ಒಂದು ಕಾಲದಲ್ಲಿ ನಾನು ಸಕ್ಕರೆಯಂತೆ ರುಚಿಯಲ್ಲ; ಮೆಣಸು, ಉಪ್ಪಿನಂತೆ ಅನಿವಾರ್ಯವಲ್ಲ; ನಾನು ಎಲ್ಲರಿಗಿಂತ ಕಡಿಮೆ ಎಂದು ಖಿನ್ನತೆಯಲ್ಲಿದ್ದ ಮೆಂತೆಯು ಇಂದು ನಾನೇ ಮಹಾರಾಜ ಎಂಬಂತೆ ಬೀಗುತ್ತಿದೆ. ಇದಕ್ಕೆ ಕಾರಣ ಇಂದು ಸಾಮಾನ್ಯವಾಗುತ್ತಿರುವ ಕಾಯಿಲೆಗಳು. ತಿನ್ನಲು ನಮಗಷ್ಟೇ ಕಹಿಯಲ್ಲದೇ ಎಷ್ಟೋ ಕಾಯಿಲೆಗಳಿಗೆ ಕೂಡ ಈ ಮೆಂತೆ ಕಹಿಯೇ. ಅಷ್ಟು ಅದ್ಭುತ ಔಷಧೀಯ ಗುಣಗಳು ಮೆಂತೆಗೆ ಇವೆ. ಆಯುರ್ವೆದದ ಪ್ರಕಾರ ಮೆಂತೆ ವಾತ ಮತ್ತು ಕಫ ದೋಷಗಳನ್ನು ನಿಯಂತ್ರಿಸುತ್ತದೆ. ಹಾಗಾಗಿ ಎಷ್ಟೋ ಕಾಯಿಲೆಗಳಲ್ಲಿ ಇದು ಅನುಕೂಲಕರವಾಗಿದೆ. ಮಂಡಿ ನೋವು, ಮೈಕೈ ನೋವು, ಸಂಧಿ ನೋವು, ಅಸ್ತಮಾ, ಅಜೀರ್ಣ ಮುಂತಾದ ಸಮಸ್ಯೆಗಳಲ್ಲಿ ಮೆಂತೆಯು ತುಂಬಾ ಅನುಕೂಲಕರ. ಸಾಮಾನ್ಯವಾಗಿ ಎಲ್ಲರೂ ಅಂದುಕೊಳ್ಳುವುದೇನೆಂದರೆ ಡಯಾಬಿಟೀಸ್ಗೆ ಮಾತ್ರ ಮೆಂತೆ ಒಳ್ಳೆಯದು ಎಂದು.
ಖಂಡಿತ ಹಾಗಲ್ಲ. ಇದು ಕೆಲವು ಲೈಂಗಿಕ ಸಮಸ್ಯೆಗಳು, ಚರ್ಮದ ತೊಂದರೆಗಳು, ಅಸಿಡಿಟಿಯಂತಹ ಸಮಸ್ಯೆಗಳಲ್ಲಿ ಕೂಡ ಪರಿಣಾಮಕಾರಿ. ಆದರೆ ವಿಶೇಷವಾಗಿ ನಾವು ಮೆಂತೆಯ ವಿಷಯ ರ್ಚಚಿಸುವಾಗ ಮಧುಮೇಹದ ಬಗ್ಗೆ ತಿಳಿದುಕೊಳ್ಳಲೇಬೇಕು. ಏಕೆಂದರೆ ಅಷ್ಟು ಚೆನ್ನಾಗಿ ಇದು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ಹತೋಟಿಗೆ ತರುತ್ತದೆ. ದಿನಕ್ಕೊಮ್ಮೆ 5 ಗ್ರಾಂ ನಷ್ಟು ಮೆಂತೆಯನ್ನು ಸೇವಿಸಿದರೂ ಇದರ ಫಲಿತಾಂಶವನ್ನು ನೋಡಬಹುದು. ಅಂದರೆ ಒಂದೆರಡು ಚಮಚ ಮೆಂತೆಯನ್ನು ರಾತ್ರಿ ನೀರಿನಲ್ಲಿ ನೆನಸಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ಅನುಕೂಲವಾಗುತ್ತದೆ.
ಮೆಂತೆಯ ವಿಶೇಷ ಗುಣಗಳ ಕಾರಣದಿಂದ ಬೊಜ್ಜು ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಮಾಡಲು ಕೂಡಾ ಇದು ಅನುಕೂಲಕರ. ಈ ಸಮಸ್ಯೆಗಳು ಕಡಿಮೆಯಾಗಲು ದಿನಕ್ಕೆ ಒಂದೆರಡು ಬಾರಿ 5 ಗ್ರಾಂ ನಷ್ಟು ಮೆಂತೆ ಪುಡಿಯನ್ನು ಊಟದ ಕೊನೆಯಲ್ಲಿ ಬೆಣ್ಣೆ ತೆಗೆದ ಮಜ್ಜಿಗೆಯಲ್ಲಿ ಹಾಕಿ ಸೇವಿಸಬಹುದು. ಒಂದು ಚಮಚದಷ್ಟು ಮೆಂತೆ ಪುಡಿಯನ್ನು ಮಜ್ಜಿಗೆಗೆ ಹಾಕಿ ತುಂಬಾ ಚಿಕ್ಕ ಚೂರು ಇಂಗನ್ನು ತುಪ್ಪದಲ್ಲಿ ಹುರಿದು ಅದನ್ನು ಸೇರಿಸಿಕೊಂಡು ಊಟದ ನಂತರ ಸೇವಿಸಿದರೆ ಹೊಟ್ಟೆ ಉಬ್ಬರ, ಮಲಬದ್ಧತೆಯಂತಹ ತೊಂದರೆಗಳು ಕಡಿಮೆಯಾಗುತ್ತವೆ. ಎದೆ ಹಾಲು ಉಣಿಸುತ್ತಿರುವ ತಾಯಂದಿರಿಗಂತೂ ಮೆಂತೆ ತುಂಬಾ ಸಹಾಯಕ. ಒಂದು ಪುಟ್ಟ ಲೋಟದ ತುಂಬಾ ಮೆಂತೆಯನ್ನು ತೆಗೆದುಕೊಂಡು ಅದನ್ನು ನೆನಸಿಡಬೇಕು. ಚೆನ್ನಾಗಿ ಹಿಗ್ಗಿದ ನಂತರ ಅದನ್ನು ರುಬ್ಬಿ ಅದೇ ಲೋಟದಲ್ಲಿ ನಾಲ್ಕು ಲೋಟದಷ್ಟು ಬೆಲ್ಲ ಹಾಕಿ ಪಾಕ ಬರಿಸಬೇಕು. ಪಾಕ ಬರುತ್ತಿದ್ದಂತೇ ಮತ್ತೆ ನಾಲ್ಕು ಲೋಟ ತುಪ್ಪ ಹಾಕಿ ಚೆನ್ನಾಗಿ ಸೇರಿಸಿ ಇಟ್ಟುಕೊಳ್ಳಬೇಕು. ಇದನ್ನು ಬಾಣಂತಿಯು ದಿನಕ್ಕೊಮ್ಮೆ ಒಂದು ಚಮಚದಷ್ಟನ್ನು ಸೇವಿಸಿ ಒಂದು ಲೋಟ ಹಾಲು ಕುಡಿದರೆ ಎದೆ ಹಾಲು ಹೆಚ್ಚಾಗಲು ಸಹಾಯವಾಗುತ್ತದೆ.
ಜೊತೆಗೆ ಗರ್ಭಾಶಯವು ಮತ್ತೆ ಮೊದಲಿನ ಸ್ಥಿತಿಗೆ ಬರಲು ಸಹಾಯವಾಗುತ್ತದೆ. ಒಂದು ಚಮಚ ಮೆಂತೆ ಪುಡಿಯನ್ನು ಎರಡು ಲೋಟ ನೀರಿನಲ್ಲಿ ಕುದಿಸಿ ಅರ್ಧ ಲೋಟಕ್ಕೆ ಬತ್ತಿಸಿ ಇದು ಬಿಸಿ ಇರುವಾಗ ಒಂದು ಚಮಚ ತುಪ್ಪ ಹಾಕಿ ಸಂಜೆಯ ಸಮಯ ಸೇವಿಸಿದರೆ ಮಲಬದ್ಧತೆ ಮತ್ತು ಮೂಲವ್ಯಾಧಿ ಸಮಸ್ಯೆ ಇರುವವರಿಗೆ ಅನುಕೂಲವಾಗುತ್ತದೆ. ಸುಮಾರು 30 ಗ್ರಾಂನಷ್ಟು ಮೆಂತೆಯನ್ನು ಪುಡಿಮಾಡಿ ಒಂದು ಪಾತ್ರೆಗೆ ಹಾಕಿ ಅದಕ್ಕೆ ನೂರು ಮಿಲಿಯಷ್ಟು ಕೊಬ್ಬರಿ ಎಣ್ಣೆಯನ್ನು ಹಾಕಿ ನಾಲ್ಕೈದು ದಿನ ಬಿಸಿಲಿಗೆ ಇಟ್ಟು ನಂತರ ಈ ಎಣ್ಣೆಯನ್ನು ಸೋಸಿ ಇಟ್ಟುಕೊಂಡು ಇದನ್ನು ಪ್ರತಿನಿತ್ಯ ರಾತ್ರಿ ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ತುಂಬಾ ಅನುಕೂಲವಾಗುತ್ತದೆ. ಅಥವಾ ಮೆಂತೆಯನ್ನು ನೆನಸಿ ರುಬ್ಬಿದ ಪೇಸ್ಟ್ ಅನ್ನು ಕೊಬ್ಬರಿ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕುದಿಸಿ ನೀರಿನ ಅಂಶ ಪೂರ್ತಿ ಆವಿಯಾದ ನಂತರ ಸೋಸಿ ಆ ಎಣ್ಣೆಯನ್ನು ಬಳಸಿದರೆ ಇನ್ನೂ ಹೆಚ್ಚು ಪ್ರಯೋಜನಕಾರಿ. ಮೆಂತೆಯನ್ನು ಹೇರ್ಕಂಡೀಷನರ್ ಆಗಿಯೂ ಬಳಸಬಹುದು. ರಾತ್ರಿ ನೆನಸಿದ ಮೆಂತೆಯನ್ನು ಬೆಳಿಗ್ಗೆ ಪೇಸ್ಟ್ ಮಾಡಿಕೊಂಡು ಹೆಡ್ ಪ್ಯಾಕ್ ಮಾಡಿಕೊಂಡರೆ ಕೂದಲು ನಯವಾಗಿ ಒಳ್ಳೆಯ ಹೊಳಪು ಬರಲು ಕೂಡ ಸಹಾಯವಾಗುತ್ತದೆ.