ಬೆಂಗಳೂರು: ರಾಜಧಾನಿಯ ಜನರು ದೀಪ ಹಚ್ಚುತ್ತಿರುವಾಗ ಕಾಂಗ್ರೆಸ್ ಸರ್ಕಾರ ಬಿ ಖಾತಾವನ್ನು ಎ ಖಾತಾಗೆ ಪರಿವರ್ತಿಸಲು ಮಾರ್ಗಸೂಚಿ ಮೌಲ್ಯದ ಶೇಕಡ 5ರಷ್ಟು ಶುಲ್ಕ ವಿಧಿಸಿ, ಮಧ್ಯಮ ವರ್ಗಕ್ಕೆ ಬರೆ ಹಾಕುತ್ತಿದೆ ಎಂದು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಟೀಕಿಸಿದ್ದಾರೆ.
ರಾಜ್ಯ ಸರ್ಕಾರದಿಂದ ಬೆಂಗಳೂರು ನಾಗರಿಕರಿಗೆ ದಿ ಗ್ರೇಟ್ ದೀಪಾವಳಿ ಆರ್. ರೂ 45 ಸಾವಿರ ಕೋಟಿ ರೂ. ಕಟಾ ಕಟ್ ಲೂಟಿ !. ಬಿ ಖಾತಾದಿಂದ ಎ ಖಾತಾ ಜನರಿಗೆ ಲಕ್ಷ ಲಕ್ಷ ಖೋತಾ ಎಂಬ ಸಂದೇಶವನ್ನು ಸಾಮಾಜಿಕ ಜಾಲತಾಣದ ತಮ್ಮ ಖಾತೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಂಚಿಕೊಂಡಿದ್ದಾರೆ.
ಪ್ರತಿಯೊಬ್ಬ ಬಿ ಖಾತಾ ಹೊಂದಿರುವವರ ಪರವಾಗಿ ಜೆಡಿಎಸ್ ಹೋರಾಡಲಿದೆ. ಪ್ರಜಾಸತ್ತಾತ್ಮಕ ಚಳವಳಿ ಜತೆಗೆ ನ್ಯಾಯಾಲಯದಲ್ಲಿ ನ್ಯಾಯಕ್ಕಾಗಿ ಹೋರಾಡುತ್ತೇವೆ. ಕಾಂಗ್ರೆಸ್‌ನ ಲೂಟಿಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ.
ಉಪನೋಂದಣಾಧಿಕಾರಿ ಕಚೇರಿ ಮಾರ್ಗಸೂಚಿ ದರ ಪ್ರತಿ ಚದರಡಿಗೆ ಐದು ಸಾವಿರ ರೂ., ಪ್ರಕಾರ 1,200 ಚದರಡಿ ವಿಸ್ತೀರ್ಣದ ನಿವೇಶನ ದರ 60 ಲಕ್ಷ ರೂ., ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಶುಲ್ಕ ಮೂರು ಲಕ್ಷ ರೂ.
ಸಬ್‌ರಿಜಿಸ್ಟ್ರಾರ್ ಮಾರ್ಗಸೂಚಿ ದರ ಪ್ರತಿ ಚದರಡಿಗೆ 10 ಸಾವಿರ ರೂ., 1200 ಚದರಡಿ ವಿಸ್ತೀರ್ಣದ ನಿವೇಶನ ಮೌಲ್ಯ 1.2 ಕೋಟಿ ರೂ. ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಶುಲ್ಕ ಆರು ಲಕ್ಷ ರೂ.
ಸಬ್‌ರಿಜಿಸ್ಟ್ರಾರ್ ಮಾರ್ಗಸೂಚಿ ದರ ಪ್ರತಿ ಚದರಡಿಗೆ 15 ಸಾವಿರ ರೂ., 1,200 ಚದರಡಿ ವಿಸ್ತೀರ್ಣದ ನಿವೇಶನ ದರ 1.8 ಕೋಟಿ ರೂ., ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಶುಲ್ಕ ಒಂಬತ್ತು ಲಕ್ಷ ರೂ.
ಸಬ್‌ರಿಜಿಸ್ಟ್ರಾರ್ ಮಾರ್ಗಸೂಚಿ ದರ ಪ್ರತಿಚದರಡಿಗೆ 20 ಸಾವಿರ ರೂ., 1,200 ಚದರಡಿ ವಿಸ್ತೀರ್ಣದ ನಿವೇಶನ ದರ 2.4 ಕೋಟಿ ರೂ., ಬಿ ಖಾತಾದಿಂದ ಎ ಖಾತಾಗೆ ಪರಿವರ್ತನೆ ಶುಲ್ಕ 12 ಲಕ್ಷ ರೂ.
ಪರಿವರ್ತನೆ ಶುಲ್ಕ ಜನರ ಪಾಲಿಗೆ ಅದೆಷ್ಟು ಹೊರೆಯಾಗಲಿದೆ ಎಂದು ಈ ಲೆಕ್ಕಾಚಾರ ಸಹಿತ ವಿವರಿಸಿರುವ ನಿಖಿಲ್ ಕುಮಾರಸ್ವಾಮಿ, ಇನ್ನಷ್ಟು ವಿವರಗಳನ್ನು ಗುರುವಾರ ಜನರ ಮುಂದಿಡುವೆ ಎಂದು ಹೇಳಿದ್ದಾರೆ.