ಸಾರ್ವಭೌಮತೆ ನಾಲ್ಕು ಗುಣಕೆ ಗುಣರಾಜ್ಯದಲಿ |
ಧೈರ್ಯ ಮೊದಲನೆಯದೆರಡನೆಯದು ಮತಿಯೋಜೆ ||
ಸರ್ವದಯೆ ಮೂರನೆಯದದುವೆ ನೀತಿಯ ಮೂಲ |
ನಿರ್ಮಮತ್ವವೇ ಮುಕುಟ - ಮಂಕುತಿಮ್ಮ ||
ನಿಸರ್ಗದ ಪ್ರಭಾವಕ್ಕೆ ಒಳಗಾಗಿ ಬಾಳಬೇಕಾದ ಮಾನವನಲ್ಲಿ, ಇರುವ ನೈಜ ಶಕ್ತಿಯನ್ನು, ಸಹಜ ಸ್ವಭಾವವನ್ನು ಗುಣ ಎನ್ನುತ್ತಾರೆ. ಗುಣದ ಮೂಲಕವೇ ವ್ಯಕ್ತಿಗೆ ಇನ್ನೊಂದು ವ್ಯಕ್ತಿಯ ಜೊತೆಗೆ ಸೌಹಾರ್ದ ಸಂಬಂಧವೋ, ಹಗೆಯೋ ಏರ್ಪಡುತ್ತದೆ. ಮನುಷ್ಯನಲ್ಲಿ ಪ್ರಾಕೃತಿಕವಾಗಿಯೇ ಸಾತ್ತಿ್ವಕ, ರಾಜಸ, ತಾಮಸಿಕಗಳೆಂಬ ಗುಣಗಳು ಇದ್ದೇ ಇರುತ್ತವೆ. ಇವುಗಳ ಅಸಮ ಬೆರಕೆಯಿಂದಾದ ಹಲವು ಗುಣಗಳು ಪ್ರಕಟಗೊಳ್ಳುತ್ತಿರುತ್ತವೆ. ಬ್ರಹ್ಮಾನುಭವ ಪಡೆಯಲು ಹೊರಟ ಸಾಧಕನು ಇವುಗಳನ್ನು ಮೀರಿ ನಡೆಯಲು ಯತ್ನಿಸುತ್ತಾನೆ.
ಸತ್ತ್ವಗುಣ ಬಲಗೊಂಡರೆ ನಿರ್ಮಲ ಸ್ವಭಾವವು ಮೇಳೈಸುತ್ತದೆ, ಜ್ಞಾನಪಥದಲ್ಲಿ ಸಾಗುವ ಹಂಬಲವಿರುತ್ತದೆ. ಪರಿಣಾಮವಾಗಿ ವ್ಯಕ್ತಿ ಉನ್ನತವಾಗಿ ಬಾಳುತ್ತಾನೆ. ರಜೋಗುಣವು ಕಾಮ, ಕ್ರೋಧಗಳನ್ನು ಪ್ರೇರೇಪಿಸುತ್ತದೆ. ಕರ್ಮಪ್ರವೃತ್ತಿ, ಆವೇಶ, ಉದ್ವೇಗ, ತೀರದ ಆಸೆ ಮುಂತಾದವುಗಳಿಂದಾಗಿ ವ್ಯಕ್ತಿ ಇಹಜೀವನದ ಹೋರಾಟದಲ್ಲಿ ಮುಳುಗುತ್ತಿರುತ್ತಾನೆ. ತಮೋಗುಣದಲ್ಲಿ ಮೋಹ, ಅಜ್ಞಾನ, ಆಲಸ್ಯಗಳ ಪರಿಣಾಮವಾಗಿ ವ್ಯಕ್ತಿ ಸದಾ ದುಃಖಿತನಾಗಿರುತ್ತಾನೆ. ಈ ಮೂರು ಗುಣಗಳೂ ಜಗದ ಜೀವನದ ನಿರಂತರತೆಗೆ ಬೇಕೇ ಬೇಕು, ಮತ್ತು ಅವು ಅಸಮವಾಗಿ ಬೆರೆತಿರಬೇಕು. ಹಾಗಾಗಿಯೇ ವ್ಯಕ್ತಿಯಲ್ಲಿ ಹಲವು ಸ್ವಭಾವಗಳು ಆಗಿಂದಾಗ್ಗೆ ಪ್ರಕಟಗೊಳ್ಳುತ್ತವೆ.
ಸಾತ್ತಿ್ವಕತೆಯು ವಿವೇಕದಿಂದ ಪರಿಪೋಷಿಸಲ್ಪಟ್ಟಾಗ ವ್ಯಕ್ತಿಯಲ್ಲಿ ಸದ್ಗುಣಗಳು ಸಹಜವಾಗಿರುತ್ತವೆ. ಅವುಗಳಲ್ಲಿ ಧೈರ್ಯ, ಬುದ್ಧಿವಂತಿಕೆ, ದಯೆ, ನಿರ್ಮಮ ಇವು ಸಾರ್ವಭೌಮ ಗುಣಗಳು ಎನ್ನುತ್ತದೆ ಈ ಕಗ್ಗ. ಧೈರ್ಯವು ಲೌಕಿಕ ಬದುಕಿನ ಆಕರ್ಷಣೆಗಳಿಂದ, ಭ್ರಮೆಯುಂಟುಮಾಡುವ ವಿಷಯಗಳಿಂದ ದೂರವುಳಿಯಲು ಆಧಾರವಾಗುತ್ತದೆ. ಸಾಧಕನಾಗಲು ಧೈರ್ಯ ಅಗತ್ಯವಾಗಿ ಬೇಕು.
ಬುದ್ಧಿಯು ಭಾವದ ಹಿಡಿತಕ್ಕೆ ಸಿಲುಕದೆ, ಲೋಕವ್ಯವಹಾರವನ್ನು ಸೂಕ್ಷ್ಮವಾಗಿ ಅವಲೋಕಿಸುತ್ತ, ಅವೆಲ್ಲವನ್ನೂ ಸಂಯೋಜಿಸಿರುವ ಬ್ರಹ್ಮಚೈತನ್ಯವನ್ನು ಅರ್ಥಮಾಡಿಕೊಳ್ಳುವಷ್ಟು ಹರಿತವಾಗಬೇಕು. ಬುದ್ಧಿ ಎಚ್ಚರಗೊಂಡರೆ ವ್ಯಕ್ತಿ ಸರಿ-ತಪ್ಪುಗಳನ್ನು ಅರ್ಥೈಸಿಕೊಳ್ಳಬಲ್ಲ, ನ್ಯಾಯ-ಅನ್ಯಾಯದ ವಿವೇಚನೆ ಮಾಡಬಲ್ಲ. ನೀತಿ-ಧರ್ಮದ ದಾರಿಯಲ್ಲಿರಲು ಬುದ್ಧಿಯ ಬೆಳಕು ಅವಶ್ಯವಾಗಿ ಬೇಕು.
ಸರ್ವ ಪ್ರಾಣಿಗಳಲ್ಲೂ ದಯೆ ತೋರುವ ಸ್ವಭಾವವು ವ್ಯಕ್ತಿತ್ವದ ಭಾಗವಾಗಿದ್ದರೆ, ಸಮಾಜವೂ ಶಾಂತಿ-ಸೌಖ್ಯವನ್ನು ಅನುಭವಿಸುತ್ತದೆ. ಕಷ್ಟದಲ್ಲಿರುವ ಜೀವಗಳಿಗೆ ಸಹಾಯ ಮಾಡುತ್ತ ಲೋಕಹಿತಕ್ಕಾಗಿ ಶ್ರಮಿಸುವವರು ಸಮಾಜದ ಉಸಿರಾಗಿರುತ್ತಾರೆ.
ಮೇಲಿನ ಮೂರು ಗುಣಗಳಿದ್ದರೂ ನನ್ನದು ಎಂಬ ಮಮತೆ ಬಲಗೊಂಡಿದ್ದರೆ ಜೀವೋತ್ಕರ್ಷ ಸಾಧ್ಯವಿಲ್ಲ. ಇದಕ್ಕೆ ನಿರ್ಮಮತೆ ಅತ್ಯಗತ್ಯ. ಧೈರ್ಯದಿಂದ ನಡೆದ ಹಾದಿಯ ಬಗ್ಗೆ, ಬುದ್ಧಿವಂತಿಕೆಯಿಂದ ಪಡೆದುದರ ಬಗ್ಗೆ, ತಾನು ತೋರಿದ ದಯೆ-ಅನುಕಂಪಗಳ ಬಗ್ಗೆ ವ್ಯಕ್ತಿ ಮಮಕಾರ ಹೊಂದಿದ್ದರೆ ಎಲ್ಲ ಸಾಧನೆಯೂ ವ್ಯರ್ಥ. ಈ ನಾಲ್ಕು ಗುಣಗಳಿಗೂ ನಿರ್ಮಮತೆ ಮುಕುಟಪ್ರಾಯವಾದುದು. ಅದು ಲೋಕಜೀವನಕ್ಕೆ ಅಂಟಿಕೊಳ್ಳದಂತೆ ನೋಡಿಕೊಳ್ಳುತ್ತದೆ. ಹೀಗೆ ಧೈರ್ಯ, ಬುದ್ಧಿ, ದಯೆ, ಮಮಕಾರವಿರದ ಸ್ವಭಾವವು ಜೀವನವನ್ನು ಅರ್ಥಪೂರ್ಣವಾಗಿಸುತ್ತದೆ. ಲೋಕದ ಶಾಂತಿಗೆ ಪ್ರೇರಕವಾಗುತ್ತದೆ.