ನ್ಯೂಸ್

ಸಚಿವರ ರಾಜೀನಾಮೆಗಾಗಿ ತೀವ್ರ ಹೋರಾಟ: ಆರ್.ಅಶೋಕ್ ಎಚ್ಚರಿಕೆ

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಡಿ ಸಚಿವ ನಾಗೇಂದ್ರರ ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ಮುಂದುವರೆಸಲಿದೆ ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಎಚ್ಚರಿಸಿದರು.

ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆಗೆ ಸೋನವಾರ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ದಲಿತರ 187 ಕೋಟಿ ಹಣವನ್ನು ನುಂಗಿ ನೀರು ಕುಡಿದಿದೆ. ಸಿದ್ದರಾಮಯ್ಯನವರು ಸಚಿವರ ರಾಜೀನಾಮೆ ಪಡೆಯದೆ ಭಂಡತನ ಮೆರೆಯುತ್ತಿದ್ದಾರೆ ಎಂದು ಟೀಕಿಸಿದರು.

ಮತ್ತೆ ಮೋದಿಯವರು ಪ್ರಧಾನಿ ಆಗಲಿದ್ದು, ಆಮೇಲೆ ತೀರ್ಮಾನ ಮಾಡೋಣ ಎಂದು ಕಾಂಗ್ರೆಸ್ಸಿಗರು ಕಾಯುತ್ತಿದ್ದಾರೆ ಎಂದರು. ಕಳ್ಳ- ಖದೀಮರಾದ ಕಾಂಗ್ರೆಸ್ಸಿಗರು ಒಂದು ದಿನದ ಹೋರಾಟಕ್ಕೆ ಬಗ್ಗುವುದಿಲ್ಲ. ಆದ್ದರಿಂದ ರಾಜ್ಯಪಾಲರ ಭೇಟಿ, ಗಾಂಧಿ ಪ್ರತಿಮೆ ಎದುರು ಶಾಸಕರ ಧರಣಿ, ಎಲ್ಲ ಜಿಲ್ಲೆಗಳಲ್ಲಿ ಹೋರಾಟ ಮಾಡುವ ಕುರಿತು ಚರ್ಚೆ ಮಾಡಿದ್ದೇವೆ ಎಂದು ವಿವರಿಸಿದರು.

ಸಿ.ಟಿ.ರವಿ, ಎನ್.ರವಿಕುಮಾರ್, ಎಂ.ಜಿ.ಮುಳೆ ಅವರ ಆಯ್ಕೆ ಕುರಿತು ಮಾತನಾಡಿ, ಪಕ್ಷಕ್ಕಾಗಿ ದುಡಿದವರಿಗೆ ಆದ್ಯತೆ ಕೊಟ್ಟಿದ್ದಾಗಿ ತಿಳಿಸಿದರು. ವಿಧಾನಪರಿಷತ್ತಿನಲ್ಲಿ ನಮ್ಮ ಧ್ವನಿ ಹೆಚ್ಚಾಗಲು ಇವರನ್ನು ಆಯ್ಕೆ ಮಾಡಿದ್ದಾರೆ ಎಂದು ಆರ್.ಅಶೋಕ್ ಹೇಳಿದರು.