ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ಸೆ.22ರಿಂದ ಹಮ್ಮಿಕೊಂಡಿರುವ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯ ಜಾತಿ ಪಟ್ಟಿಯಲ್ಲಿ ‘ಕ್ರಿಶ್ಚಿಯನ್ ಜಾತಿ’ಗಳ ಕುರಿತಂತೆ ವಿವಾದ ತೀವ್ರಗೊಂಡಿದ್ದು, ಈ ವಿಷಯದಲ್ಲಿ ತಕರಾರು ರಾಜ್ಯಪಾಲರ ಅಂಗಳವನ್ನೂ ತಲುಪಿದೆ.
ಸಾಮಾಜಿಕ ನ್ಯಾಯ ಜಾಗೃತಿ ವೇದಿಕೆ ವತಿಯಿಂದ ಆಯೋಜಿಸಿದ್ದ ದುಂಡು ಮೇಜಿನ ಸಭೆಯಲ್ಲಿ ಹಿಂದು ಜಾತಿಗಳ ನಡುವೆ ಕ್ರೈಸ್ತ್ತರನ್ನು ನುಗ್ಗಿಸುವ ಹುನ್ನಾರ’ದ ಬಗ್ಗೆ 120ಕ್ಕೂ ಹೆಚ್ಚು ಸಾಮಾಜಿಕ ನಾಯಕರು, ಜಾತಿ ಪ್ರಮುಖರು, ನಿವೃತ್ತ ಅಧಿಕಾರಿಗಳು ವಿಸ್ತೃತ ಚರ್ಚೆ ನಡೆಸಿದರು. ಬಳಿಕ ರಾಜ್ಯಪಾಲರನ್ನು ಭೇಟಿ ಮಾಡಿ ಮಧ್ಯ ಪ್ರವೇಶಿಸಲು ಆಗ್ರಹಿಸಿದರು.
ದಲಿತರೂ, ಒಬಿಸಿಯವರೂ ಸೇರಿ ಹಿಂದು ಜಾತಿಗಳನ್ನು ಒಡೆಯುವುದೇ ಸರ್ಕಾರದ ಅಹಿಂದ ರಾಜಕಾರಣದ ನೀತಿಯಾಗಿದೆ. ಕಾಂಗ್ರೆಸ್ ಸರ್ಕಾರ ಜಾತಿ ಸಮೀಕ್ಷೆಯ ಹೆಸರಲ್ಲಿ ಹೊಸ ಕ್ರೈಸ್ತ ಜಾತಿಗಳನ್ನು ಸೃಷ್ಟಿಸಿ ಗೊಂದಲ ನಿರ್ಮಿಸಿರುವುದನ್ನು ದುಂಡು ಮೇಜಿನ ಸಭೆಯಲ್ಲಿ ವಿವರಿಸಲಾಯಿತು
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲು ಹೊರಟಿರುವ ರಾಜ್ಯ ಸರ್ಕಾರ ಕ್ರೈಸ್ತರನ್ನು ಹಿಂದು ಜಾತಿಗಳ ನಡುವೆ ಎಳೆದು ತಂದು ಎಲ್ಲ ಸಮಾಜಗಳನ್ನು ದಿಕ್ಕು ತಪ್ಪಿಸುತ್ತಿದೆ. ಕರ್ನಾಟಕದಲ್ಲಿ ಜಾರಿಯಲ್ಲಿರುವ ಮತಾಂತರ ನಿರ್ಬಂಧ ಕಾಯ್ದೆಯನ್ನು ಸರ್ಕಾರವೇ ದುರ್ಬಲಗೊಳಿಸುತ್ತಿದೆ ಎಂಬ ಕಳವಳ ವ್ಯಕ್ತವಾಯಿತು.
ಕುರುಬ ಕ್ರೈಸ್ತ, ಮಡಿವಾಳ ಕ್ರೈಸ್ತ, ಮಾದಿಗ ಕ್ರೈಸ್ತ ಸೇರಿ 48 ಹೊಸ ಕ್ರೈಸ್ತ ಜಾತಿಗಳನ್ನು ಸಮೀಕ್ಷೆಯ ಹೆಸರಿನಲ್ಲಿ ಹುಟ್ಟುಹಾಕಿರುವ ಸರ್ಕಾರ ಕ್ರೈಸ್ತರ ಮೂಲ ಜಾತಿಗಳಾದ ಕ್ಯಾಥೋಲಿಕ್, ಪ್ರೆಟೆಸ್ಟೆಂಟ್, ನ್ಯೂ ಲೈಫ್, ಬ್ಯಾಪ್ಟಿಸ್ಟ್ ಇತ್ಯಾದಿ ಮೂಲ ಜಾತಿಗಳನ್ನು ಕೈಬಿಟ್ಟಿರುವುದು ಕಾಂಗ್ರೆಸ್ಸಿನ ದುರುಳ ರಾಜಕಾರಣವನ್ನು ಬೆತ್ತಲು ಮಾಡಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಸಭೆಯಲ್ಲಿ ಸಂಸದರಾದ ಪಿ.ಸಿ.ಮೋಹನ್, ಯದುವೀರ ಒಡೆಯರ್, ಶಾಸಕ ಸುನಿಲ್ ಕುಮಾರ್, ಪರಿಷತ್ ಸದಸ್ಯ ರವಿಕುಮಾರ್, ರವೀಂದ್ರ ರೇಷ್ಮೆ, ಅಶೋಕ ಕುಮಾರ್, ಮಹೇಶ್, ನೆ.ಲ. ನರೇಂದ್ರ ಬಾಬು ಮತ್ತಿತರರು ಇದ್ದರು.
ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸರ್ವೇಯಲ್ಲಿ ಕ್ರಿಶ್ಚಿಯನ್ನರಲ್ಲಿ ಹಲವಾರು ಜಾತಿಗಳನ್ನು ಸೇರಿಸಿದ್ದು ಸರಿಯಲ್ಲ. ಇದು ಗೊಂದಲಕ್ಕೆ ಎಡೆ ಮಾಡಿಕೊಡಲಿದೆ ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದ್ದಾರೆ.
ಮಾಧ್ಯಮಗಳ ಜತೆ ಮಾತನಾಡಿದ ಅವರು ಇಲ್ಲದ ಜಾತಿಗಳನ್ನು ಸಮೀಕ್ಷೆ ವೇಳೆ ತೆಗೆದುಹಾಕುವ ಬಗ್ಗೆ ಮುಖ್ಯಮಂತ್ರಿಯವರು ಕ್ರಮ ಕೈಗೊಳ್ಳಬೇಕು. ಸಮೀಕ್ಷೆಯನ್ನು ವೈಜ್ಞಾನಿಕ ರೀತಿಯಲ್ಲಿ ಮಾಡಬೇಕು ಎಂಬುದು ನಮ್ಮ ಒತ್ತಾಯವೆಂದರು.
ಕ್ರಿಶ್ಚಿಯನ್ನರಲ್ಲಿ ಇಲ್ಲದ ಜಾತಿಗಳನ್ನು ಸಮೀಕ್ಷೆ ವೇಳೆ ಹೊರಗಿಡುವ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳದೆ ಇದ್ದಲ್ಲಿ ಕಾನೂನಿನ ಮೊರೆ ಹೋಗಲಿದ್ದೇವೆ. ಜತೆಗೆ ಆಂದೋಲನವನ್ನೂ ಮಾಡಲಿದ್ದೇವೆ ಎಂದು ಅವರು ಪ್ರಶ್ನೆಗೆ ಉತ್ತರಿಸಿದರು.
1. ಹಿಂದೂ ಉಪಜಾತಿಗಳಲ್ಲಿ ಸೇರಿಸಿರುವ ಕ್ರಿಶ್ಚಿಯನ್ ಪದ ಬಳಕೆಯನ್ನು ಹಿಂಪಡೆಯಬೇಕು. ಸರ್ಕಾರ ತಕ್ಷಣ ಆಯೋಗಕ್ಕೆ ಸೂಚನೆ / ಸಲಹೆ ಕೊಟ್ಟು, 47 ಉಪಜಾತಿಗಳ ಪಟ್ಟಿಯನ್ನು ಕೈ ಬಿಡಬೇಕು.
2. ಇದೇ ಮಾದರಿಯಲ್ಲಿ ಸಮೀಕ್ಷೆಯನ್ನು ಮುಂದುವರೆಸಿದಲ್ಲಿ ದೂರಗಾಮಿಯಾಗಿ ಮೀಸಲಾತಿಯಲ್ಲಿ ಏರುಪೇರು ಆಗುವ ಅಪಾಯ ಇದೆ. ಆಯೋಗದ ಈ ನಿರ್ಧಾರ ಮತಾಂತರಕ್ಕೆ ಸರ್ಕಾರ ಪ್ರೇರಣೆಯನ್ನು ನೀಡಿದಂತಾಗಿದೆ.
3. ತರಾತುರಿಯಲ್ಲಿ ನಡೆಸುವ ಸಮೀಕ್ಷೆಯ ಬಗ್ಗೆ ಆತಂಕವಿದ್ದು, ಆಯೋಗ ಮರು ಚಿಂತನೆಯನ್ನು ನಡೆಸಿ, ಇಡೀ ರಾಜ್ಯದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಬೇಸಿಗೆ ಕಾಲದಲ್ಲಿ ಸಮೀಕ್ಷೆ ಮಾಡುವುದು ಒಳಿತು.
4. ಹಿಂದೂ ಉಪಜಾತಿಗಳಲ್ಲಿ ಕ್ರಿಶ್ಚಿಯನ್ ಎಂದು ನಮೂದಿಸಿದರೆ ಅವರಿಗೆ ಯಾವುದೇ ಮೀಸಲಾತಿ ಸಿಗುವುದಿಲ್ಲ ಎಂದು ಮುಖ್ಯಮಂತ್ರಿಯವರು ಘೋಷಿಸಬೇಕು.
ಜಾತಿ ಗಣತಿ ಸಂದರ್ಭದಲ್ಲಿ ಹಿಂದು ಜಾತಿಗಳ ನಡುವೆ ಕ್ರಿಶ್ಚಿಯನ್ನರನ್ನು ನುಗ್ಗಿಸುವ ವ್ಯವಸ್ಥಿತ ಹುನ್ನಾರಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ. ಈ ಹವಣಿಕೆಯ ವಿರುದ್ಧ ಹೋರಾಟ ಅನಿವಾರ್ಯವಾಗಿದೆ. - ವಿ.ಸುನಿಲ್ ಕುಮಾರ್, ಶಾಸಕ