷಕ ವರ್ಗದವರಿಗೆ ಸಂತಸ ತಂದಿದೆ. ಮತ್ತೆ ಸ್ಥಗಿತವಾಗದೆ ವರ್ಗಾವಣೆ ನಡೆಯಲಿ ಎಂದು ಪ್ರಾರ್ಥಿಸುತ್ತೇನೆ.

| ಶಂಭುಲಿಂಗನಗೌಡ ಪಾಟೀಲ ಅಧ್ಯಕ್ಷ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ

ಸಾಮಾನ್ಯ ವರ್ಗ: ಸರ್ಕಾರಿ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರು ಒಳಗೊಂಡಂತೆ ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಪ್ರೌಢಶಾಲಾ ಶಿಕ್ಷಕರು ಮತ್ತು ತತ್ಸಮಾನ ವೃಂದದ ಶಿಕ್ಷಕರು ಹಾಗೂ ಸರ್ಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕರು, ತತ್ಸಮಾನ ವೃಂದದ ಅಧಿಕಾರಿಗಳ ಸಾಮಾನ್ಯ ವರ್ಗಾವಣೆ ಮುಂದುವರಿಸಿ ಪರಿಷ್ಕೃತ ವೇಳಾಪಟ್ಟಿ ಹೊರಡಿಸಿದೆ. ಆ ಪ್ರಕಾರ 5 ವರ್ಷ ಪೂರ್ಣಗೊಂಡ ನಿರ್ದಿಷ್ಟಪಡಿಸಿದ ಮತ್ತು ತಾಂತ್ರಿಕ ಸಹಾಯಕ ಆದ್ಯತಾ ಪಟ್ಟಿ ಅ.30ರಂದು ಪ್ರಕಟವಾಗಲಿದೆ.

ನ.2ಕ್ಕೆ ಕೌನ್ಸೆಲಿಂಗ್: ಮೊದಲ ಹಂತದ ಕೌನ್ಸೆಲಿಂಗ್ ನ.2 ಹಾಗೂ ಎರಡನೇ ಹಂತದಲ್ಲಿ 2021 ಜ.18ರಂದು ಕೌನ್ಸೆಲಿಂಗ್ ನಡೆಯಲಿದೆ. 3 ವರ್ಷ ಪೂರ್ಣಗೊಳಿಸಿದ ಸಿಆರ್​ಪಿ ಮತ್ತು ಬಿಆರ್​ಪಿ 1ನೇ ಹಂತದಲ್ಲಿ ಡಿ.2 ಹಾಗೂ 2ನೇ ಹಂತದಲ್ಲಿ ಜ.30ರಂದು ಕೌನ್ಸೆಲಿಂಗ್ ನಡೆಯಲಿದೆ. ಜಿಲ್ಲೆಯೊಳಗಿನ ಕೋರಿಕೆ ವರ್ಗಾವಣೆ 1ನೇ ಹಂತದ ನ.24ರಿಂದ ಡಿ.2 ಹಾಗೂ 2ನೇ ಹಂತದಲ್ಲಿ ಜ.19ರಿಂದ 27ರವರೆಗೆ ನಡೆಯಲಿದೆ. ಜಿಲ್ಲೆಯೊಳಗಿನ ಪರಸ್ಪರ ವರ್ಗಾವಣೆ 1ನೇ ಹಂತದಲ್ಲಿ ನ.19ರಿಂದ ಹಾಗೂ 2ನೇ ಹಂತದ ಕೌನ್ಸೆಲಿಂಗ್ ಜ.19ರಿಂದ ನಡೆಯಲಿದೆ. ಘಟಕದ ಹೊರಗೆ ಮತ್ತು ವಲಯದ ಒಳಗಿನ ಕೋರಿಗೆ ವರ್ಗಾವಣೆ ಕೌನ್ಸೆಲಿಂಗ್ 1ನೇ ಹಂತದಲ್ಲಿ ನ.16ರಿಂದ ಹಾಗೂ 2ನೇ ಹಂತದಲ್ಲಿ ಫೆ.1ರಿಂದ ಆರಂಭವಾಗಲಿದೆ. ಘಟಕದ ಹೊರಗೆ ವಲಯದ ಒಳಗೆ ಪರಸ್ಪರ ವರ್ಗಾವಣೆ 1ನೇ ಹಂತದ ಕೌನ್ಸೆಲಿಂಗ್ ಡಿ.21 ಹಾಗೂ 2ನೇ ಹಂತದ ಕೌನ್ಸೆಲಿಂಗ್ ಫೆ.11ರಿಂದ ನಡೆಯಲಿದೆ. ಘಟಕ ಮತ್ತು ವಲಯದ ಹೊರಗೆ ಕೋರಿಕೆ ವರ್ಗಾವಣೆ 1ನೇ ಹಂತದ ಕೌನ್ಸೆಲಿಂಗ್ ಡಿ.24ರಿಂದ ಜ.10ರವರೆಗೆ ಹಾಗೂ 2ನೇ ಹಂತದ ಕೌನ್ಸೆಲಿಂಗ್ ಫೆ.15ರಿಂದ ಆರಂಭವಾಗಲಿದೆ. ಘಟಕ ಮತ್ತು ವಲಯದ ಹೊರಗೆ ಪರಸ್ಪರ ವರ್ಗಾವಣೆ 1ನೇ ಹಂತದ ಕೌನ್ಸೆಲಿಂಗ್ ಜ.14 ಮತ್ತು ಫೆ.26ರಿಂದ ನಡೆಯಲಿದೆ.