ನ್ಯೂಸ್

ಉದ್ಯಮಿ ಅಪಹರಿಸಿದ 8 ಮಂದಿ ವಿರುದ್ಧ ದೂರು ದಾಖಲು

ಬೆಂಗಳೂರು: ವಂಚನೆ ಕುರಿತು ಪೊಲೀಸರಿಗೆ ದೂರು ನೀಡಿದಕ್ಕೆ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಅಪಹರಿಸಿ ಕಿರುಕುಳ ನೀಡಿದ್ದ ೮ ಮಂದಿ ವಿರುದ್ಧ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಕೆಂಗೇರಿ ಉಪನಗರ ನಿವಾಸಿ ಉದ್ಯಮಿ ಅಶೋಕ್ ಶಿವರಾಜ್ ಗೋನಿ ಎಂಬುವರು ನೀಡಿದ ದೂರಿನ ಮೇರೆಗೆ ವೀರೇಶ್ ಸೈದು, ರಶ್ಮಿ, ಕೃಷ್ಣಪ್ಪ, ರಾಜಶೇಖರ್, ಕಾರ್ತಿಕ್, ರಘು ಸೇರಿ ಎಂಟು ಮಂದಿ ವಿರುದ್ಧ ಜ್ಞಾನಭಾರತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ದೂರುದಾರ ಅಶೋಕ್ ಶಿವರಾಜ್‌ನನ್ನು ಜ. ೧೨ ರಂದು ಜ್ಞಾನಭಾರತಿ ಸಮುದಾಯ ಭವನದ ಬಳಿ ಅಪಹರಿಸಿದ್ದರು. ಹಲವು ವರ್ಷಗಳಿಂದ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅಶೋಕ್ ಶಿವರಾಜ್‌ಗೆ ಸೇರಿದ ಆಸ್ತಿ ಕಬಳಿಸುವ ಉದ್ದೇಶದಿಂದ ಆರೋಪಿಗಳು, ಕಳೆದ ೧ ವರ್ಷದಿಂದ ದೂರುದಾರರನ್ನು ಗೃಹ ಬಂಧನದಲ್ಲಿಟ್ಟು, ಫ್ಲಾೃಟ್ ಸೇರಿ ಎಲ್ಲಾ ಆಸ್ತಿಯನ್ನು ಅಕ್ರಮವಾಗಿ ಕಬಳಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳ ಬಂಧನದಿಂದ ತಪ್ಪಿಸಿಕೊಂಡು ಬಂದ ಅಶೋಕ್ ಪೊಲೀಸರಿಗೆ ದೂರು ನೀಡಿದ್ದರು. ಅದರಿಂದ ಸಿಟ್ಟಿಗೆದ್ದ ಆರೋಪಿಗಳು ಮತ್ತೆ ಅಶೋಕ್ ಶಿವರಾಜ್ ಅವರನ್ನು ಅಪಹರಿಸಿ ಹಲ್ಲೆ ಮಾಡಿ ಬಳಿಕ ಬಿಟ್ಟು ಕಳುಹಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.