ಗರ್ಭ ಸಂಸ್ಕಾರ: ಇದು ‘ಗರ್ಭ’ ಮತ್ತು ‘ಸಂಸ್ಕಾರ’ ಎಂಬ ಎರಡು ಸಂಸ್ಕೃತ ಪದಗಳಿಂದ ಸಂಯೋಜಿತವಾಗಿದೆ. ಗರ್ಭ ಎಂದರೆ ಭ್ರೂಣ, ಸಂಸ್ಕಾರ ಎಂದರೆ ಶುದ್ಧೀಕರಣ ಅಥವಾ ‘ಶಿಕ್ಷಣ’. ಇದನ್ನು ಗರ್ಭಿಣಿ ಶಿಕ್ಷಣ ಎಂದು ಕರೆಯುವರು.
ಗರ್ಭಾಧಾನಾದಿಷು ಸಂಸ್ಕಾರಾಃ ಷೋಡಶೈತೇ ಚ ಯತ್ಕ್ರತಾಃ|
ಶುದ್ಧಿಂ ಪ್ರಜಾಯತೇ ತೇಭ್ಯಃ ಕರ್ಮಭ್ಯಃ ಸುಮನುಷ್ಯತಾ||
(ಗರ್ಭಾಧಾನ ದಿಂದ ಪ್ರಾರಂಭವಾಗಿ ಹದಿನಾರು ಸಂಸ್ಕಾರಗಳು ಮನುಷ್ಯನ ಶುದ್ಧಿಯನ್ನು ಮತ್ತು ಶ್ರೇಷ್ಠಗುಣಗಳನ್ನು ಬೆಳೆಸಲು ಪ್ರೇರೆಪಿಸುತ್ತವೆ.)
ಯೋಗದ ಪಾತ್ರ: ಯೋಗ ತನ್ನ ಮೂಲದಲ್ಲಿ ಭಾರತೀಯ ಜ್ಞಾನವನ್ನು ಹೊಂದಿದ್ದು ಗರ್ಭಿಣಿ ಶಿಕ್ಷಣ- ಗರ್ಭ ಸಂಸ್ಕಾರದಲ್ಲಿ ಮುಖ್ಯ ಪಾತ್ರವಹಿಸುತ್ತದೆ. ಗರ್ಭಿಣಿಯೋಗವು ಗರ್ಭಿಣಿಯರ ಶಾರೀರಿಕ ಆರೋಗ್ಯಕ್ಕೆ ಸೂಕ್ತವಾದ ಆಸನಗಳು, ಒತ್ತಡ ಕಡಿಮೆಗೊಳಿಸಿ ಶಾಂತಮನಸಿಗೆ ಪ್ರಾಣಾಯಾಮ, ವಿಶ್ರಾಂತಿ ತಂತ್ರ, ಭಾವಶುದ್ಧಿಗೆ ಸಕಾರಾತ್ಮಕ ಚಿಂತನೆಗೆ-ಜಪ, ಮಂತ್ರ, ಧ್ಯಾನ, ಸಾತ್ವಿಕ ಆಹಾರ ನಿಯಮಾವಳಿಗಳು, ಆಧ್ಯಾತ್ಮಿಕ ಸಂಸ್ಕಾರ ಸರಣಿಯನ್ನು ಒಳಗೊಂಡಿದೆ. ಗರ್ಭಿಣಿಯೋಗವು ಸಾಮಾನ್ಯವಾಗಿ ಗರ್ಭಿಣಿಯರಿಗೆ ಬರುವ ಬೆನ್ನುನೋವು, ಹೊಟ್ಟೆನೋವು, ಮಾನಸಿಕ ಕಿರಿಕಿರಿ, ರಸಗ್ರಂಥಿಗಳ ವ್ಯತ್ಯಾಸ ಹಾಗೂ ಉದ್ವೇಗ ಉಪಶಮನ ಮಾಡುತ್ತದೆ. ಇದು ಸಹಜ ಪ್ರಸವಕ್ಕೆ ದೇಹ-ಮನಸ್ಸನ್ನು ತಯಾರುಮಾಡುತ್ತದೆ. ಮಾನಸಿಕ ಶಾಂತಿಯನ್ನು ಉತ್ತೇಜಿಸುತ್ತದೆ. ತಾಯಿ ಮತ್ತು ಗರ್ಭದಲ್ಲಿರುವ ಮಗುವಿನ ಭಾವನಾತ್ಮಕ ಬಂಧವನ್ನು ಹೆಚ್ಚಿಸುತ್ತದೆ. ದೈವೀಕತೆಯೊಂದಿಗೆ ಜನುಮದ ಅನುಬಂಧವನ್ನು ಬೆಳೆಸುತ್ತದೆ. ಆರಂಭಿಕ ಹಂತದಲ್ಲೇ ಮಗುವಿನ ಬುದ್ಧಿಮತ್ತೆ, ವರ್ತನೆ ಮತ್ತು ಸರ್ವಾಂಗೀಣ ವ್ಯಕ್ತಿ್ತ್ವವನ್ನು ಪ್ರಭಾವಿಸುತ್ತದೆ.
ಆಧುನಿಕ ಯುಗದಲ್ಲಿ ಗರ್ಭಸಂಸ್ಕಾರ ಮಹತ್ವ: ಇಂದಿನ ತ್ವರಿತಮತ್ತು ಒತ್ತಡಭರಿತ ಜಗತ್ತಿನಲ್ಲಿ ಗರ್ಭಸಂಸ್ಕಾರ ಮತ್ತು ಯೋಗದ ನಿಯಮಿತ ಅಭ್ಯಾಸವು ಗರ್ಭಿಣಿಯರಿಗೆ ಧನಾತ್ಮಕ ಪರಿಣಾಮವನ್ನು ಬೀರುವುದೆಂದು ವೈಜ್ಞಾನಿಕ ಸಂಶೋಧನೆಗಳು ತೋರಿಸಿವೆ. ಗರ್ಭಿಣಿಯ ಒತ್ತಡವು ಭ್ರೂಣದ ಬೆಳವಣಿಗೆಯ ಮೇಲೆದುಷ್ಪರಿಣಾಮ ಬೀರುತ್ತದೆ. ಸರಳ ಪ್ರಾಣಾಯಾಮ, ಪ್ರಾರ್ಥನೆ ಮತ್ತು ಯೋಗನಿದ್ರೆ, ವಿಶ್ರಾಂತಿಯಂತಹ ತಂತ್ರಗಳು ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಉತ್ತಮ ಸಂತಾನವನ್ನು ಪಡೆಯಲು ಸಹಕಾರಿಯಾಗಿದೆ. ಗರ್ಭಸಂಸ್ಕಾರವು ತಾಯಿ-ತಂದೆಯಸಕ್ರಿಯ ಪಾಲ್ಗೊಳ್ಳುವಿಕೆಯನ್ನು ಪ್ರೋತ್ಸಾಹಿಸುತ್ತದೆ. ಮನೆಮನದಲ್ಲಿ ಸುಸಂಸ್ಕೃತ ವಾತಾವರಣ ನಿರ್ವಿುಸುತ್ತದೆ. ಆಧುನಿಕ ಜೀವನದ ಸಂಕೀರ್ಣತೆಗಳನ್ನು ಎದುರಿಸುತ್ತಿದ್ದಂತೆ ನಮ್ಮ ಪ್ರಾಚೀನ ಪರಂಪರಾವಳಿಗಳನ್ನು ಸ್ವೀಕರಿಸುವುದು ಭವಿಷ್ಯದ ಪೀಳಿಗೆಗೆ ಆರೋಗ್ಯಕರ ಮತ್ತು ಸಮತೋಲ ಹೊಂದಿದ ಜೀವನ, ಭವಿಷ್ಯ ಒದಗಿಸುತ್ತದೆ.
ಗರ್ಭಾವಸ್ಥೆಯಲ್ಲಿ ಬದ್ಧಕೋನಾಸನದ ಪ್ರಾಮುಖ್ಯತೆ: ಬದ್ಧಕೋನಾ ಸನ. ‘ಬದ್ಧ’ವೆಂದರೆ ಕಟ್ಟಲ್ಪಟ್ಟ, ತಡೆಯನ್ನು ಹೊಂದಿದ ಎಂದರ್ಥ. ‘ಕೋನ’ ವೆಂದರೆ ಮೂಲೆ. ಇದು ಗರ್ಭಿಣಿಯರಿಗೆ ಶಾರೀರಿಕ ಮತ್ತು ಮಾನಸಿಕ ಆರೋಗ್ಯವನ್ನು ಉತ್ತೇಜಿಸುತ್ತದೆ.
ಅಭ್ಯಾಸಕ್ರಮ:=ಕಾಲುಗಳನ್ನು ಸರಾಗವಾಗಿ ವಿಸ್ತರಿಸಿ ಕುಳಿತುಕೊಳ್ಳಿ. = ಮಂಡಿಗಳನ್ನು ಮಡಚಿ ಪಾದಗಳನ್ನು ಒಟ್ಟಿಗೆ ತರಲು ಪ್ರಯತ್ನಿಸಿ. ಮಂಡಿಗಳು ಎರಡೂ ಕಡೆಗಳಲ್ಲಿ ನೆಲಮುಟ್ಟುವವರೆಗೂ ಒತ್ತಡವಿಲ್ಲದೆ ಪ್ರಯತ್ನಿಸಿ. = ಪಾದಗಳನ್ನು ಕೈಗಳಿಂದ ಹಿಡಿದುಕೊಳ್ಳಿ, ಬೆನ್ನು ನೇರವಾಗಿರಲಿ. =ಸಹಜ ಎಳೆತವನ್ನು ಹಿತವಾಗಿ ಅನುಭವಿಸಿ. = ಆಳವಾಗಿ ಉಸಿರಾಡಿರಿ. ಉಸಿರಾಟದ ಕಡೆಗೆ ಮನಸ್ಸನ್ನು ಕೇಂದ್ರಿಕರಿಸಿರಿ.ಮುನ್ನೆಚ್ಚರಿಕೆ: = ಅಭ್ಯಾಸದ ಮೊದಲು ವೈದ್ಯರ ಸಲಹೆ ಹಾಗೂ ಹಿರಿಯ ಯೋಗ ತಜ್ಞರ ಮಾರ್ಗದರ್ಶನ ಅವಶ್ಯಕ, = ನಿಮ್ಮ ದೇಹದ ಸಂಕೇತ, ಸಂವೇದನೆಗಳಿಗೆ ಗಮನಕೊಡಿ, ಯಾವುದೇ ನೋವು ಅಥವಾ ಅಸಹಾಯಕತೆಯನ್ನು ಅನುಭವಿಸಿದರೆ, ಆಸನದಿಂದ ಹೊರಬಂದು ವಿಶ್ರಾಂತಿ ಪಡೆಯಿರಿ.
ಶಾರೀರಿಕ ಲಾಭಗಳು: ಗರ್ಭಾವಸ್ಥೆ್ಥಯ ದಿನಗಳಲ್ಲಿ ಈ ಆಸನವು ಗರ್ಭಿಣಿಯ ನಿತಂಬ, ಪಕ್ಕೆ, ಒಳತೊಡೆಗಳಲ್ಲಿ ನಮನೀಯತೆ ಹಾಗೂ ಬಲ ಹೆಚ್ಚಿಸಲು ಸಹಾಯಕ. ಇದು ಸುಲಲಿತ ಪ್ರಸವಕ್ಕೆ ದೇಹವನ್ನು ಸಿದ್ಧಗೊಳಿಸುತ್ತದೆ. ಶ್ರೋಣಿಯ ಪ್ರದೇಶದಲ್ಲಿ ರಕ್ತಪ್ರವಾಹ ಉತ್ತಮಗೊಳ್ಳುವುದರಿಂದ ಬೆಳೆಯುತ್ತಿರುವ ಭ್ರೂಣಕ್ಕೆ ಅಗತ್ಯವಾದ ಪೋಷಕಾಂಶ ಹಾಗೂ ಆಮ್ಲಜನಕವನ್ನು ಸಮರ್ಥವಾಗಿ ಪೂರೈಸುತ್ತದೆ. ಬೆನ್ನುನೋವು ಸಯಾಟಿಕ್, ಊದಿದ ಕಾಲುಗಳಂತಹ ಸಮಸ್ಯೆಗಳನ್ನು ತಡೆಯಲು ಸಹಾಯಕವಾಗಿದೆ.