ನ್ಯೂಸ್

UPI ವಹಿವಾಟಿಗೆ ಶುಲ್ಕ!? ಆಗಸ್ಟ್ 1ರಿಂದ ಹಲವು ಬದಲಾವಣೆ: RBI ಗವರ್ನರ್ ಹೇಳಿದ್ದೇನು?

UPI: ಆನ್​ಲೈನ್ PhonePe, Gpay, Paytm ನಂತಹ ಯುಪಿಐ ಪಾವತಿಗಳಿಗೆ ಸಂಬಂಧಿಸಿದಂತೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ(NPCI) ಈಗಾಗಲೇ ಘೋಷಿಸಿರುವ ಹೊಸ ನಿಯಮಗಳು ಆಗಸ್ಟ್ 1ರಿಂದ ಜಾರಿಗೆ ಬರಲಿವೆ. ಆಟೋ-ಪೇ, ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲನೆ ಅಂತಹ ಸೇವೆಗಳಲ್ಲಿ ಹಲವು ಬದಲಾವಣೆಗಳಾಗಲಿವೆ.

UPI ಸೇವೆಗಳನ್ನು ಹೆಚ್ಚು ವಿಶ್ವಾಸಾರ್ಹ ಮತ್ತು ತೊಂದರೆ-ಮುಕ್ತವಾಗಿಸಲು, ಗರಿಷ್ಠ ಪಾವತಿ ಅವಧಿಯಲ್ಲಿ ಅಡಚಣೆಗಳನ್ನು ತಪ್ಪಿಸಲು ಈ ಹೊಸ ನಿಯಮಗಳನ್ನು ಜಾರಿಗೆ ತರುವುದಾಗಿ NPCI ಹೇಳಿದೆ.

ಯಾವ ಸೇವೆಗಳಲ್ಲಿ ಬದಲಾವಣೆ

ಹೊಸ ನಿಯಮಗಳ ಪ್ರಕಾರ ನೆಟ್​ಫ್ಲಿಕ್ಸ್​, ಮ್ಯೂಚುವಲ್ ಫಂಡ್​, ಚಂದಾದಾರಿಕೆಗಳು, ಯುಟಿಲಿಟಿ ಬಿಲ್‌ಗಳು, ಇಎಂಐ ಪಾವತಿಯಂತಹ ಆಟೋ ಪೇ ಪಾವತಿಗಳನ್ನು ಇನ್ಮುಂದೆ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ಮಾಡಲಾಗುತ್ತದೆ. ಮೊದಲಿನಂತೆ ದಿನವಿಡೀ ಮಾಡಲಾಗುವುದಿಲ್ಲ.

ಯುಪಿಐ ಪ್ಲಾಟ್ ಫಾರ್ಮ್​​ ಮೇಲಿನ ಒತ್ತಡ ಕಡಿಮೆ ಮಾಡಲು ಆಟೋ ಪೇಮೆಂಟ್​ಗಳಿಗೆ ನಿರ್ಧಿಷ್ಟ ಸಮಯ ನಿಗದಿ ಪಡಿಸುಲಾಗುತ್ತಿದೆ. ಆಗಸ್ಟ್ 1ರಿಂದ ಕೇವಲ ಮೂರು ಸಮಯಗಳಲ್ಲಿ ಮಾತ್ರ ಆಟೋ ಪೇ ಮಾಡಬಹುದು. ಬೆಳಗ್ಗೆ 10 ಗಂಟೆ ಒಳಗೆ, ಮಧ್ಯಾಹ್ನ 1 ಗಂಟೆಯಿಂದ 5 ಗಂಟೆವೆರೆಗೆ ಹಾಗೂ ರಾತ್ರಿ 9.30ರ ಬಳಿಕ ಮಾಡಬಹುದು.

ಹಾಗೆಯೇ UPI ಮೂಲಕ ಇನ್ಮುಂದೆ ದಿನಕ್ಕೆ 50 ಬಾರಿ ಮಾತ್ರ ತಮ್ಮ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಬಹುದು. ವಿಫಲ ವಹಿವಾಟಿಗೆ ದಿನಕ್ಕೆ 90 ಸೆಕೆಂಡುಗಳ ಅಂತರದಲ್ಲಿ ಕೇವಲ 3 ಬಾರಿ ಮಾತ್ರ ಅವಕಾಶ ಇರುತ್ತದೆ.

ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ 

ಯುಪಿಐ ಪಾವತಿಗಳು ಇನ್ಮುಂದೆ ಉಚಿತವಲ್ಲ, ಮುಂಬರುವ ದಿನಗಳಲ್ಲಿ ಶುಲ್ಕ ವಿಧಿಸುವ ಕುರಿತು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಸುಳಿವು ನೀಡಿದ್ದಾರೆ.

ಮುಂಬೈನ ಕಾರ್ಯಕ್ರಮವೊಂದರಲ್ಲಿ ಸಂಜಯ್ ಮಲ್ಹೋತ್ರಾ ಮಾತನಾಡಿ, "ಯುಪಿಐ ಪಾವತಿ ವ್ಯವಸ್ಥೆಗೆ ಆರ್ಥಿಕ ಸ್ಥಿರತೆಯನ್ನು ಒದಗಿಸುವ ಅವಶ್ಯಕತೆಯಿದೆ. ಪ್ರಸ್ತುತ ಸರ್ಕಾರವು ಸಬ್ಸಿಡಿ ರೂಪದಲ್ಲಿ ಪಾವತಿಗಳ ವೆಚ್ಚವನ್ನು ಭರಿಸುತ್ತಿದೆ, ಈ ವ್ಯವಸ್ಥೆಯು ಹೆಚ್ಚು ಕಾಲ ಉಳಿಯುವುದಿಲ್ಲ. ಯಾವುದೇ ಸೇವೆ ಸುಸ್ಥಿರವಾಗಿ ಮುಂದುವರಿಯಲು ಸ್ವಲ್ಪ ಹಣವನ್ನು ಪಾವತಿಸಬೇಕಾಗುತ್ತದೆ" ಎಂದು ಹೇಳಿದ್ದಾರೆ.

"ಪ್ರಸ್ತುತ, ಭಾರತದಲ್ಲಿ ಯುಪಿಐ ಆಧಾರಿತ ಪಾವತಿಗಳ ಸಂಖ್ಯೆ ಅಭೂತಪೂರ್ವ ಮಟ್ಟವನ್ನು ತಲುಪಿದೆ. ಇದಕ್ಕೆ ಅಗತ್ಯವಿರುವ ಮೂಲಸೌಕರ್ಯವನ್ನು ಬ್ಯಾಂಕುಗಳು, ಪಾವತಿ ಸೇವಾ ಪೂರೈಕೆದಾರರು ಮತ್ತು ಎನ್‌ಪಿಸಿಐ ನಿರ್ವಹಿಸುತ್ತಿವೆ. ಪರಿಣಾಮವಾಗಿ, ಗ್ರಾಹಕರು ಈ ಸೇವೆಗಳನ್ನು ಉಚಿತವಾಗಿ ಪಡೆಯಲು ಸಾಧ್ಯವಾಗುತ್ತದೆ. ಆದರೆ ಇದೇ ವ್ಯವಸ್ಥೆ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ" ಎಂದು ಮುಂಬರುವ ದಿನಗಳಲ್ಲಿ ಪಾವತಿಗಳಿಗೆ ಶುಲ್ಕ ವಿಧಿಸುವ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್)