ನ್ಯೂಸ್

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೊರಟ ಮೊದಲ ವಿಮಾನ: ಮಾಜಿ ಸಿಎಂ ಬಿಎಸ್​ವೈ ಜತೆ ಯಾರೆಲ್ಲ ಪ್ರಯಾಣಿಸಿದ್ರು?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ ಬಹು ದಿನಗಳ ಕನಸು ಇಂದು ನೆರವೇರಿದೆ. ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಇಂದು ಮೊದಲ ವಿಮಾನ ಹಾರಾಟ ನಡೆಸಿದೆ.

ಶಿವಮೊಗ್ಗ ವಿಮಾನ ನಿಲ್ದಾಣವನ್ನು ಬಿಎಸ್​ವೈ ಹುಟ್ಟುಹಬ್ಬದಂದು ಪ್ರಧಾನಿ ಮೋದಿ ಅವರು ಉದ್ಘಾಟಿಸಿದರು. ಈ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರನ್ನು ಇಡಲಾಗಿದೆ. ಆರಂಭದಲ್ಲಿ ಯಡಿಯೂರಪ್ಪ ಅವರ ಹೆಸರನ್ನು ಇಡಲು ಅಂದಿನ ಬಿಜೆಪಿ ಸರ್ಕಾರ ತೀರ್ಮಾನ ಮಾಡಿತ್ತು. ಆದರೆ, ಯಡಿಯೂರಪ್ಪ ಅವರು ತಾವೇ ಖುದ್ದಾಗಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದು, ಕುವೆಂಪು ಹೆಸರನ್ನು ಇಡುವಂತೆ ಸೂಚಿಸಿದರು. ಅಂತಿಮವಾಗಿ ಕುವೆಂಪು ವಿಮಾನ ನಿಲ್ದಾಣ ಎಂದು ಹೆಸರಿಡಲಾಯಿತು.

ಮೊದಲ ಪ್ರಯಾಣಿಕರು ಯಾರು?

ಶಿವಮೊಗ್ಗಕ್ಕೆ ಹೊರಟ ಮೊದಲ ಇಂಡಿಗೋ ವಿಮಾನದಲ್ಲಿ ಮಾಜಿ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವ ಎಂ.ಬಿ.ಪಾಟೀಲ, ಶಿವಮೊಗ್ಗ ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಆರಗ ಜ್ಞಾನೇಂದ್ರ, ಶಾಸಲ ಬಿ.ವೈ.ವಿಜಯೇಂದ್ರ, ಗೋಪಾಲಕೃಷ್ಣ ಬೇಳೂರು, ಭಾರತಿಶೆಟ್ಟಿ, ಮಾಜಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ಹಾಲಪ್ಪ ಪ್ರಯಾಣ ಮಾಡಿದ್ದು, ಮೊದಲ ಪ್ರಯಾಣಿಕರು ಎನಿಸಿಕೊಂಡಿದ್ದಾರೆ.

ರೈತರನ್ನೂ ಕರೆದುಕೊಂಡು ಹೋಗ್ತೀನಿ

ಶಿವಮೊಗ್ಗಕ್ಕೆ ಹೊರಡುವ ಮುನ್ನ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಬಿಎಸ್​ವೈ, ನಮ್ಮ ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಆಗಲು ರೈತರು ಕಾರಣ. ಸಣ್ಣ ಕಾರಣ ಇಲ್ಲದೆ ಜಮೀನು ಬಿಟ್ಟುಕೊಟ್ಟರು. ನನ್ನ ಜೊತೆ ಕೆಲ ರೈತರನ್ನೂ ವಿಮಾನದಲ್ಲಿ ಕರೆದುಕೊಂಡು ಹೋಗ್ತೀನಿ. ಕೈಗಾರಿಕೆ, ಬೇರೆ ಕಾರಣಕ್ಕೂ ಅನುಕೂಲ ಆಗಲಿದೆ. ಏರ್ಪೋರ್ಟ್​ ಆಗಲು ಕಾರಣರಾದ ಎಲ್ಲರಿಗೂ ಅಭಿನಂದನೆಗಳು. ಸಂಸದ ರಾಘವೇಂದ್ರಗೆ ಅಭಿನಂದನೆ ಸಲ್ಲಿಸ್ತೇನೆ. ಮುಂದೆ ಓಡಾಡಲು ಬಹಳ ಅನುಕೂಲ ಆಗಲಿದೆ ಎಂದರು.

ಇದೊಂದು ಐತಿಹಾಸಿಕ ಕ್ಷಣ

ಮಾಜಿ ಸಚಿವ ಆರಗ ಜ್ಞಾನೇಂದ್ರ‌ ಮಾತನಾಡಿ, ಇಂದು ಶಿವಮೊಗ್ಗದಲ್ಲಿ ಮೊದಲ ವಿಮಾನ ಲ್ಯಾಂಡಿಂಗ್ ಆಗಲಿದ್ದು, ಇದೊಂದು ಐತಿಹಾಸಿಕ ಕ್ಷಣ. ಶಿವಮೊಗ್ಗ ಜನ ಖುಷಿ ಪಡುವ ದಿನ. ಇದೊಂದು ಅಭಿವೃದ್ಧಿ ದಿನ. ಇದರಿಂದ ಕೈಗಾರಿಕಾ ಸ್ಥಾಪನೆ ಅನುಕೂಲ ಆಗಲಿದೆ. ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಧನ್ಯವಾದಗಳನ್ನು ತಿಳಿಸುತ್ತೇನೆ. ಈ ಏರ್ಪೋರ್ಟ್​ನಿಂದ ಮಧ್ಯ ಕರ್ನಾಟಕಕ್ಕೆ ಅನುಕೂಲ ಆಗಲಿದೆ ಎಂದು ಹೇಳಿದರು.

ವಾಣಿಜ್ಯ, ಪ್ರವಾಸೋದ್ಯಮಕ್ಕೆ ಅನುಕೂಲ

ಶಾಸಕ ವಿಜಯೇಂದ್ರ ಮಾತನಾಡಿ, ಹೆಮ್ಮೆಯ ಮಲೆನಾಡಿನ ಶಿವಮೊಗ್ಗ ವಿಮಾನ ನಿಲ್ದಾಣ. ದೇಶದ ಪ್ರಧಾನಿ ಮೋದಿಯವರು ಯಡಿಯೂರಪ್ಪ ಜನ್ಮದಿನದಂದು ಲೋಕಾರ್ಪಣೆ ಮಾಡಿದರು. ಇಂದಿನಿಂದ ಅಧಿಕೃತವಾಗಿ ವಿಮಾನಯಾನ ಆರಂಭವಾಗಲಿದೆ. ತಂದೆ ಯಡಿಯೂರಪ್ಪ ಹಾಗೂ ರಾಘಣ್ಣ ಪ್ರಯಾಣ ಮಾಡ್ತಿದ್ದಾರೆ. ಶಿವಮೊಗ್ಗ ಜನರ ನಿರೀಕ್ಷೆ ಇತ್ತು. ಬಹಳ ಜನರಿಗೆ ಇದರಿಂದ ಅನುಕೂಲ ಆಗಲಿದೆ. ವಾಣಿಜ್ಯ, ಪ್ರವಾಸೋದ್ಯಮಕ್ಕೆ ಅನುಕೂಲ ಆಗಲಿದೆ ಎಂದು ತಿಳಿಸಿದರು. (ದಿಗ್ವಿಜಯ ನ್ಯೂಸ್​)