ಆಂಧ್ರಪ್ರದೇಶ: ಚಿತ್ರೋದ್ಯಮದಲ್ಲಿ ದೊಡ್ಡ ಹೆಸರು ಮಾಡುವ ಮಹತ್ವದ ಕನಸ ಹೊತ್ತು, ಅದೆಷ್ಟೋ ಒದ್ದಾಟಗಳನ್ನು ಅನುಭವಿಸಿ, ಇನ್ನೇನು ಹೊಸ ದಾರಿಯನ್ನು ಕಂಡೆವು ಎನ್ನುವಷ್ಟರೊಳಗೆ ಯಾವುದಾದರೂ ಒಂದು ಎಡವಟ್ಟು ಅಥವಾ ವಿವಾದಕ್ಕೆ ಸಿಲುಕಿಕೊಳ್ಳುವ ನಟ-ನಟಿಯರೇ ಹೆಚ್ಚು. ಅದರಲ್ಲಿಯೂ ಇವರು ಮುಂದಿನ ದಿನಗಳಲ್ಲಿ ಒಳ್ಳೆಯ ಕಲಾವಿದರಾಗುವುದರಲ್ಲಿ ಅನುಮಾನವೇ ಇಲ್ಲ ಎಂದು ನಿರ್ಧರಿಸುವ ಸಿನಿಪ್ರಿಯರಿಗೆ ಇಂತಹ ಘಟನೆಗಳು ಭಾರೀ ಆಘಾತ ಸೃಷ್ಟಿಸುತ್ತದೆ. ಸದ್ಯ ಈ ಸಾಲಿಗೆ ಟಾಲಿವುಡ್ ನಟ ರಾಜ್ ತರುಣ್ ಸೇರ್ಪಡೆಯಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ರಾಜ್ ತರುಣ್ ವಿರುದ್ಧ ಪ್ರೇಯಸಿ ಲಾವಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ರಾಜ್ ಅನ್ಯ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾರೆ. ಇದರಿಂದ ನನಗೆ ಮೋಸವಾಗಿದೆ ಎಂದು ಆರೋಪ ಎಸಗಿದ್ದಾರೆ. ಸದ್ಯ ಈ ವಿಚಾರ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ತನ್ನ ಮೇಲಿನ ಆರೋಪಗಳಿಗೆ ಸ್ವತಃ ಸ್ಪಷ್ಟನೆ ನೀಡಿದ ತರುಣ್, ಲಾವಣ್ಯ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದು, ಮಾಧ್ಯಮಗಳ ಬೆಂಬಲವನ್ನು ಕೋರಿದರು.
ಕಳೆದ 11 ವರ್ಷಗಳಿಂದ ನಟನ ಜತೆ ಲಿವ್-ಇನ್ ರಿಲೇಷನ್ಶಿಪ್ನಲ್ಲಿದ್ದ ಲಾವಣ್ಯ, ಕೆಲವು ವರ್ಷಗಳ ಹಿಂದೆ ದೇವಸ್ಥಾನದಲ್ಲಿ ರಹಸ್ಯವಾಗಿ ಮದುವೆಯಾಗಿದ್ದೆವು ಎಂದು ಹೇಳಿಕೊಂಡಿದ್ದಾರೆ. ರಾಜ್ ತರುಣ್ ಈಗ ಮುಂಬೈ ಮೂಲದ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿದ್ದಾನೆ ಎಂದು ದೂರಿನಲ್ಲಿ ಆರೋಪಿಸಿರುವ ಲಾವಣ್ಯ, ನನಗೆ ಮೋಸ ಮಾಡಿದ್ದಕ್ಕಾಗಿ ರಾಜ್ ವಿರುದ್ಧ ಕ್ರಮ ಜರುಗಿಸುವಂತೆ ಪೊಲೀಸರ ಮುಂದೆ ಅಳಲು ತೋಡಿಕೊಂಡಿದ್ದಾರೆ.
ಸದ್ಯ ಈ ವಿವಾದ ಟಾಲಿವುಡ್ ಅಂಗಳದಲ್ಲಿ ದೊಡ್ಡ ಅಲೆಯನ್ನೇ ಸೃಷ್ಟಿಸಿದ್ದು, ಚಿತ್ರರಂಗವನ್ನು ಗೊಂದಲಕ್ಕೆ ದೂಡಿದೆ. ನರಸಿಂಗಿ ಪೊಲೀಸ್ ಠಾಣೆಯಲ್ಲಿ ನಟನ ವಿರುದ್ಧ ಲಾವಣ್ಯ ದೂರು ದಾಖಲಿಸಿದ್ದಾರೆ. ನನ್ನ ಮೇಲೆ ಇಂತಹ ಆರೋಪಗಳನ್ನು ಹೊರಿಸಿರುವ ಲಾವಣ್ಯ, ಮಾದಕ ವ್ಯಸನಿಯಾಗಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಆಕೆ ಈ ರೀತಿ ಹೊಸ ನಾಟಕಗಳನ್ನು ಹುಟ್ಟುಹಾಕಿದ್ದಾರೆ. ನನ್ನನ್ನು ಬ್ಲ್ಯಾಕ್ಮೇಲ್ ಮಾಡ್ತಿದ್ದಾರೆ ಅಷ್ಟೇ. ಲಾವಣ್ಯ ವಿರುದ್ಧ ನಾನು ಕಾನೂನು ಹೋರಾಟ ಮಾಡುತ್ತೇನೆ. ಶೀಘ್ರವೇ ಪತ್ರಿಕಾಗೋಷ್ಠಿ ನಡೆಸಿ, ಎಲ್ಲದಕ್ಕೂ ಸ್ಪಷ್ಟನೆ ನೀಡುತ್ತೇನೆ ಎಂದು ರಾಜ್ ತರುಣ್ ಹೇಳಿದ್ದಾರೆ,(ಏಜೆನ್ಸೀಸ್).