ಖಾಸಗಿ ಅಥವಾ ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಯುವಕರು ಭಾರಿ ಶ್ರಮ ಪಡಬೇಕಾಗುತ್ತದೆ. ಜ್ಞಾನ, ಕೌಶಲ, ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳುತ್ತಲೇ ಅವರು ಉದ್ಯೋಗಬೇಟೆಗೆ ಅಣಿಯಾಗುತ್ತಾರೆ. ಅದರಲ್ಲೂ, ಸರ್ಕಾರಿ ಉದ್ಯೋಗ ಪಡೆಯಲು ಸ್ಪರ್ಧಾತ್ಮಕ ಪರೀಕ್ಷೆ ಬರೆದು, ಹತ್ತಾರು ಪ್ರಕ್ರಿಯೆಗಳನ್ನು ಪೂರೈಸಬೇಕಾಗುತ್ತದೆ. ಅತ್ತ ಉತ್ತರದ ರಾಜ್ಯ ಬಿಹಾರದಲ್ಲಿ ಲಕ್ಷಾಂತರ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಆಶ್ವಾಸನೆ ಚುನಾವಣೆ ಸಮಯದಲ್ಲಿ ಹೊಮ್ಮಿ, ಫಲಿತಾಂಶದ ಬಳಿಕ ಹೊಸ ಸರ್ಕಾರವೂ ಅದನ್ನು ಪುನರುಚ್ಚರಿಸಿದೆ. ಆದರೆ, ಕರ್ನಾಟಕದಲ್ಲಿ ಸರ್ಕಾರ ಹುದ್ದೆಗಳ ಭರ್ತಿಗೆ ಹೊರಡಿಸಲಾದ ಅಧಿಸೂಚನೆಯನ್ನೇ ರದ್ದು ಮಾಡುವ ಮೂಲಕ, ಲಕ್ಷಾಂತರ ಅಭ್ಯರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದೆ. ಕರೊನಾ ಕಾರಣದಿಂದ ಆರ್ಥಿಕ ರಂಗದಲ್ಲಿ ಹಿನ್ನಡೆ ಸಂಭವಿಸಿರುವುದು ಹೌದು. ಆದರೆ, ಇದನ್ನೇ ನೆಪವಾಗಿಟ್ಟುಕೊಂಡು ನೇಮಕಾತಿಗಳನ್ನು ಆ ಮೂಲಕ ಉದ್ಯೋಗದ ಅವಕಾಶಗಳನ್ನು ಬಂದ್ ಮಾಡುವುದರಲ್ಲಿ ಅರ್ಥವೇ ಇಲ್ಲ. ಇದರಿಂದ ಯುವ ಸಮುದಾಯ ವ್ಯವಸ್ಥೆ ಬಗ್ಗೆ ಮತ್ತಷ್ಟು ಹತಾಶ ಮನೋಭಾವ ತಳೆಯುವ ಅಪಾಯ ಇದೆ.
ಲೋಕೋಪಯೋಗಿ ಇಲಾಖೆ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ, ಬೆಂಗಳೂರು ಮೆಟ್ರೋ ರೈಲು ನಿಗಮ, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ ಹಾಗೂ ಕರ್ನಾಟಕ ಲೋಕಸೇವಾ ಆಯೋಗ ಆರ್ಥಿಕ ನಷ್ಟದ ಜತೆಗೆ ಆಡಳಿತಾತ್ಮಕ ಕಾರಣ ನೀಡಿ ನೇಮಕಾತಿಯನ್ನೇ ರದ್ದುಪಡಿಸಿರುವುದು ಆಘಾತಕಾರಿ ನಡೆ. ಸರ್ಕಾರಿ ಹುದ್ದೆ ಪಡೆಯಲು ಹಗಲಿರುಳು ಶ್ರಮಪಟ್ಟು ಓದಿ, ಪರೀಕ್ಷೆ ಮುಗಿಸಿ ಸಂದರ್ಶನಕ್ಕಾಗಿ ಕಾಯುತ್ತಿದ್ದ ಲಕ್ಷಾಂತರ ಅಭ್ಯರ್ಥಿಗಳು ಈ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ವಯೋಮಿತಿ ಮೀರಿದರೆ ಭವಿಷ್ಯವೇನು ಎಂಬುದು ಇವರೆಲ್ಲರ ಚಿಂತೆ. ಇದು ಗಂಭೀರ ಸಮಸ್ಯೆ. ವಯೋಮಿತಿ ಮೀರಿದರೆ ಸರ್ಕಾರಿ ಉದ್ಯೋಗದ ಅವಕಾಶವೇ ಕೈತಪು್ಪತ್ತದೆ ಅಲ್ಲದೆ ಇಷ್ಟು ವರ್ಷ ಅಭ್ಯರ್ಥಿಗಳು ಹಾಕಿದ ಶ್ರಮವೂ ವ್ಯರ್ಥವಾಗಿ ಹೋಗುತ್ತದೆ. ಕೆಲ ಅಭ್ಯರ್ಥಿಗಳಂತೂ ಸರ್ಕಾರಿ ಉದ್ಯೋಗಕ್ಕೇ ಸೇರಬೇಕು ಎಂದು ಖಾಸಗಿ ಉದ್ಯೋಗಕ್ಕೆ ಹೋಗದೆ ಪರೀಕ್ಷೆ ತಯಾರಿ ನಡೆಸಿದ್ದಾರೆ. ಏಕಾಏಕಿ ಅಧಿಸೂಚನೆಯನ್ನೇ ರದ್ದು ಮಾಡಿರುವುದು ಸಮಂಜಸವಾದ ನಿರ್ಧಾರ ಅಲ್ಲ. ಎಫ್ಡಿಎ, ಎಸ್ಡಿಎ ಹುದ್ದೆಗಳ ಭರ್ತಿ ಪ್ರಕ್ರಿಯೆ ಅಂತಿಮ ಹಂತಕ್ಕೆ ತಲುಪಿತ್ತು. ಸ್ಥಳ ನಿಯೋಜನೆಗೊಳಿಸಿ, ಕರ್ತವ್ಯಕ್ಕೆ ಹಾಜರಾಗುವಂತೆಯೂ ಸೂಚಿಸಲಾಗಿತ್ತು, ಈಗ ಕರೊನಾ ನೆಪವೊಡ್ಡಿ ನೇಮಕಾತಿಗೆ ತಡೆಯೊಡ್ಡಲಾಗಿದೆ.
ಆರ್ಥಿಕ ಸಮಸ್ಯೆಯ ನೆಪ ಹೇಳುವ ಬದಲು ದುಂದುವೆಚ್ಚವನ್ನು ತಡೆಯಬೇಕು. ಜಾತಿಗೊಂದು ನಿಗಮ ಮಾಡಿ, ಅದಕ್ಕೆ ಕೋಟ್ಯಂತರ ರೂಪಾಯಿ ಅನುದಾನ ಒದಗಿಸಲು ಸರ್ಕಾರದ ಬಳಿ ದುಡ್ಡಿದೆ. ಆದರೆ, ಅವಶ್ಯಕವಾದ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಬೇಕಾದರೆ ಆರ್ಥಿಕ ಸಂಕಷ್ಟ! ಇದೆಂಥ ನೀತಿ? ಸರ್ಕಾರ ಈ ಕೂಡಲೇ ತನ್ನ ನಿರ್ಧಾರವನ್ನು ಮರು ಪರಿಶೀಲಿಸಲಿ. ನೇಮಕಾತಿಯನ್ನೇ ಸ್ಥಗಿತ ಅಥವಾ ರದ್ದುಗೊಳಿಸುವ ಬದಲು ಹಂತ-ಹಂತವಾಗಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಲಿ. ಅಭ್ಯರ್ಥಿಗಳಲ್ಲಿ ವಿಶ್ವಾಸ ತುಂಬಿ, ಯುವಕರ ಬಗೆಗೆ ಕಳಕಳಿ ಇದೆ ಎಂಬ ಬದ್ಧತೆಯನ್ನು ತೋರಲಿ.