ನ್ಯೂಸ್

ರೈಲಿನ ಎಸಿ ಕೋಚ್​ನಲ್ಲಿ ಬೆಡ್​ಶೀಟ್​ಗಾಗಿ ಗಲಾಟೆ; ಸೈನಿಕನನ್ನು ಚಾಕುವಿನಿಂದ ಇರಿದು ಕೊಂದ ಕೋಚ್ ಅಟೆಂಡೆಂಟ್| Murder

ಜೈಪುರ: ರಾಜಸ್ಥಾನದಲ್ಲಿ ಚಲಿಸುವ ರೈಲಿನಲ್ಲಿ ಎಸಿ ಕೋಚ್​ನಲ್ಲಿ ಕಂಬಳಿ, ಬೆಡ್​ಶೀಟ್ ವಿಚಾರವಾಗಿ ಕೋಚ್ ಅಟೆಂಡೆಂಟ್ ಮತ್ತು ಸೈನಿಕರೊಬ್ಬರ ನಡುವೆ ತೀವ್ರ ಗಲಾಟೆ ನಡೆದಿದ್ದು, ಘಟನೆಯಲ್ಲಿ ಅಟೆಂಡೆಂಟ್​ಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ(Murder) ಎಂದು ವರದಿಯಾಗಿದೆ.

 ನ. 02ರಂದು ಪಂಜಾಬ್‌ನ ಫಿರೋಜ್‌ಪುರ ನಿಲ್ದಾಣದಿಂದ ತೆರಳಿದ್ದ 19224ರ ಜಮ್ಮು ತಾವಿ - ಸಬರಮತಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್​ನಲ್ಲಿ ಈ ಘಟನೆ ನಡೆದಿದೆ. ಮೃತ ಸೈನಿಕನನ್ನು ಜಿಗರ್ ಚೌಧರಿ ಎಂದು ಗುರುತಿಸಲಾಗಿದೆ. ಆರೋಪಿ ಕೋಚ್ ಅಟೆಂಡೆಂಟ್ ಜುಬೈರ್ ಮೆಮನ್​ನನ್ನು ಬಂಧಿಸಲಾಗಿದೆ ಎಂದು ವರದಿಗಳು ಉಲ್ಲೇಖಿಸಿವೆ.

ಈ ಕುರಿತು ಮಾಹಿತಿ ನೀಡಿರುವ ರೈಲ್ವೆ ಇಲಾಖೆ, ಭಾರತೀಯ ಸೇನಾ ಸಿಬ್ಬಂದಿ ಜಿಗರ್ ಚೌಧರಿ ಕೆಲವು ದಿನಗಳ ರಜೆ ತೆಗೆದುಕೊಂಡು ಗುಜರಾತ್‌ನ ಸಬರಮತಿಯಲ್ಲಿರುವ ತಮ್ಮ ಮನೆಗೆ ಪ್ರಯಾಣಿಸುತ್ತಿದ್ದರು. ನ. 02ರ ರಾತ್ರಿ, ಅವರು ಪಂಜಾಬ್‌ನ ಫಿರೋಜ್‌ಪುರ ನಿಲ್ದಾಣದಿಂದ 19224 ರ ಜಮ್ಮು ತಾವಿ - ಸಬರಮತಿ ಎಕ್ಸ್‌ಪ್ರೆಸ್‌ನ ಸ್ಲೀಪರ್ ಕೋಚ್ ಅನ್ನು ಹತ್ತಿದ್ದರು. ಪ್ರಯಾಣದ ಸಮಯದಲ್ಲಿ B4 AC ಕೋಚ್‌ನ ಸಹಾಯಕರಿಂದ ಕಂಬಳಿ ಮತ್ತು ಹಾಳೆಯನ್ನು ಕೇಳಿದರು. ನಿಯಮಗಳ ಪ್ರಕಾರ ಒಂದನ್ನು ಒದಗಿಸಲು ಅಟೆಂಡೆಂಟ್ ನಿರಾಕರಿಸಿದ್ದು, ಇಬ್ಬರ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.

ಮಾತಿನ ಚಕಮಕಿ ಬೆನ್ನಲ್ಲೇ ದೈಹಿಕವಾಗಿ ಹೊಡೆದಾಡಿಕೊಂಡಿದ್ದು, ಈ ವೇಳೆ ಅಟೆಂಡೆಂಟ್ ಚೌಧರಿಯ ಕಾಲಿಗೆ ಇರಿದ ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರೈಲು ಬಿಕಾನೆರ್ ತಲುಪಿದ ಬಳಿಕ ರೈಲ್ವೆ ಪೊಲೀಸರಿಗೆ ಟಿಟಿಇ ದೂರು ನೀಡಿ, ಎಫ್​ಐಆರ್ ದಾಖಲಿಸಿದ್ದಾರೆ. ಬಿಎನ್​ಎಸ್​ ಸೆಕ್ಷನ್ 103(1) ಅಡಿಯಲ್ಲಿ ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿದ್ದು, ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಹೇಳಿದೆ.

ಇನ್ನೂ ಘಟನೆ ಬಗ್ಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ, ಸರ್ಕಾರೇತರ ಸಂಸ್ಥೆಯಾದ ಸಹ್ಯಾದ್ರಿ ರೈಟ್ಸ್ ಫೋರಂನ ದೂರಿನ ಮೇರೆಗೆ, NHRC ರೈಲ್ವೆ ಮಂಡಳಿಯ ಅಧ್ಯಕ್ಷರು ಮತ್ತು ರೈಲ್ವೆ ರಕ್ಷಣಾ ಪಡೆ (RPF) ಮಹಾನಿರ್ದೇಶಕರಿಗೆ ನೋಟಿಸ್ ಜಾರಿ ಮಾಡಿದೆ.

ದೂರಿನಲ್ಲಿರುವ ಆರೋಪಗಳು ಮಾನವ ಹಕ್ಕುಗಳ ಗಂಭೀರ ಉಲ್ಲಂಘನೆಯನ್ನು ಸೂಚಿಸುತ್ತವೆ. ಆರೋಪಿ ಕೋಚ್ ಅಟೆಂಡೆಂಟ್ ನೇಮಕಾತಿ ಪ್ರಕ್ರಿಯೆ, ಅರ್ಹತೆಗಳು, ತರಬೇತಿ ಮತ್ತು ಪೊಲೀಸ್ ಪರಿಶೀಲನೆಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ನೀಡುವಂತೆ ಸೂಚಿಸಿದೆ. ಎರಡೂ ವಾರಗಳಲ್ಲಿ ವರದಿ ನೀಡುವಂತೆ ನಿರ್ದೇಶಿಸಿದೆ. (ಏಜೆನ್ಸೀಸ್)