ಸೊರಬ: ನಾಡಿನಲ್ಲಿ ಜನರು ಸುಭೀಕ್ಷವಾಗಿ ಜೀವನ ಸಾಗಿಸಲು ಮತ್ತು ಮಳೆ, ಬೆಳೆ ಉತ್ತಮವಾಗಲಿ ಎಂದು ಗ್ರಾಮಸ್ಥರು ದೈವೀಶಕ್ತಿಯ ವಿವಿಧ ರೂಪಗಳಲ್ಲಿ ಒಂದಾದ ಮಾರಿಕಾಂಬಾ ದೇವಿ ಉತ್ಸವ ಮಾಡುತ್ತಿರುವುದು ಸಂತಸವಾಗಿದೆ ಎಂದು ಜಡೆ ಸಂಸ್ಥಾನ ಮಠದ ಶ್ರೀ ಮಹಾಂತ ಸ್ವಾಮೀಜಿ ಹೇಳಿದರು.
ತಾಲೂಕಿನ ಜಡೆ, ಕೋಟೆ, ಯಡಗೊಪ್ಪ, ಕಲ್ಕೊಪ್ಪ ಗ್ರಾಮಗಳ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿದರು.
ಶಕ್ತಿ ಸ್ವರೂಪಿಣಿ ಮಾರಿಕಾಂಬಾ ದೇವಿಯು ವಿವಿಧ ರೂಪಗಳನ್ನು ತಾಳುವ ಮೂಲಕ ಶಕ್ತಿ ದೇವತೆ ಎಂದು ಪ್ರಸಿದ್ಧಿಯಾಗಿದ್ದಾಳೆ. ನಾಡಿನಲ್ಲಿ ಜನರು ಸಮೃದ್ಧಿಯಿಂದ, ನೆಮ್ಮದಿಯ ಬದುಕು ನಡೆಸುವಂತಾಗಲಿ. ಉತ್ತಮ ಮಳೆ, ಬೆಳೆಯಾಗಿ ಸಂತೃಪ್ತ ಜೀವನ ಉಂಟಾಗಲಿ ಎಂದರು.
ಜಾತ್ರಾ ಮಹೋತ್ಸವ ಸಮಿತಿ ಅಧ್ಯಕ್ಷ ರುದ್ರಗೌಡ ಕಮರೂರು ಮಾತನಾಡಿ, ದೇವಿಯ ಅನುಗ್ರಹದಿಂದ ಸತತವಾಗಿ ಹಲವು ವರ್ಷಗಳಿಂದ ದೇವಿಯ ಮಹೋತ್ಸವವನ್ನು ವೈಭವದಿಂದ ಆಚರಿಸುತ್ತ ಬಂದಿದ್ದೇವೆ. ಗ್ರಾಮಗಳ ಸಹಕಾರದಿಂದ ಈ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದರು.
ಜಾತ್ರಾ ಮಹೋತ್ಸವದ ಕಾರ್ಯಾಧ್ಯಕ್ಷ ಬಿ.ನಿಂಗಪ್ಪ, ಉಪಾಧ್ಯಕ್ಷ ನಟರಾಜ್ ಗೌಡ, ಕಾರ್ಯದರ್ಶಿ ಬಸವರಾಜಪ್ಪ, ಗೌರವಾಧ್ಯಕ್ಷ ರಘುನಂದನ್, ಖಜಾಂಚಿ ವಿರೂಪಾಕ್ಷಪ್ಪ, ಸಹ ಕಾರ್ಯದರ್ಶಿ ನಾರಾಯಣಪ್ಪ, ರಥ ಸಮಿತಿ ಅಧ್ಯಕ್ಷ ನಾಗರಾಜ್, ಚಂದ್ರಪ್ಪ ಎಸಳೇರ್, ವಿರೇಶ್ ಚಿಕ್ಕನರ್, ಹನುಮಂತಪ್ಪ, ಗಣೇಶ್, ನೀಲಕಂಠ ಗೌಡ, ರಮೇಶ್, ಜಯಣ್ಣ, ರವಿಕುಮಾರ್ ಇತರರಿದ್ದರು.