ಇತ್ತೀಚಿನ ವರ್ಷಗಳಲ್ಲಿ ಮಹಿಳೆ ಎಲ್ಲ ರಂಗಗಳಲ್ಲೂ ಸಾಧನೆಯ ಛಾಪು ಮೂಡಿಸಿರುವುದು ಹೆಮ್ಮೆಯ ಸಂಗತಿಯೇ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದಿಂದ ಹಿಡಿದು ನವೋದ್ಯಮದವರೆಗೆ, ಕೃಷಿಯಿಂದ ಹಿಡಿದು ಉದ್ಯೋಗ ಕ್ಷೇತ್ರದ ಆಯಕಟ್ಟಿನ ಸ್ಥಳಗಳಲ್ಲಿ, ಸೇನೆಯಲ್ಲಿ ಸ್ತ್ರೀಶಕ್ತಿ ವಿಜೃಂಭಿಸುತ್ತಿರುವುದು, ಕರ್ತೃತ್ವಬಲದಿಂದ ಗಮನ ಸೆಳೆಯುತ್ತಿರುವುದು ವಿಶೇಷವೇ ಸರಿ.
ಆದರೆ, ಕಾಲದ ಓಟದಲ್ಲಿ ಸೃಷ್ಟಿಯಾಗುವ ಸ್ಥಿತ್ಯಂತರಗಳು ಪರಿಸ್ಥಿತಿಗಳನ್ನೇ ಬದಲಾಯಿಸಿ ಬಿಡುತ್ತವೆ. ಇದಕ್ಕೆ ಇತ್ತೀಚಿನ ನಿದರ್ಶನ ಕರೊನಾ ಕಾಲಘಟ್ಟ. ವಿಶ್ವದ ಆರ್ಥಿಕತೆಯನ್ನೇ ಅಲುಗಾಡಿಸಿದ ಕರೊನಾ ಸಾಂಕ್ರಾಮಿಕ ಹಾವಳಿಯಿಂದ ಭಾರತದಲ್ಲೂ ಹಲವು ಅಡ್ಡಪರಿಣಾಮಗಳು ಕಂಡುಬಂದವು. ಅತಿ ಸಣ್ಣ, ಸಣ್ಣ, ಮಧ್ಯಮ ಕೈಗಾರಿಕೆಗಳು ಸೇರಿದಂತೆ ಹಲವು ವಲಯಗಳು ಅಪಾರ ನಷ್ಟ ಅನುಭವಿಸಿದವು. ಇದರ ಪರಿಣಾಮವಾಗಿ, ಉದ್ಯೋಗನಷ್ಟವೂ ದೊಡ್ಡಪ್ರಮಾಣದಲ್ಲಾಯಿತು. ಈ ಅವಧಿಯಲ್ಲಿ ಪುರುಷ ಸಿಬ್ಬಂದಿ ಕೆಲಸ ಕಳೆದುಕೊಂಡರಾದರೂ, ಹೆಚ್ಚಿನ ಸಂಖ್ಯೆ ಮಹಿಳೆಯರದ್ದು. ಭಾರತದಲ್ಲಿ ಕರೊನಾ ನಿಯಂತ್ರಣಕ್ಕೆ ಬಂದು ಆರ್ಥಿಕ ಚಟುವಟಿಕೆಗಳು ಸಾಮಾನ್ಯ ಸ್ಥಿತಿಗೆ ಮರಳುತ್ತಿವೆ. ಹೊಸ ನೇಮಕಾತಿಗಳು ನಡೆಯುತ್ತಿವೆ. ಆದರೆ, ಹೊಸ ನೇಮಕಾತಿಗಳಲ್ಲೂ ಮಹಿಳೆಯರ ಪ್ರಮಾಣ ಕುಸಿದಿರುವುದು ಕಳವಳದ ಸಂಗತಿ.
ಉದ್ಯೋಗ ಕಳೆದುಕೊಂಡ ಮಹಿಳೆಯರಿಗೆ ಪುನಃ ಕೆಲಸ ಕೊಡದಿರುವುದರಿಂದ ಜಾಗತಿಕವಾಗಿ ಟ್ರಿಲಿಯಗಟ್ಟಲೆ ಡಾಲರ್ ಹಣ ನಷ್ಟವಾಗಲಿದೆ ಎಂದು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಭಾರತದಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆ 2022ರಲ್ಲಿ ಶೇಕಡ 9ರಷ್ಟು ಕುಸಿದಿದ್ದು ಇದು ಆರ್ಥಿಕತೆಗೆ ವಿನಾಶಕಾರಿ ವಿದ್ಯಮಾನವಾಗಿದೆ ಎಂದು ಮುಂಬೈಯ ಆರ್ಥಿಕ ತಜ್ಞರು ಹೇಳಿದ್ದಾರೆ. ‘ಈಗ ಆರ್ಥಿಕ ಚಟುವಟಿಕೆಗಳು ಗರಿಗೆದರುತ್ತಿವೆಯಾದರೂ ಸ್ತ್ರೀ ಸಮೂಹ ಉದ್ಯೋಗ ಕಳೆದುಕೊಳ್ಳುತ್ತಿರುವುದು ಶೋಚನೀಯ’ ಎಂದಿದ್ದಾರೆ ತಜ್ಞರು. ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಕೆಲ ದಶಕಗಳ ಮುನ್ನ ಉದ್ಯೋಗ ರಂಗದಲ್ಲಿ ಮಹಿಳೆಯರ ಕುರಿತಾಗಿ ತಾರತಮ್ಯದ ನೀತಿ ಇದ್ದದ್ದು ಹೌದು. ಕ್ರಮೇಣ ಪರಿಸ್ಥಿತಿ ಬದಲಾಗುತ್ತ ಬಂತು. ಕಾರ್ಯದಕ್ಷತೆ, ಹೊಸ ಕೌಶಲಗಳನ್ನು ಬೇಗನೆ ಕಲಿಯುವ ಚಾಕಚಕ್ಯತೆ, ಸವಾಲುಗಳನ್ನು ನಿಭಾಯಿಸುವ ಬದ್ಧತೆ, ತಂಡವನ್ನು ಮುನ್ನಡೆಸುವ ಸಾಮರ್ಥ್ಯ ಹೀಗೆ ಹಲವು ಸಕಾರಾತ್ಮಕ ಅಂಶಗಳಿಂದಾಗಿ ಮಹಿಳಾ ಉದ್ಯೋಗಿಗಳ ಸಂಖ್ಯೆ ಎಲ್ಲ ಕ್ಷೇತ್ರಗಳಲ್ಲೂ ಗಣನೀಯವಾಗಿ ಏರತೊಡಗಿತು. ಕರೊನಾ ಕಾಲದ್ದು ಅನಿವಾರ್ಯ ಸ್ಥಿತಿ ಎನ್ನಬಹುದಾದರೂ, ಈಗ ಮಹಿಳಾ ಉದ್ಯೋಗಿಗಳನ್ನು ಕಡೆಗಣಿಸುತ್ತಿರುವುದು ಏಕೆ? ಈ ಪ್ರಶ್ನೆಗೆ ಸರ್ಕಾರಿ ಅಥವಾ ಖಾಸಗಿ ರಂಗ ಉತ್ತರಿಸುತ್ತಿಲ್ಲ. ಭಾರತ ಮಾತ್ರವಲ್ಲದೆ ಜಾಗತಿಕವಾಗಿ ಈ ಹೊಸ ಸವಾಲು ಸೃಷ್ಟಿಯಾಗಿದೆ.
ಖಂಡಿತವಾಗಿಯೂ ಈ ಬೆಳವಣಿಗೆ ಅಭಿವೃದ್ಧಿ ಆಶಯಕ್ಕೆ ವಿರುದ್ಧವಾದದ್ದು. ಈಗಿನ ವಿದ್ಯಾವಂತ ಮಹಿಳೆಯರು ಕುಟುಂಬದ ನಿರ್ವಹಣೆ ಮತ್ತು ಉದ್ಯೋಗದ ಜವಾಬ್ದಾರಿ ಎರಡನ್ನೂ ಸಮತೋಲನ ಮಾಡುವ ಸಾಮರ್ಥ್ಯ ಹೊಂದಿದ್ದಾರೆ. ಅಲ್ಲದೆ, ಸ್ವಾವಲಂಬಿಯಾಗಿ ಬದುಕಬೇಕೆಂಬ ಅವರ ಆಶಯಕ್ಕೂ ಇದು ಪೂರಕವಾಗಿದೆ. ಮಹಿಳೆಯರ ಸಬಲೀಕರಣ ವಿಷಯದಲ್ಲಿ ಸರ್ಕಾರ, ಸಮಾಜ ಮುಂದಡಿ ಇಡಬೇಕೆ ಹೊರತು, ಹಿನ್ನಡೆ ಅನುಭವಿಸಬಾರದು. ಹಾಗಾಗಿ, ವಾಸ್ತವ ಕಾರಣವನ್ನು ಶೋಧಿಸಿ ಮತ್ತೆ ಮಹಿಳೆಯರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಪ್ರಯತ್ನ ಸರ್ಕಾರಿ ವಲಯ ಮತ್ತು ಖಾಸಗಿ ರಂಗ ಎರಡರಿಂದಲೂ ನಡೆಯಬೇಕಿದೆ.