ಚಿಕ್ಕಮಗಳೂರು: ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ನಡೆಸುವಲ್ಲಿ ಸರ್ಕಾರಗಳು ವಿಫಲವಾಗಿದ್ದು, ಇದರ ವಿರುದ್ಧ ನಿರಂತರ ಹೋರಾಟ ನಡೆಸಲಾಗುವುದು ಎಂದು ಎಎಪಿ ಮಾಧ್ಯಮ ಉಸ್ತುವಾರಿ ಡಾ. ಸುಂದರ್ ಗೌಡ ಹೇಳಿದರು.
ಸರ್ಕಾರಗಳು ಭ್ರಷ್ಟಾಚಾರ ಎಸಗುವ ಮೂಲಕ ಜನರನ್ನು ಗಂಭೀರ ಸಮಸ್ಯೆಗಳಿಗೆ ಒಳಗಾಗುವಂತೆ ಮಾಡಿವೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಜಿಲ್ಲೆಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಸರ್ಕಾರ ಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ಬೆಳೆ ನಷ್ಟವಾಗಿರುವುದರಿಂದ ಸರ್ಕಾರ ರೈತರಿಗೆ ನೆರವು ನೀಡಬೇಕು ಎಂದು ಒತ್ತಾಯಿಸಿದರು.
ಚುನಾವಣೆಯಲ್ಲಿ ಇವಿಎಂ ಬಳಸುವುದನ್ನು ಎಎಪಿ ವಿರೋಧಿಸುತ್ತದೆ. ಸರ್ಕಾರಗಳು ಅವರಿಗೆ ಬೇಕಾಗಿರುವ ಕಂಪನಿಗಳಿಂದ ಗೆಲುವಿಗೆ ತಕ್ಕಂತೆ ಯಂತ್ರಗಳನ್ನು ಮುದ್ರಿಸಿಕೊಳ್ಳುತ್ತಿವೆ. ಆದ್ದರಿಂದ ಇವಿಎಂ ನಿಷೇಧಿಸಲು ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಲಿಂಗಾರಾಧ್ಯ(ಜಿಲ್ಲಾಧ್ಯಕ್ಷ ), ದಿನೇಶ, ಬಿ.ಪಿ.ರಂಗನಾಥ್(ಸಂಘಟನಾ ಕಾರ್ಯದರ್ಶಿಗಳು), ಎಂ.ಪಿ.ಈರೇಗೌಡ(ಕಾರ್ಯದರ್ಶಿ), ಡಾ. ಸುಂದರ್ ಗೌಡ(ಮಾಧ್ಯಮ ಉಸ್ತುವಾರಿ), ಪ್ರಭು(ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ), ಸಯ್ಯದ್ ಜಮೀನ್ ಅಹ್ಮದ್(ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ) ಆಯ್ಕೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಜಿಲ್ಲಾಧ್ಯಕ್ಷ ಲಿಂಗಾರಾಧ್ಯ, ಮುಖಂಡ ಪುಟ್ಟರಾಜು ಇದ್ದರು.