ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಹಳೇ ವೈಷಮ್ಯದಿಂದ ಎರಡು ಗುಂಪುಗಳ ನಡುವೆ ಮಾರಮಾರಿ ನಡೆದಿದ್ದು, ಜೈಲು ಅಧಿಕಾರಿಗಳು ಲಾಠಿ ಪ್ರಹಾರ ನಡೆಸಿ ಹತೋಟಿಗೆ ತಂದಿದ್ದಾರೆ. ಇದರಿಂದ ಏಳು ವಿಚಾರಣಾಧೀನ ಕೈದಿಗಳು ಗಾಯಗೊಂಡಿದ್ದಾರೆ.
ಈ ಸಂಬಂಧ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಡಾ. ಮಲ್ಲಿಕಾರ್ಜುನ್, ಪರಪ್ಪನ ಅಗ್ರಹಾರ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಮೇರೆಗೆ ವಿಚಾರಣಾಧೀನ ಕೈದಿಗಳಾದ ವಿಶ್ವನಾಥ್, ಮುನಿರಾಜು, ಜಾರ್ ಸಾಧಿಕ್, ವಿಶಾಲ್ ಗೌಡ್, ಟಿಪ್ಪು ಸುಲ್ತಾನ್, ಸೆಂದಿಲ್ ಕುಮಾರ್, ಅಜಯ್ ಸಿಂಗ್, ಕುಮಾರ್ ಮತ್ತು ಇರ್ಷಾದ್ ಪಾಷಾ ಎಂಬುವರ ವಿರುದ್ಧ ಎ್ಐಆರ್ ದಾಖಲಿಸಲಾಗಿದೆ. ಆರೋಪಿಗಳ ದಾಳಿಯಿಂದ ಏಳು ವಿಚಾರಣಾಧೀನ ಕೈದಿಗಳಿಗೆ ಸಣ್ಣಪುಟ್ಟ ಗಾಯವಾಗಿದ್ದು, ಜೈಲು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ಸಂಜೆ 6.30ರಲ್ಲಿ ಜೈಲಿನ ಬ್ಯಾರಕ್ 3 ಮತ್ತು 4ರ ಮುಂಭಾಗದಲ್ಲಿ ನಿಂತಿದ್ದ ಆರೋಪಿಗಳು, ಹಳೇ ದ್ವೇಷದ ಹಿನ್ನೆಲೆ ಏಕಾಏಕಿ ಎದುರಾಳಿ ಕೈದಿಗಳ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ವಿಷಯ ತಿಳಿದ ಜೈಲು ಅಧಿಕಾರಿ, ಸಿಬ್ಬಂದಿ ಸ್ಥಳಕ್ಕೆ ಹೋಗಿ ಎಚ್ಚರಿಕೆ ಕೊಟ್ಟರೂ ಜಗಳ ಶಾಂತವಾಗಿಲ್ಲ.
ಕೊನೆಗೆ ಲಾಠಿ ಪ್ರಹಾರ ಮಾಡಿ ಎರಡು ಗುಂಪುಗಳನ್ನು ಬೇರ್ಪಡಿಸಿದ್ದಾರೆ. ಗಾಯಾಳುಗಳನ್ನು ಜೈಲು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಜೈಲು ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.