ನ್ಯೂಸ್

ನಿರ್ದೇಶಕ ಜೇಕಬ್ ವರ್ಗೀಸ್ ಸೇರಿ ಮೂವರ ವಿರುದ್ಧ ದಾಖಲು: ಕಾಪಿರೈಟ್ಸ್ ಉಲ್ಲಂಘನೆ ಮಾಡಿದ ಆರೋಪ

ಬೆಂಗಳೂರು: ಕಾಪಿರೈಟ್ಸ್ ಉಲ್ಲಂಘಿಸಿ ಎನ್.ಜಿ.ಓ ಸಂಸ್ಥೆಗೆ ಆರ್ಥಿಕ ನಷ್ಟವುಂಟುಮಾಡಿದ ಆರೋಪದಡಿ ಚಿತ್ರ ನಿರ್ದೇಶಕ ಜೇಕಬ್ ವರ್ಗೀಸ್ ಸೇರಿದಂತೆ ಮೂವರ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಎ್ಐಆರ್ ದಾಖಲಾಗಿದೆ.

ಬೆಂಗಳೂರು ಸ್ಕೂಲ್ ಸ್ಪೋಟ್ಸ್ ಫೌಂಡೇಶನ್‌ನ ಪ್ರತಿನಿಧಿಯಾಗಿರುವ ಇಲ್ವಿಸ್ ಜೋಸೆಫ್ ದೂರಿನನ್ವಯ ನ್ಯಾಯಾಲಯದಿಂದ ಬಂದ ಆದೇಶಾನುಸಾರ ಜೇಕಬ್ ವರ್ಗೀಸ್, ದಿನೇಶ್ ರಾಜ್ಕುಮಾರ್ ಹಾಗೂ ಮ್ಯಾಥ್ಯೂ ವರ್ಗೀಸ್ ವಿರುದ್ಧ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿವಂಗತ ನಟ ಪುನೀತ್ ರಾಜ್ ಕುಮಾರ್ ಅಭಿನಯದ ಪೃಥ್ವಿ ಸೇರಿದಂತೆ ಸವಾರಿ, ಸವಾರಿ-೨, ಚಂಬಲ್ ಸಿನಿಮಾಗಳನ್ನು ಜೇಕಬ್ ವರ್ಗೀಸ್ ನಿರ್ದೇಶಿಸಿದ್ದಾರೆ.

ಏನಿದು ಪ್ರಕರಣ?
ವಿಕಲಚೇತನ ಮಕ್ಕಳಿಗೆ ಕ್ರೀಡೆಯಲ್ಲಿ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದ ಸ್ಕೂಲ್ ಸ್ಪೋಟ್ಸ್ ಫೌಂಡೇಶನ್ ಎಂಬ ಎನ್.ಜಿ.ಒ ಸಂಸ್ಥೆಯು ‘ಚಾಂಪಿಯನ್ ಇನ್ ಮಿ’ ಹೆಸರಿನಲ್ಲಿ ಎಚ್‌ಐವಿ ಪೀಡಿತ ಮಕ್ಕಳಿಗೆ ಮ್ಯಾರಥಾನ್‌ನಲ್ಲಿ ಭಾಗವಹಿಸುವ ತರಬೇತಿ ನೀಡುತ್ತಿತ್ತು. ಅದರ ಭಾಗವಾಗಿ ಜಗತ್ತಿನ ವಿವಿಧೆಡೆ ಮ್ಯಾರಥಾನ್‌ನಲ್ಲಿ ಭಾಗವಹಿಸುವ ಇಬ್ಬರು ಕ್ರೀಡಾಪಟುಗಳ ಜೀವನಕ್ರಮದ ಕುರಿತು ಸಾಕ್ಷ್ಯಚಿತ್ರ ಚಿತ್ರೀಕರಣ ಮಾಡುವ ಜವಾಬ್ದಾರಿಯನ್ನ ಜೇಕಬ್ ವರ್ಗೀಸ್ ಅವರಿಗೆ ನೀಡಲಾಗಿತ್ತು. ನಾಲ್ಕು ವರ್ಷಗಳ ಅವಧಿಗೆ ಕ್ರೀಡಾಪಟುಗಳು ಭಾಗವಹಿಸುವ ಎಲ್ಲಾ ಕ್ರೀಡಾಕೂಟಗಳ ಚಿತ್ರೀಕರಣದ ಕಾಪಿರೈಟ್ಸ್ ಹಾಗೂ ವೆಚ್ಚವನ್ನು ಭರಿಸುವುದಾಗಿ ೨೦೨೦ರ ನವೆಂಬರ್‌ನಲ್ಲಿ ಸ್ಕೂಲ್ ಸ್ಪೋರ್ಟ್ಸ್ ಫೌಂಡೇಶನ್ ಸಂಸ್ಥೆಯು ಜೇಕಬ್ ವರ್ಗೀಸ್ ನಡುವೆ ಒಪ್ಪಂದ ಮಾಡಿಕೊಂಡಿತ್ತು. ಅದರಂತೆ ಚಿತ್ರೀಕರಣದ ಖರ್ಚ್ಚು ಈ ಸಂಸ್ಥೆಯಿಂದ ಭರಿಸಲಾಗಿತ್ತು. ಆದರೆ ಚಿತ್ರೀಕರಣದ ನಂತರ ಕಾಪಿರೈಟ್ಸ್ ವರ್ಗಾಯಿಸದೇ ದೆಹಲಿಯ ಅಲಯನ್ಸ್ ಪ್ರಾಂಕೋಯಿಸ್‌ನಲ್ಲಿ ಪ್ರಸಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ೨೦೨೦-೨೧ನೇ ಸಾಲಿನಲ್ಲಿ ತಾನೇ ಸಾಕ್ಷ್ಯಚಿತ್ರದ ಕಾಪಿರೈಟ್ಸ್ ಮಾಲೀಕ ಎಂದು ಆಸ್ಕರ್ ಅಕಾಡೆಮಿ ಅವಾರ್ಡ್ಸ್ ಪ್ರತಿನಿಧಿಗಳೊಂದಿಗೆ ಸಂವಹನ ನಡೆಸಿದ್ದಾರೆ.

೨೦೨೨ ರಲ್ಲಿ ನಡೆದ ಆಯುಷ್ಮಾನ್ ಚಲನಚಿತ್ರ ಪ್ರಶಸ್ತಿಗೆ ಆಯ್ಕೆ ಮಾಡಿಸಿ ಕಾಪಿರೈಟ್ ಉಲ್ಲಂಘನೆ ಮಾಡಿದ್ದಾರೆ. ನಂತರ ತಾವೇ ಈ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಎಂದು ಹೇಳಿಕೊಂಡು ೨೦೨೨ರ ನವೆಂಬರ್‌ನಲ್ಲಿ ಗೋವಾದಲ್ಲಿ ನಡೆದ ಅಂತರಾಷ್ಟ್ರೀಯ ಫಿಲ್ಮ ಫೆಸ್ಟಿವಲ್‌ನಲ್ಲಿ ಸಾಕ್ಷ್ಯಚಿತ್ರವನ್ನು ಪ್ರದರ್ಶನ ಮಾಡಿದ್ದಾರೆ. ಸಂಸ್ಥೆಯು ಜೇಕಬ್ ವರ್ಗೀಸ್, ದಿನೇಶ್ ರಾಜ್ಕುಮಾರ್ ಅವರಿಗೆ ಯಾವುದೇ ಅಧಿಕಾರವನ್ನು ನೀಡದಿದ್ದರೂ ಸಹ ಸಾಕ್ಷ್ಯಚಿತ್ರವನ್ನು ಬಳಸಿಕೊಂಡು ಪ್ರಶಸ್ತಿ ಹಾಗೂ ಮನ್ನಣೆ ಗಳಿಸಿದ್ದಾರೆ. ಮತ್ತೊಬ್ಬ ಆರೋಪಿ ಮ್ಯಾಥ್ಯೂ ವರ್ಗೀಸ್ ಎಂಬುವರು ಸಂಸ್ಥೆಯ ಸಾಕ್ಷ್ಯ ಚಿತ್ರದ ವಿಡಿಯೋ ಮತ್ತು ಆಡಿಯೋವನ್ನು ಹಿಂತಿರುಗಿಸಲು ನಿರಾಕರಿಸಿ ಉದ್ದೇಶ ಪೂರ್ವಕವಾಗಿ ಸಾಕ್ಷ್ಯ ಚಿತ್ರದ ಕಾಪಿ ರೈಟ್‌ನ ವಿಡೀಯೋವನ್ನು ಚಿರುಚಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ಎನ್‌ಜಿಇ ಸಂಸ್ಥೆಗೆ ಆರ್ಥಿಕ ನಷ್ಟ ಮತ್ತು ಗೌರವಕ್ಕೆ ಧಕ್ಕೆಯುಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.