ಮುಂಬೈ: ಬಾಲಿವುಡ್ನ ಸ್ಟಾರ್ ನಟ ಹೃತಿಕ್ ರೋಷನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯಲ್ಲಿರುವ ಬಹುನಿರೀಕ್ಷಿತ 'ಫೈಟರ್' ಚಿತ್ರವು ತೆರೆಗೆ ಬರಲು ಸಜ್ಜಾಗಿದ್ದು, ಇದೀಗ ಸಿನಿಮಾ 3D ಫಾರ್ಮೆಟ್ನಲ್ಲಿ ರಿಲೀಸ್ ಆಗುವ ಕುರಿತಂತೆ ಹೊಸ ಮಾಹಿತಿಯೊಂದು ಲಭಿಸಿದೆ.
ಸಿದ್ಧಾರ್ಥ್ ಆನಂದ್ ನಿರ್ದೇಶನದ 'ಫೈಟರ್' 2024ರ ಜನವರಿ 25 ರಂದು ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲಿದ್ದು, ಸಿನಿಮಾ ಭಾರತದ ಮೊದಲ ವೈಮಾನಿಕ ಸಾಹಸ ನಾಟಕ ಎಂದು ಹೇಳಲಾಗಿದೆ. ಇತ್ತೀಚೆಗಷ್ಟೇ ಬಿಡುಗಡೆಗೊಂಡಿರುವ ಹೃತಿಕ್ ಅವರ ಕ್ಯಾರೆಕ್ಟರ್ ಪೋಸ್ಟರ್ ನೋಡಿ ಫಿದಾ ಆಗಿರುವ ಅವರ ಅಭಿಮಾನಿಗಳು, 3ಡಿ ಫಾರ್ಮೆಟ್ ರಿಲೀಸ್ ಸುದ್ದಿ ಕೇಳಿ ತೀವ್ರ ಕುತೂಹಲ ವ್ಯಕ್ತಪಡಿಸಿದ್ದಾರೆ.
'ಫೈಟರ್' ಸಿನಿಮಾ 3D/IMAX 3D ಫಾರ್ಮೆಟ್ನಲ್ಲಿ ಬಿಡುಗಡೆಯಾಗಲಿದೆ ಎಂಬ ವದಂತಿಗಳು ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಚರ್ಚೆಗೆ ಗ್ರಾಸವಾಗಿದೆ. ಆದ್ರೆ, ಈ ಕುರಿತಂತೆ ಇಲ್ಲಿಯವರೆಗೆ ಚಿತ್ರತಂಡ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ ಎಂಬುದು ಗಮನಾರ್ಹ. ಶೀಘ್ರವೇ ಚಿತ್ರದ ಟೀಸರ್ ಬಿಡುಗಡೆಗೊಳ್ಳಲಿದೆ ಎಂಬ ನಿರೀಕ್ಷೆಗಳು ಹೆಚ್ಚಿವೆ.
ಚಿತ್ರದಲ್ಲಿ ಹೃತಿಕ್ ರೋಷನ್, ದೀಪಿಕಾ ಪಡುಕೋಣೆ, ಅನಿಲ್ ಕಪೂರ್, ಕರಣ್ ಸಿಂಗ್ ಗ್ರೋವರ್, ಅಕ್ಷಯ್ ಒಬೆರಾಯ್, ಸಂಜೀದಾ ಶೇಖ್, ತಲತ್ ಅಜೀಜ್ ಮುಂತಾದವರ ತಾರಾ ಬಳಗವಿದೆ. ವೈಯಾಕಾಮ್ ಸ್ಟುಡಿಯೋಸ್ ಮತ್ತು ಮಾರ್ಫ್ಲಿಕ್ಸ್ ಫಿಕ್ಚರ್ಸ್ ಜಂಟಿಯಾಗಿ ನಿರ್ಮಿಸಿದ್ದು, ಚಿತ್ರಕ್ಕೆ ವಿಶಾಲ್ ಮತ್ತು ಶೇಖರ್ ಸಂಗೀತ ಸಂಯೋಜನೆ ಮಾಡಿದ್ದಾರೆ,(ಏಜೆನ್ಸೀಸ್).