ನವದೆಹಲಿ: ಲೋಕಸಭಾ ಸದಸ್ಯ ಸ್ಥಾನದಿಂದ ತಮ್ಮನ್ನು ಅನರ್ಹಗೊಳಸಿದರ ಬಗ್ಗೆ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಾನು ಯಾವುದೇ ಬೆಲೆ ತರಲು ಸಿದ್ಧ ಎಂಬ ಮಾತುಗಳನ್ನಾಡಿದ್ದಾರೆ.
2019ರ ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿ ಅವರನ್ನು ಸೂರತ್ ನ್ಯಾಯಾಲಯ ದೋಷಿ ಎಂದು ತೀರ್ಪು ಪ್ರಕಟಿಸಿದ ದಿನದ ಬೆನ್ನಲ್ಲೇ ರಾಹುಲ್ ಅವರನ್ನು ಲೋಕಸಭಾ ಸದಸ್ಯ ಸ್ಥಾನದಿಂದ ಅನರ್ಹಗೊಳಿಸಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಾಹುಲ್, ನಾನು ಭಾರತೀಯರ ಧ್ವನಿಗಾಗಿ ಹೋರಾಡುತ್ತಿದ್ದೇನೆ. ಇದಕ್ಕಾಗಿ ನಾನು ಯಾವುದೇ ಬೆಲೆ ತರಲು ಸಿದ್ಧ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಕೇರಳದ ವಯನಾಡು ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರು 2019ರ ಮಾನಹಾನಿ ಪ್ರಕರಣದಲ್ಲಿ 2023ರ ಮಾರ್ಚ್ 23ರಂದು ದೋಷಿ ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಭಾರತದ ಸಂವಿಧಾನದ ಪ್ರಜಾಪ್ರತಿನಿಧಿ ಕಾಯಿದೆ 1951 ಸೆಕ್ಷನ್ 8ರ ಆರ್ಟಿಕಲ್ 102(1)(e) ಅಡಿಯಲ್ಲಿ ರಾಹುಲ್ ಗಾಂಧಿ ಅವರನ್ನು ಲೋಕಸಭಾ ಸ್ಥಾನದಿಂದ ಅನರ್ಹಗೊಳಿಸಲಾಗಿದೆ ಎಂದು ಲೋಕಸಭೆಯ ಕಾರ್ಯದರ್ಶಿ ನೋಟಿಫಿಕೇಶನ್ ಹೊರಡಿಸಿದ್ದಾರೆ.
ಅನರ್ಹಗೊಳಿಸಿರುವುದರಿಂದ ಕೇರಳದ ವಯನಾಡು ಕ್ಷೇತ್ರ ಇದೀಗ ಖಾಲಿ ಉಳಿದಿದೆ. ಚುನಾವಣಾ ಆಯೋಗ ವಿಶೇಷ ಚುನಾವಣೆಯನ್ನು ನಡೆಸಲಿದೆ. ದೆಹಲಿಯಲ್ಲಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ರಾಹುಲ್ ಗಾಂಧಿಗೆ ಒಂದು ತಿಂಗಳ ಕಾಲಾವಕಾಶ ಸಿಗಲಿದೆ.
ಈ ನಿರ್ಧಾರದ ಹಿಂದೆ ಕುತಂತ್ರ ಅಡಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಸರ್ಕಾರಕ್ಕೆ ಕಠಿಣ ಪ್ರಶ್ನೆಗಳ ಮೂಲಕ ರಾಹುಲ್ ಕಠಿಣ ಸವಾಲಾಗಿದ್ದರು. ಅವರ ಬಾಯಿ ಮುಚ್ಚಿಸಲು ಕೇಂದ್ರ ಸರ್ಕಾರ ಈ ನಡೆ ಅನುಸರಿಸಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದರೆ, ರಾಹುಲ್ ಅವರನ್ನು ಅನರ್ಹಗೊಳಿಸಿರುವುದು ಕಾನೂನುಬದ್ಧ ಎಂದು ಬಿಜೆಪಿ ಸಮರ್ಥನೆ ನೀಡಿದೆ. ನ್ಯಾಯಾಲಯ ಸ್ವತಂತ್ರವಾಗಿದ್ದು, ಅವರ (ರಾಹುಲ್ ಗಾಂಧಿ) ಹೇಳಿಕೆ ಮೇಲೆ ಕೋರ್ಟ್ ತೀರ್ಪು ನೀಡಿದೆ ಎಂದು ಬಿಜೆಪಿ ಹೇಳಿದೆ.
ಲೋಕಸಭಾ ಕಾರ್ಯದರ್ಶಿಯ ನೋಟಿಫಿಕೇಶನ್ಗೆ ಕಾಂಗ್ರೆಸ್ನ ಹಿರಿಯ ನಾಯಕ ಮನೀಶ್ ತಿವಾರಿ ಅವರು ಪ್ರತಿಕ್ರಿಯೆ ನೀಡಿದ್ದು, ಅನರ್ಹಗೊಳಿಸಿರುವುದು ತಪ್ಪಾದ ನಿರ್ಧಾರ ಎಂದಿದ್ದಾರೆ. ಓರ್ವ ಸಂಸದನನ್ನು ಲೋಕಸಭಾ ಕಾರ್ಯದರ್ಶಿ ಅನರ್ಹಗೊಳಿಸುವಂತಿಲ್ಲ. ಚುನಾವಣಾ ಆಯೋಗದ ಸಮಾಲೋಚನೆಯೊಂದಿಗೆ ರಾಷ್ಟ್ರಪತಿಗಳು ಈ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಹೇಳಿದ್ದಾರೆ.
ನಿನ್ನೆ (ಮಾ. 23) ಸೂರತ್ ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ರಾಹುಲ್ ಗಾಂಧಿ 30 ದಿನಗಳ ವರೆಗೆ ಜಾಮೀನು ಪಡೆದುಕೊಂಡಿದ್ದು, ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಐಪಿಸಿ ಸೆಕ್ಷನ್ 504ರ ಅಡಿಯಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಲಾಗಿದ್ದು, ಈ ಸೆಕ್ಷನ್ ಅಡಿಯಲ್ಲಿ ಗರಿಷ್ಠ ಸಂಭವನೀಯ ಶಿಕ್ಷೆ ಎರಡು ವರ್ಷಗಳಾಗಿದೆ. ಇದೀಗ ಜಾಮೀನು ಪಡೆದಿರುವುದರಿಂದ ಸದ್ಯಕ್ಕೆ ರಾಹುಲ್ ಅವರು ಜೈಲು ಶಿಕ್ಷೆಯಿಂದ ಪಾರಾಗಿದ್ದಾರೆ.
ಏನಿದು ಪ್ರಕರಣ?
2019ರ ಲೋಕಸಭೆ ಚುನಾವಣೆ ವೇಳೆ ಭಾಷಣ ಮಾಡ್ತಿದ್ದ ರಾಹುಲ್ ಗಾಂಧಿ, ಮೋದಿ ಎಂಬ ಉಪನಾಮ ಹೊಂದಿರುವವರೆಲ್ಲರೂ ಕಳ್ಳರು ಎಂಬ ಹೇಳಿಕೆ ನೀಡಿದ್ದರು. ನೀರವ್ ಮೋದಿ, ಲಲಿತ್ ಮೋದಿ, ನರೇಂದ್ರ ಮೋದಿ ಈ ಹೆಸರು ಹೊಂದಿರುವವರನ್ನು ಉಲ್ಲೇಖಿಸಿದ್ದ ಅವರು, ಎಲ್ಲ ಮೋದಿಗಳೂ ಕಳ್ಳರು. ಮೋದಿ ಉಪನಾಮ ಹೊಂದಿರುವವರು ಕಳ್ಳರಾಗಲು ಹೇಗೆ ಸಾಧ್ಯ ಎಂದು ವ್ಯಂಗ್ಯವಾಡಿದ್ದರು.
ರಾಹುಲ್ ಹೇಳಿಕೆಯಿಂದ ಸಿಟ್ಟಿಗೆದ್ದಿದ್ದ ಬಿಜೆಪಿ ಶಾಸಕ ಪೂರ್ಣೇಶ್ ಮೋದಿ, ದೂರು ದಾಖಲು ಮಾಡಿದ್ದರು. 2019ರ ಏಪ್ರಿಲ್ ತಿಂಗಳಲ್ಲಿ ರಾಹುಲ್ ಗಾಂಧಿ ವಿರುದ್ಧ ಐಪಿಸಿ ಸೆಕ್ಷನ್ 499 ಮತ್ತು 500ರ ಅಡಿ ಮಾನಹಾನಿ ಪ್ರಕರಣ ದಾಖಲಾಗಿತ್ತು. ಇದೀಗ ಈ ಪ್ರಕರಣದಲ್ಲಿ ನ್ಯಾಯಾಲಯ ರಾಹುಲ್ ಅವರನ್ನು ದೋಷಿ ಎಂದು ತೀರ್ಪು ನೀಡಿದೆ. (ಏಜೆನ್ಸೀಸ್)