ಕೋಲಾರ: ಫೆಂಗಲ್ ಚಂಡಮಾರುತದ ಅರ್ಭಟ ಜಿಲ್ಲೆಯಲ್ಲೂ ಜೋರಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಯ್ಲಿಗೆ ಬಂದಿರುವ ಬೆಳೆಗಳು ಹಾನಿಯಾಗುವ ಆತಂಕ ರೈತರಲ್ಲಿ ಮನೆಮಾಡಿದೆ.
ನಗರ ಸೇರಿ ಜಿಲ್ಲೆಯಾದ್ಯಂತ ಸತತ ಮೂರು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಸೋಮವಾರವೂ ಮಳೆಯ ಅರ್ಭಟ ಮುಂದುವರೆದಿದ್ದು, ಮಂಜಾನೆಯಿಂದಲೇ ಶುರುವಾಗಿರುವ ಮಳೆ ಬಿಡುವುಬಿಡದಂತೆ ಸುರಿಯುತ್ತಿದೆ. ಇದರಿಂದಾಗಿ ಸಾರ್ವಜನಿಕರ ಕೆಲ ಕಾರ್ಯಗಳಿಗೆ ಅಡ್ಡಿ ಉಂಟಾಗಿದೆ. ಅತಿಯಾದ ಶೀತ ಇದ್ದುದ್ದರಿಂದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಅಂಗನವಾಗಿ, ಶಾಲಾ, ಕಾಲೇಜುಗಳಿಗೆ ಸೋಮವಾರ ರಜೆ ನೀಡಿ ಆದೇಶಿಸಿದ್ದರು.
ಮಳೆ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ಕೆಲಸಗಳಿಗೆ ತೆರಳುವವರು ಪರದಾಡಬೇಕಾಯಿತು. ಕೆಲವರು ಸಕಾಲಕ್ಕೆ ಕಚೇರಿಗೆ ಆಗಮಿಸಿದರೆ, ಇನ್ನಕೆಲವರು ಮಳೆಯನ್ನೇ ನೆಪವಾಗಿಟ್ಟುಕೊಂಡು ಕಚೇರಿಗೆ ತಡವಾಗಿ ಆಗಮಿಸಿದರು. ಕೆಲಸಗಳಿಗಾಗಿ ಆಗಮಿಸಿದ್ದ ಜನ ತಾಸುಗಟ್ಟಲೇ ಕಾದುಕಾದು ಸುಸ್ತಾಗಿ ಮನೆಗಳಿಗೆ ವಾಪಸ್ ತೆರಳಿದರು.
ಚರಂಡಿ, ಯುಜಿಡಿಯಲ್ಲಿ ತ್ಯಾಜ್ಯ ಕಟ್ಟಿಕೊಂಡಿರುವುದರಿಂದ ಮಳೆಯ ನೀರು ಹರಿದು ಹೋಗಲು ಅವಕಾಶವಿಲ್ಲದೆ ತ್ಯಾಜ್ಯವೆಲ್ಲ ರಸ್ತೆಯ ಮೇಲೆ ಹರಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮಳೆ ಬರುವ ಮುನ್ಸೂಚನೆಯಿದ್ದರೂ ಸಹ ನಗರಸಭೆ, ಪುರಸಭೆಗಳ ಅಧಿಕಾರಿಗಳು ಚರಂಡಿಗಳಲ್ಲಿನ ತ್ಯಾಜ್ಯವನ್ನು ತೆರವುಗೊಳಿಸಲು ಕ್ರಮಗೊಳ್ಳದ ಕಾರಣ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುವಂತಾಯಿತು.
ಈಗಾಗಲೇ ನಗರದಲ್ಲಿ ಬಹುತೇಕ ರಸ್ತೆಗಳಲ್ಲಿ ಗುಂಡಿಗಳು ನಿರ್ಮಾಣವಾಗಿದೆ. ಮಳೆ ಬಿದ್ದು ನೀರು ರಸ್ತೆಯಲ್ಲಿ ಹರಿದ ಕಾರಣ ರಸ್ತೆಯಾವುದು?, ಗುಂಡಿ ಯಾವುದು? ಎಂದು ಗೋಚರವಾಗದೆ ವಾಹನ ಸವಾರರು ಅಯತಪ್ಪಿ ಬಿದ್ದ ಟನೆಗಳೂ ವರದಿಯಾಗಿದೆ. ಬಿದ್ದು, ಗಾಯಗೊಂಡಿದ್ದ ಸವಾರರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಹಾಗೂ ಜನಪ್ರಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದರು.
ನಗರದ ಗೌರಿಪೇಟೆ, ಆರ್ಜಿ ಬಡಾವಣೆಯಲ್ಲಿನ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಗುತ್ತಿಗೆದಾರ ಭೂಮಿ ಅಗೆದು ಸುಮಾರು ತಿಂಗಳುಗಳೇ ಕಳೆದಿದ್ದು, ಇದುವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಯಾಗಿರುವುದರಿಂದ ರಸ್ತೆಗಳು ಓಡಾಡಲು ಸೂಕ್ತವಿಲ್ಲದಂತಾಗಿವೆ. ಅಧಿಕಾರಿಗಳ ರ್ನಿಲಕ್ಷದಿಂದ ಕಾಮಗಾರಿಯೂ ವಿಳಂಬವಾಗುತ್ತಿದ್ದು, ಇನ್ನಾದರೂ ಎಚ್ಚೆತ್ತುಕೊಂಡು ಗುತ್ತಿಗೆದಾರರ ಮೇಲೆ ಒತ್ತಡ ತಂದು ಕೆಲಸಗಳನ್ನು ಪೂರ್ಣಗೊಳಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
* ಆರೋಗ್ಯದ ಮೇಲೆ ಪರಿಣಾಮ
ವಾತಾವರಣದಲ್ಲಿ ಏರುಪೇರಿನಿಂದ ಮಕ್ಕಳು, ವೃದ್ಧರಲ್ಲಿ ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಆಸ್ಪತ್ರೆಗಳಿಗೆ ರೋಗಿಗಳು ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಣ್ಣನೆಯ ವಾತಾವರಣದಿಂದ ಮಕ್ಕಳಲ್ಲಿ ಶೀತ ಜಾಸ್ತಿಯಾಗುತ್ತಿದೆ. ಇದು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
* ರಾಗಿ ಬೆಳೆ ಹಾನಿಯಾಗುವ ಭೀತಿ
ಮುಂಗಾರು ಹಂಗಾಮಿನಲ್ಲಿ ನಾಟಿ ಮಾಡಿರುವ ರಾಗಿ ಬೆಳೆ ಕಟಾವಿಗೆ ಬಂದಿದ್ದು, ರೈತರು ಕೊಯ್ಲು ಮಾಡುತ್ತಿದ್ದ ಸಂದರ್ಭಕ್ಕೆ ಸತತವಾಗಿ ಮಳೆ ಸುರಿಯುತ್ತಿರುವುದು ಲಸು ಹಾಳಾಗುವ ಭೀತಿ ಎದುರಾಗಿದೆ. ತೆನೆಕಟ್ಟಿ ನಿಂತಿರುವ ರಾಗಿ ಬೆಳೆಯು ನೆಲಕಚ್ಚುತ್ತಿದೆ. ಅವಧಿ ಮುಗಿರುವ ಬೆಳೆಯನ್ನು ಕಟಾವು ಮಾಡಲು ಆಗದೆ ತೆನೆಯಲ್ಲೇ ಮೊಳಕೆಯೊಡೆಯುತ್ತಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿ ಬಾರದಂತಾಗಿದ್ದು, ರೈತರು ಸಂಕಷ್ಟಕ್ಕೆ ಒಳಗಾಗುವ ಭೀತಿ ಕಾಡುತ್ತಿದೆ.
* ಆರೆಂಜ್ ಅರ್ಲಟ್ ಘೋಷಣೆ
ಕೋಲಾರದ ಹವಾಮಾನ ಇಲಖೆಯ ವರದಿಯಂತೆ ಬಂಗಾಳಕೊಲ್ಲಿ ಮೇಲೆ ಉಂಟಾಗಿರುವ ಫೆಂಗಲ್ ಚಂಡಮಾರುತದ ಪರಿಣಾಮ ಜಿಲ್ಲೆಯಾದ್ಯಂತ ಡಿ.3 ಮತ್ತು 4ರವರೆಗೆ ಉಂಟಾಗುವ ಸಾಧ್ಯತೆಯಿದ್ದು, ಆರೆಂಜ್ ಅರ್ಲಟ್ ಘೋಷಿಸಲಾಗಿದೆ. ಮುಂದಿನ ಇನ್ನೂ ಎರಡು ದಿನ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂದು ಸೂಚಿಸಿದೆ.
* ಬೆಳೆ ನಿರ್ವಹಣಾ ಕ್ರಮ ಅಗತ್ಯ
ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ, ಸತತ ಮಳೆಯಾಗುತ್ತಿರುವುದರಿಂದ ತೋಟಗಾರಿಕೆ ಬೆಳೆಗಳಲ್ಲಿ ಕೈಗೊಳ್ಳಬೇಕಾಗಿರುವ ನಿರ್ವಹಣಾ ಕ್ರಮಗಳ ಬಗ್ಗೆ ಕೋಲಾರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಗಳು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಬೆಳೆಯ ತೋಟದಲ್ಲಿ ನಿಂತಿರುವ ನೀರನ್ನು ಹೊರಗೆ ತೆಗೆದು ಹಾಕಿ, ತೇವಾಂಶವನ್ನು ಕಡಿಮೆಗೊಳಿಸಲು ಬಸಿಲುಗಾಲುವೆ ಮಾಡಬೇಕು. ಯಾವುದೇ ಗೊಬ್ಬರಗಳನ್ನು, ಭೂಮಿಯ ತೇವಾಂಶ ಒಣಗುವ ತನಕ ನೀರು ಹರಿಸಬಾರದು. ಪೋಷಕಾಂಶಗಳ ಸಿಂಪರಣೆ ಮಾಡುವುದರಿಂದ ಮಳೆಯಿಂದಾದ ಪೋಷಕಾಂಶಗಳ ಕೊರತೆಯನ್ನು ನಿಗಿಸುವುದರ ಜತೆಗೆ ಇಳುವರಿ ಕುಠಿಂತವನ್ನು ತಡೆಯಲು ಸಾಧ್ಯವಾಗುತ್ತದೆ. ಮಳೆ ಬಿಡುವು ಕೊಟ್ಟಾಗ ತರಕಾರಿ ಬೆಳೆಗಳು ಮೊದಲ ಬೆಳವಣಿಗೆ ಹಂತದಲ್ಲಿದ್ದರೆ, 19:19:19 ರಸಗೊಬ್ಬರವನ್ನು ಪ್ರತಿ ಲೀಟರ್ ನೀರಿಗೆ 2-5 ಗ್ರಾಂ. ನಂತೆ ಬೆರೆಸಿ ಸಿಂಪಡಿಸಿ ಅಥವಾ ನ್ಯಾನೋ ಯೂರಿಯಾವನ್ನು 4 ಮಿ. ಲೀಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಿ. ಪ್ಲಾಸ್ಟಿಕ್ ಹೋದಿಕೆಯನ್ನು ಬಳಸದೇ ಇರುವ ಬೆಳೆಗಳಲ್ಲಿ ಮಣ್ಣನ್ನು ಏರಿಸಿ. ಇದರಿಂದ ಬೆಳೆಗಳಲ್ಲಿ ಹೊಸ ಬೇರುಗಳ ಬೆಳವಣಿಗೆಗೆ ಸಹಾಯ ಮಾಡಬೇಕು. ಟೊಮ್ಯಾಟೊ ಮತ್ತು ಬಳ್ಳಿ ತರಕಾರಿಗಳನ್ನು ಎತ್ತಿ ಕಟ್ಟುವಾಗ ಗಿಡಗಳ ಮಧ್ಯ ಸಾಕಷ್ಟು ಗಾಳಿ ಮತ್ತು ಬೆಳಕು ಆಡುವಂತೆ ಇರಬೇಕು.