ನ್ಯೂಸ್

'ನನ್ನ ಮಗನೊಬ್ಬನ ಬಿಡುಗಡೆ ಬೇಡವೇ ಬೇಡ, ಎಲ್ಲ ಸೈನಿಕರು ನನ್ನ ಮಕ್ಕಳಿದ್ದಂತೆ' ಎಂದು ಪಾಕ್​ಗೆ ಖಂಡತುಂಡವಾಗಿ ಹೇಳಿದ್ದ ಜನರಲ್ ಕಾರ್ಯಪ್ಪ..

ಇಂದು ಫೀಲ್ಡ್​ ಮಾರ್ಷಲ್​ ಜನರಲ್​ ಕಾರ್ಯಪ್ಪ ಅವರ 27ನೇ ಪುಣ್ಯತಿಥಿ

ನವದೆಹಲಿ: ಭಾರತ ಸೇನಾ ಇತಿಹಾಸದ ಏಕೈಕ ಮಹಾ ದಂಡನಾಯಕ, ಕೊಡಗಿನ ವೀರ ಫೀಲ್ಡ್ ಮಾರ್ಷಲ್ ಕೊಡಂದೆರ ಮಾದಪ್ಪ ಕಾರ್ಯಪ್ಪ ಅವರ ಪುಣ್ಯತಿಥಿ ಇಂದು. ಸ್ವಾತಂತ್ರ್ಯಾ ನಂತರದಲ್ಲಿ ಭಾರತೀಯ ಸೇನೆಯ ಮೊದಲ ಮುಖ್ಯಸ್ಥರಾಗಿ ಅವರು ಸಲ್ಲಿಸಿರುವ ಸೇವೆ ಅಪಾರ.

ಫೀಲ್ಡ್​ ಮಾರ್ಷಲ್​ ಕಾರ್ಯಪ್ಪ ಅವರ ಬಗ್ಗೆ ಬರೆಯುತ್ತಾ ಹೋದರೆ ಪದಗಳೇ ಸಾಲುವುದಿಲ್ಲ. ಅಂಥ ಒಂದು ಅಪರೂಪದ ಘಟನೆ ಇಲ್ಲಿದೆ.

ಅದು 1965ನೇ ಇಸವಿ. ಭಾರತ ಹಾಗೂ ಪಾಕಿಸ್ತಾನದ ನಡುವೆ ಭಯಂಕರ ಯುದ್ಧ ನಡೆಯುತ್ತಿತ್ತು. ಯುದ್ಧದ ಕೊನೆಯ ದಿನವಾಗಿತ್ತದು. ಸ್ಕ್ವಾಡ್ರನ್​ ಲೀಡರ್​​ ​ಆಗಿದ್ದ ಕೆ.ಸಿ. ಕಾರ್ಯಪ್ಪ (ಕೆ.ಎಂ.ಕಾರ್ಯಪ್ಪ ಅವರ ಪುತ್ರ) ಭಾರತ ಮತ್ತು ಪಾಕಿಸ್ತಾನದ ಗಡಿ ಪ್ರದೇಶದಲ್ಲಿ ಪ್ರಯಾಣಿಸುತ್ತಿದ್ದ ವಿಮಾನವನ್ನು ಪಾಕಿಸ್ತಾನ ಹೊಡೆದುರುಳಿಸಿತು. ಇದರ ಅರಿವಾಗುತ್ತಿದ್ದಂತೆಯೇ ವಿಮಾನದಿಂದ ಜಿಗಿದಿದ್ದರು ಕಾರ್ಯಪ್ಪ. ಅವರ ಪ್ರಾಣಕ್ಕೆ ಅಪಾಯವಾಗದಿದ್ದರೂ ಪಾಕಿಸ್ತಾನ ಅವರನ್ನು ವಶಕ್ಕೆ ಪಡೆಯಿತು.ಮ ಅವರನ್ನು ಬಂಧಿಸಲಾಯಿತು. 

ತಮ್ಮ ಸಂಪೂರ್ಣ ವಿವರವನ್ನು ಪಾಕಿಸ್ತಾನದ ಅಧಿಕಾರಿಗಳಿಗೆ ನೀಡಿದ್ದರು ಕಾರ್ಯಪ್ಪ. ರಾವಲ್​ಪಿಂಡಿಯಲ್ಲಿರುವ ಪಾಕಿಸ್ತಾನದ ಸೇನಾ ಕಚೇರಿಗೆ ಈ ಸಂದೇಶ ತಲುಪಿತು. ಅದೇ ಸಂದರ್ಭದಲ್ಲಿ ಕೈದಿಯಾಗಿರುವಾತ ಫೀಲ್ಡ್​ ಮಾರ್ಷಲ್​ ಕೆ.ಎಂ. ಕಾರ್ಯಪ್ಪ ಅವರ ಮಗ ಎಂಬ ವಿಚಾರ ಪಾಕ್​ ಸೇನೆಗೆ ತಿಳಿಯಿತು. ಈ ವಿಷಯ ತಿಳಿಯುತ್ತಲೇ ಅವರನ್ನು ಬೇರೆ ಯುದ್ಧ ಕೈದಿಗಳಿಂದ ಪ್ರತ್ಯೇಕಿಸಿ ಬೇರೆ ಕಡೆಯೇ ಸ್ಥಳಾಂತರಿಸಲಾಯಿತು.

ಕೊನೆಗೊಂದು ಅಚ್ಚರಿ ನಡೆದೇ ಬಿಟ್ಟಿತು. ಅದೇನೆಂದರೆ, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್​ ಆಯುಬ್​ ಖಾನ್​ ರೇಡಿಯೋದಲ್ಲಿ ಘೋಷಣೆ ಮಾಡುತ್ತಾ, ಕೆ.ಸಿ ಕಾರ್ಯಪ್ಪ ಅವರನ್ನು ನಾವು ಬಂಧಿಸಿದ್ದೇವೆ. ಅವರು ಕ್ಷೇಮವಾಗಿದ್ದಾರೆ. ಅವರನ್ನು ಬಿಡುಗಡೆ ಮಾಡಲು ನಾವು ಸಿದ್ಧ ಎಂದರು!

ಅಷ್ಟಕ್ಕೂ ಆಯುಬ್​ ಹೀಗೆ ಮಾಡಿದ್ದು ಸುಖಾಸುಮ್ಮನೆಯಲ್ಲ. ಬ್ರಿಟಿಷ್ ಇಂಡಿಯನ್​ ಆರ್ಮಿಯಲ್ಲಿದ್ದ ಆಯೂಬ್​ಗೆ ಕೆ.ಎಂ.ಕಾರಿಯಪ್ಪನವರು ಮುಖ್ಯಸ್ಥರಾಗಿದ್ದರಿಂದ ಅವರ ಮೇಲೆ ಸಹಜವಾಗಿಯೇ ಆಯೂಬ್​ಗೆ ಅವರ ಕುಟುಂಬದ ಮೇಲೂ ಅಪಾರ ಗೌರವ ಇತ್ತು. ಆದ್ದರಿಂದ ಅವರು ಮಗನ ಬಿಡುಗಡೆ ಕುರಿತು ಘೋಷಿಸಿದರು. ಜತೆಗೆ, ಕೆ.ಸಿ.ಕಾರ್ಯಪ್ಪ ಅವರನ್ನೂ ಚೆನ್ನಾಗಿಯೇ ನೋಡಿಕೊಂಡರು.

ಆದರೆ ಫೀಲ್ಡ್​ ಮಾರ್ಷಲ್​ ಕೆ.ಎಂ.ಕಾರ್ಯಪ್ಪ ಎಂದರೆ ಸುಮ್ಮನೆಯೆ? ಮಗನನ್ನು ಬಿಡುಗಡೆ ಮಾಡುವ ವಿಚಾರವನ್ನು ಅವರು ಅಷ್ಟೇ ವಿನಯದಿಂದ ತಿರಸ್ಕರಿಸಿಬಿಟ್ಟರು. ಕೆ.ಸಿ. ಕಾರ್ಯಪ್ಪ ನನ್ನ ಮಗ ಎನ್ನುವ ಕಾರಣಕ್ಕೆ ನನ್ನ ಮಗನೊಬ್ಬನನ್ನೇ ಬಿಡುಗಡೆ ಮಾಡೋದು ಬೇಡ, ಯುದ್ಧಕೈದಿಯಾಗಿರುವ ಎಲ್ಲ ಮಕ್ಕಳೂ ನನ್ನ ಮಕ್ಕಳಿದ್ದಂತೆ, ಬಿಡುವುದಿದ್ದರೆ ಎಲ್ಲರನ್ನೂ ಬಿಡಿ ಎಂದು ಖಂಡತುಂಡವಾಗಿ ಹೇಳಿದರು! ಇವರ ಮಾತಿಗೆ ಮಣಿದ ಪಾಕ್​ಗೆ ಬೇರೆ ದಾರಿ ಇರಲಿಲ್ಲ. ಮಗನ ಜತೆ ಎಲ್ಲರನ್ನೂ ಕೊನೆಯದಾಗಿ ಬಿಡುಗಡೆ ಮಾಡಿತ್ತು.

ಸಾರ್ವಜನಿಕ ಸೇವೆಯಿಂದ ನಿವೃತ್ತರಾದ ಮೇಲೆ ಕಾರ್ಯಪ್ಪನವರು ಮಡಿಕೇರಿಯಲ್ಲಿ ತಮ್ಮ ಸ್ವಂತ ಮನೆ ‘ರೋಶನಾರಾ’ದಲ್ಲಿ ಇದ್ದರು. ಆರೋಗ್ಯ ಹದಗೆಟ್ಟಾಗ ಚಿಕಿತ್ಸೆಗೆಂದು ಬೆಂಗಳೂರಿನಲ್ಲಿ ಕಮಾಂಡೋ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. 1993ರ ಮೇ 15ರಂದು ಅವರು ಸ್ವರ್ಗಸ್ಥರಾದರು. (ಏಜೆನ್ಸೀಸ್​)