ನ್ಯೂಸ್

ರಾಜಧಾನಿ ದೆಹಲಿ ಪ್ರವೇಶಿಸುವಲ್ಲಿ ರೈತರು ಯಶಸ್ವಿ

ನವದೆಹಲಿ: ಕೃಷಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಮೂರು ಹೊಸ ಕಾಯ್ದೆಗಳನ್ನು ವಿರೋಧಿಸಿ ‘ದೆಹಲಿ ಚಲೋ’ ಆಂದೋಲನ ಪ್ರಾರಂಭಿಸಿರುವ ಸಾವಿರಾರು ರೈತರು ಪೊಲೀಸರೊಂದಿಗೆ ಹಲವು ಸಂಘರ್ಷ ಎದುರಿಸಿ ಕೊನೆಗೂ ದೆಹಲಿ ಪ್ರವೇಶಿಸುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ. ರ್ಯಾಲಿಗೆ ಮೊದಲು ಅನುಮತಿ ನಿರಾಕರಿಸಿದ್ದ ಸರ್ಕಾರ, ರೈತರ ಆಕ್ರೋಶ ಹಾಗೂ ಗಡಿಯಲ್ಲಿ ಪರಿಸ್ಥಿತಿ ಕೈಮೀರುತ್ತಿರುವುದನ್ನು ಪರಿಗಣಿಸಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು ಎಂಬ ಷರತ್ತಿನ ಮೇಲೆ ರೈತರಿಗೆ ದೆಹಲಿಗೆ ಪ್ರವೇಶಿಸಲು ಹಾಗೂ ದೆಹಲಿ ಹೊರವಲಯದಲ್ಲಿರುವ ಬುರಾರಿ ಮೈದಾನದಲ್ಲಿ ಧರಣಿ ನಡೆಸಲು ಅನುಮತಿ ನೀಡಿದೆ. ಆದರೆ ರೈತರು ರಾಮ್ೕಲಾ ಮೈದಾನದಲ್ಲಿ ಧರಣಿ ನಡೆಸುವ ಯೋಜನೆ ಹೊಂದಿದ್ದು, ಸ್ಥಳದ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ. ಉತ್ತರಪ್ರದೇಶ, ಹರಿಯಾಣ, ಪಂಜಾಬ್, ರಾಜಸ್ಥಾನ, ಉತ್ತರಾಖಂಡ ಮತ್ತು ಕೇರಳ ರಾಜ್ಯಗಳ ಲಕ್ಷಾಂತರ ರೈತರು ದೆಹಲಿಗೆ ತೆರಳುತ್ತಿದ್ದು, 7 ಪ್ರಮುಖ ರೈತ ಸಂಘಟನೆಗಳು ಇದರಲ್ಲಿ ಭಾಗಿಯಾಗಿವೆ.

ದೆಹಲಿ ಪ್ರವೇಶಕ್ಕೆ ಅನುಮತಿ ಸಿಗುವುದಕ್ಕೂ ಮುನ್ನ ಹಲವು ಗಡಿ ರಸ್ತೆಗಳು ಹಾಗೂ ಹೆದ್ದಾರಿಗಳಲ್ಲಿ ಗುರುವಾರದಂತೆ ಪೊಲೀಸರು ಮತ್ತು ರೈತರ ಮಧ್ಯೆ ತೀವ್ರ ಜಟಾಪಟಿ ಏರ್ಪಟ್ಟಿತ್ತು. ರೈತರನ್ನು ನಿಯಂತ್ರಿಸಲು ಪೊಲೀಸರು ಜಲಫಿರಂಗಿ ಮತ್ತು ಅಶ್ರುವಾಯು ಪ್ರಯೋಗಿಸಿದ್ದು, ಹಲವರು ಈ ವೇಳೆ ಗಾಯಗೊಂಡಿದ್ದಾರೆ. ರೈತರು ಕೂಡ ಪೊಲೀಸರ ಮೇಲೆ ಕಲ್ಲು ಹಾಗೂ ಇಟ್ಟಿಗೆಗಳನ್ನು ತೂರಿದ್ದಾರೆ.

ನಮಗೇಕೆ ನಿರ್ಬಂಧ?

ಸಾವಿರಾರು ಜನರು ದೆಹಲಿಗೆ ಪ್ರವೇಶಿಸುವುದರಿಂದ ಕರೊನಾ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದರು. ಕರೊನಾ ಮಾರ್ಗಸೂಚಿ ನಮಗೆ ಮಾತ್ರ ಅನ್ವಯವೇ?, ಬಿಹಾರ ಚುನಾವಣೆ ಹಾಗೂ ಸಂಸತ್ ಅಧಿವೇಶನ ನಡೆಸಿದಾಗ ಅವು ಅನ್ವಯವಾಗಲಿಲ್ಲ ಏಕೆ? ಎಂದು ರೈತರು ಪ್ರಶ್ನಿಸಿದರು.

ತಾತ್ಕಾಲಿಕ ಜೈಲು ರಚನೆಗೆ ಅನುಮತಿ ನಿರಾಕರಣೆ

ಪ್ರತಿಭಟನೆ ವಿಕೋಪಕ್ಕೆ ತಿರುಗಿದರೆ ಬಂಧಿಸಲಾಗುವ ಸಾವಿರಾರು ರೈತರನ್ನು ಇಡಲು ದೆಹಲಿಯ 9 ಸ್ಟೇಡಿಯಂಗಳನ್ನು ತಾತ್ಕಾಲಿಕ ಜೈಲುಗಳನ್ನಾಗಿ ಪರಿವರ್ತಿಸಲು ಪೊಲೀಸರು ಮಾಡಿದ್ದ ಮನವಿಯನ್ನು ದೆಹಲಿ ಸರ್ಕಾರ ನಿರಾಕರಿಸಿದೆ. ರೈತರ ಆಂದೋಲನ ಸಂಪೂರ್ಣ ಶಾಂತಿಯುತವಾಗಿದ್ದು, ಈ ರೀತಿ ಪ್ರತಿಭಟಿಸುವುದು ಪ್ರತಿಯೊಬ್ಬನ ಹಕ್ಕು. ಹೀಗಾಗಿ ಸ್ಟೇಡಿಯಂಗಳನ್ನು ಜೈಲುಗಳಾಗಿ ಪರಿವರ್ತಿಸುವುದು ಬೇಡ ಎಂದು ದೆಹಲಿ ಗೃಹ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ.

ಪ್ರತಿಭಟನೆ ನಿಲ್ಲಿಸಿ ಮಾತುಕತೆಗೆ ಬನ್ನಿ

ರೈತರ ಸಮಸ್ಯೆಗಳನ್ನು ರ್ಚಚಿಸಲು ಸರ್ಕಾರ ಯಾವಾಗಲೂ ಸಿದ್ಧ. ಹೀಗಾಗಿ ಪ್ರತಿಭಟನೆ ಕೈಬಿಟ್ಟು ಮಾತುಕತೆಗೆ ಬನ್ನಿ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ರೈತರಿಗೆ ಮನವಿ ಮಾಡಿದ್ದಾರೆ. ಡಿಸೆಂಬರ್ 3ರಂದು ರೈತ ಸಂಘಟನೆಗಳ ಮತ್ತೊಂದು ಸುತ್ತಿನ ಸಭೆ ಕರೆಯಲಾಗಿದೆ ಎಂದು ತೋಮರ್ ಹೇಳಿದ್ದಾರೆ.

ಅಪಘಾತದಲ್ಲಿ ಓರ್ವ ರೈತ ಸಾವು

ದೆಹಲಿಗೆ ತೆರಳುತ್ತಿದ್ದ ರೈತರ ಟ್ರ್ಯಾಕ್ಟರ್​ ಹರಿಯಾಣದ ಭಿವಾನಿ ಬಳಿ ಟ್ರಕ್​ಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ರೈತ ಸಾವನ್ನಪ್ಪಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ.

ರಸ್ತೆಗಳಲ್ಲಿ ಗುಂಡಿ ತೋಡಿದ ಪೊಲೀಸರು

ದೆಹಲಿಯೆಡೆಗೆ ತೆರಳುತ್ತಿದ್ದ ರೈತರ ವಾಹನಗಳನ್ನು ತಡೆಯಲು ಹರಿಯಾಣ ಪೊಲೀಸರು ಮಿಲಿಟರಿ ಕಾರ್ಯತಂತ್ರದಂತೆ ಗಡಿ ರಸ್ತೆಗಳ ಮಧ್ಯದಲ್ಲಿ ಭಾರಿ ಪ್ರಮಾಣದ ಗುಂಡಿಗಳನ್ನು ತೋಡಿದ್ದಾರೆ. ಜತೆಗೆ ವೈಯರ್ ಬ್ಯಾರಿಕೇಡ್​ಗಳನ್ನು ಹಾಕಲಾಗಿದ್ದು, ರೈತರ ವಾಹನಗಳು ಗಡಿ ದಾಟದಂತೆ ನಿರ್ಬಂಧಿಸಿದ್ದಾರೆ.