ತೀರ್ಥಹಳ್ಳಿ: ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಸಿದ ಆರೋಪದ ಮೇಲೆ ಗ್ರಾಪಂ ಸದಸ್ಯ ಸಿದ್ದಾರ್ಥ ಎಂಬುವವರ ಮೇಲೆ ಅರಣ್ಯಾಧಿಕಾರಿಗಳು ದೂರು ದಾಖಲಿಸಿದ್ದನ್ನು ಖಂಡಿಸಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದಲ್ಲಿ ಮೇಗರವಳ್ಳಿ ಅರಣ್ಯ ಇಲಾಖೆ ಕಚೇರಿ ಎದುರು ಬಿಜೆಪಿ ಪ್ರಮುಖರು ಸೋಮವಾರ ಧರಣಿ ನಡೆಸಿದರು.
ಅರೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೇ ನಂ.72ರಲ್ಲಿ ಗ್ರಾಪಂ ನಿರ್ಣಯದಂತೆ ಹಿಂದಿನಿಂದಲೂ ಇದ್ದ ರಸ್ತೆಯಲ್ಲಿ ಮೋರಿಗೆ ಪೈಪ್ ಅಳವಡಿಸಿ ಸುಮಾರು 150 ಮೀ. ರಸ್ತೆ ರಿಪೇರಿ ಮಾಡಲಾಗಿತ್ತು. ಈ ಕಾರ್ಯಕ್ಕೆ ಸಂಬಂಧಿಸಿ ಕಾಂಗ್ರೆಸ್ ಪ್ರಮುಖರ ಚಿತಾವಣೆಯಿಂದ ಆ ಭಾಗದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ಸಿದ್ದಾರ್ಥ ಎಂಬುವವರ ದೂರು ದಾಖಲಿಸಲಾಗಿದೆ ಎಂದು ಆರೋಪಿಸಿ ಗ್ರಾಪಂ ಒಕ್ಕೂಟ ಸೇರಿ ಬಿಜೆಪಿ ಪ್ರಮುಖರು ಧರಣಿ ನಡೆಸಿದರು.
ಸ್ಥಳಕ್ಕೆ ಡಿಸಿಎ್ ಶಿವಶಂಕರ್ ಆಗಮಿಸಿ ಒಂದು ವಾರದಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದಲ್ಲದೆ, ದೂರನ್ನು ಹಿಂಪಡೆಯುವ ಭರವಸೆ ನೀಡಿದ ಮೇರೆಗೆ ಧರಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವುದಾಗಿ ಶಾಸಕರು ತಿಳಿಸಿದರು. ಅರಣ್ಯ ಇಲಾಖೆಯ ಮುಂದಿನ ಕ್ರಮವನ್ನು ಆಧರಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಸಿಎ್ ಮಧುಸೂದನ್ ಉಪಸ್ಥಿತರಿದ್ದರು.
ಬಿಜೆಪಿ ಮಂಡಲ ಅಧ್ಯಕ್ಷ ಹೆದ್ದೂರು ನವೀನ್, ಗ್ರಾಪಂ ಒಕ್ಕೂಟದ ಅಧ್ಯಕ್ಷ ಅನಿಲ್, ಚಂದವಳ್ಳಿ ಸೋಮಶೇಖರ್, ಪ್ರಶಾಂತ್ ಕುಕ್ಕೆ, ಚಕ್ಕೋಡಬೈಲು ರಾಘವೇಂದ್ರ, ಹಸಿರುಮನೆ ನಂದನ್, ಮೋಹನ್ ಭಟ್, ರಕ್ಷಿತ್ ಮೇಗರವಳ್ಳಿ ಇದ್ದರು.