ನ್ಯೂಸ್

ಅಳಿದ ಭ್ರಾಂತಿ ಮತ್ತು ನಿಲದ ಭಾವ

vijayavani

ಮರುಳುತಲೆ ಹುರುಳುತಲೆ ನೀನೇ ದೇವಾ

ಹೆಂಗೂಸು ಗಂಡುಗೂಸು ನೀನೇ ದೇವಾ

ಎಮ್ಮಕ್ಕನ ಗಂಡ ನೀನೇ ದೇವಾ

ಕೂಡಲಸಂಗಮದೇವಾ

ಭ್ರಾಂತಳಿದು ಭಾವ ನಿಂದುದಾಗಿ.

ಪ್ರಸ್ತುತ ವಚನವು ಕೂಡಲಸಂಗಮದೇವನ ಸಂಬೋಧನೆಯಲ್ಲಿದೆ. ಅಲ್ಲದೆ ಇಲ್ಲೊಂದು ನಿವೇದನೆಯೂ ಇದೆ. ಅದು ಕೆಲವೊಂದು ವಿವರಗಳನ್ನು ಮುಂದಿಡುತ್ತಿದೆ. ಈ ವಿವರಗಳ ಮೂಲಕವೇ ಕೂಡಲಸಂಗಮನಿಗೆ ಸಂಬಂಧಿಸಿದ ‘ಕಂಡುಕೊಳ್ಳುವಿಕೆ’ಯೊಂದು ತೆರೆದುಕೊಳ್ಳುತ್ತಿದೆ. ಕೂಡಲಸಂಗಮನ ಬಗೆಗೆ ಕಂಡುಕೊಂಡದ್ದನ್ನು ಕೂಡಲಸಂಗಮನಿಗೇ ನಿವೇದಿಸಲಾಗುತ್ತಿದೆ. ಈ ಮೂಲಕ ಇಲ್ಲಿ ಕೂಡಲಸಂಗಮನ ಸ್ಥಾಪನೆಯೂ ಬೇರೊಂದು ಬಗೆಯಲ್ಲಿ ಆಗುತ್ತಿದೆ.

ಮೊದಲಿಗೇ ಕಾಣುವಂತೆ ಇಲ್ಲಿ ಲೋಕವ್ಯಕ್ತಿಗಳಿಗೆ ಸಂಬಂಧಿಸಿದ ಕೆಲವು ವಿವರಗಳಿವೆ. ಇವು ಸಾಮಾನ್ಯವಾದ ಗ್ರಹಿಕೆಯೊಂದರಲ್ಲಿ ಲೋಕವ್ಯಕ್ತಿಗಳ ಗುರುತಿನ ಚಹರೆಗಳೂ ಆಗಿವೆ. ಅಲ್ಲದೆ ಈ ಗುರುತಿನ ಚಹರೆಗಳು ಲೋಕವ್ಯಕ್ತಿಗಳ ಒಂದು ವರ್ಗೀಕರಣಕ್ಕೂ ಆಧಾರವಾಗಿ ಬಳಕೆಯಾಗುತ್ತವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ಅದು ಲೋಕವನ್ನು ಗ್ರಹಿಸುವ ಒಂದು ವಿಧಾನವೂ ಆಗಿದೆ. ಈ ವಿಧಾನದಲ್ಲಿಯೇ ಲೋಕಕ್ಕೂ ತನಗೂ ಇರುವ ಸಂಬಂಧವನ್ನು ಕೂಡ ಸ್ಥಾಪಿಸಿಕೊಳ್ಳಲಾಗುತ್ತದೆ. ಇಷ್ಟರ ಮೇಲೆ, ಇನ್ನೊಂದು ಕಡೆಯಲ್ಲಿ ಇದು ತನ್ನ ಗುರುತಿನ ಚಹರೆಯನ್ನು ತಾನು ಸ್ಥಾಪಿಸಿಕೊಳ್ಳುವ ವಿಧಾನವೂ ಆಗಿದೆ.

ಲೋಕದ ಗ್ರಹಿಕೆ ವ್ಯಕ್ತಿಗಳನ್ನು ಮರಳುತಲೆ ಮತ್ತು ಹುರುಳುತಲೆ ಎಂದು ವಿಂಗಡಿಸುತ್ತದೆ; ಹೆಂಗೂಸು ಮತ್ತು ಗಂಡುಗೂಸು ಎಂದು ವಿಂಗಡಿಸುತ್ತದೆ; ಸಂಬಂಧವಾಚಕಗಳಲ್ಲಿ ತನ್ನವರನ್ನು ಹಾಗೂ ತನ್ನವರಲ್ಲದವರನ್ನು ವಿಂಗಡಿಸುತ್ತದೆ. ಈ ವಿಂಗಡಣೆಯ ಹಿಂದೆ ಒಂದು ಮೌಲ್ಯನಿರ್ಣಯವಿದೆ. ಅದು ತನ್ನನ್ನು ಕೇಂದ್ರದಲ್ಲಿ ಇರಿಸಿಕೊಂಡ ಮೌಲ್ಯನಿರ್ಣಯವಾಗಿದೆ. ಅದು ಮೊದಲು ತನ್ನನ್ನು ತಾನು ಮೌಲ್ಯನಿರ್ಣಯ ಮಾಡಿಕೊಳ್ಳುತ್ತದೆ. ಹಾಗಾಗಿಯೇ ತನ್ನನ್ನು ಕೇಂದ್ರದಲ್ಲಿ ಸ್ಥಾಪಿಸಿಕೊಳ್ಳುತ್ತದೆ. ಬಳಿಕ ಪರಿಧಿಯಲ್ಲಿನ ಎಲ್ಲವನ್ನೂ ತನ್ನ ಹಿತದ ಸಂಬಂಧದಲ್ಲಿ ಮೌಲ್ಯನಿರ್ಣಯ ಮಾಡಿ ಅವುಗಳ ಒಂದು ಸ್ಥಾನೀಕರಣವನ್ನೂ ಮಾಡುತ್ತದೆ. ಹೀಗಾಗಿಯೇ ಲೋಕವ್ಯಕ್ತಿಗಳು ಅದರ ದೃಷ್ಟಿಯಲ್ಲಿ ಮರುಳುತಲೆಗಳಾಗುತ್ತಾರೆ ಅಥವಾ ಹುರುಳುತಲೆಗಳಾಗುತ್ತಾರೆ; ಹೆಂಗೂಸುಗಳಾಗುತ್ತಾರೆ ಅಥವಾ ಗಂಡುಗೂಸುಗಳಾಗುತ್ತಾರೆ. ಸಂಬಂಧದಲ್ಲಿ ‘ಎಮ್ಮಕ್ಕನ ಗಂಡ’ನೆಂದು ಗುರುತು ಪಡೆದವನು ಪಕ್ಕದಲ್ಲಿಯೇ ಸ್ಥಾಪಿತನಾಗುತ್ತಾನೆ.

ಹೀಗೆ ಇಲ್ಲಿ ವಿಭಜನೆಯ ಪ್ರಕ್ರಿಯೆಯೊಂದು ಚಾಲನೆಯನ್ನು ಪಡೆದುಕೊಳ್ಳುತ್ತದೆ. ವ್ಯಕ್ತಿಗಳನ್ನು ಹೀಗೆ ವಿಭಜಿಸುವುದೇ ಇಲ್ಲಿನ ವಿಂಗಡಣೆಯ ಉದ್ದೇಶವೂ ಆಗಿದೆ. ಇಲ್ಲಿ ವಿಭಜನೆಯ ನಿರೂಪಣೆ ರ್ತಾಕವಾಗಿ ಸಾಮಾನ್ಯದಿಂದ ವಿಶಿಷ್ಟದ ಕಡೆಗೆ ಚಲಿಸುತ್ತಿರುವುದನ್ನು ಗಮನಿಸಬೇಕು. ಮೊದಲಿಗೆ ಅದು ಸಾಮಾನ್ಯ ನೆಲೆಯೊಂದರಲ್ಲಿ ಲೋಕವನ್ನು ವ್ಯಾಖ್ಯಾನಿಸಿಕೊಳ್ಳುತ್ತದೆ. ಬಳಿಕ ಆ ವ್ಯಾಖ್ಯಾನದ ಅನ್ವಯದಲ್ಲಿ ವಿಂಗಡಣೆಗಳನ್ನು ನಿರ್ವಿುಸುತ್ತ ಹೋಗುತ್ತದೆ. ಅಂತಿಮವಾಗಿ ಇಡೀ ಲೋಕವೇ ಸ್ವ ಮತ್ತು ಪರ ಎಂದು ಎರಡಾಗಿ ತುಂಡಾಗುತ್ತದೆ.

ಆದರೆ ಪ್ರಸ್ತುತ ವಚನ ಈ ಎಲ್ಲ ವಿಭಜನೆಗಳನ್ನೂ ನಿರಾಕರಿಸುವ ಉದ್ದೇಶವನ್ನು ಹೊಂದಿದೆ. ಆದ್ದರಿಂದಲೇ ಅದು ಎಲ್ಲ ವಿಂಗಡಣೆಗಳನ್ನು ಕೂಡಲಸಂಗಮನೊಂದಿಗೆ ಸಮೀಕರಿಸುತ್ತದೆ. ಹಾಗೆ ಸಮೀಕರಿಸುವುದರ ಮೂಲಕವೇ ಮರುಳುತಲೆ-ಉರುಳುತಲೆಗಳ ನಡುವಿನ, ಹೆಂಗೂಸು-ಗಂಡುಗೂಸುಗಳ ನಡುವಿನ ತಾರತಮ್ಯಗಳನ್ನು ಇಲ್ಲವಾಗಿಸುತ್ತದೆ. ಎಲ್ಲ ಚಹರೆಗಳನ್ನು ಕೂಡಲಸಂಗಮನೊಂದಿಗೆ ಸ್ವೀಕರಿಸುವುದೆಂದರೆ ಅದು ಎಲ್ಲ ಲೋಕವ್ಯಕ್ತಿಗಳನ್ನು ಅವರವರು ಇರುವಂತೆಯೇ ಒಪ್ಪಿಕೊಳ್ಳುವುದೂ ಆಗಿದೆ. ಅಥವಾ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಲೋಕದ ಎಲ್ಲ ಬೇರೆಬೇರೆಗಳನ್ನು ಕೂಡಲಸಂಗಮನ ಏಕತೆಯಲ್ಲಿ ಒಂದುಗೂಡಿಸಿಕೊಳ್ಳುವುದೂ ಆಗಿದೆ.

ವಚನದಲ್ಲಿ ಮುಖ್ಯವಾಗಿ ವಿಭಜಿಸುವಿಕೆ ಮತ್ತು ಒಂದುಗೂಡಿಸುವಿಕೆಗಳ ನಡುವಿನ ಮುಖಾಮುಖಿಯಿದೆ. ಇದನ್ನು ವಚನವು ‘ಭ್ರಾಂತಿ’ ಮತ್ತು ‘ಭಾವ’ಗಳ ನಡುವಿನ ಮುಖಾಮುಖಿಯಲ್ಲಿ ಗುರುತಿಸುತ್ತದೆ. ಲೋಕದ ಅಸ್ತಿತ್ವವನ್ನು ‘ಮರುಳುತಲೆ-ಉರುಳುತಲೆ’ಗಳಾಗಿ, ‘ಹೆಂಗೂಸು-ಗಂಡುಗೂಸು’ಗಳಾಗಿ, ‘ಎಮ್ಮಕ್ಕನ ಗಂಡನಾಗಿ’ ಕಾಣುವುದು ಭ್ರಾಂತಿಯ ಪರಿಣಾಮವಾಗಿದೆ; ಆದರೆ ಅವೆಲ್ಲವನ್ನೂ ಕೂಡಲಸಂಗಮನಿಗಾಗಿ ಕಾಣುವುದು ‘ಭ್ರಾಂತಳಿದು ಭಾವ ನಿಂದು’ದರ ಪರಿಣಾಮವಾಗಿದೆ.

ಕೂಡಲಸಂಗಮನನ್ನು ಕೂಡಲಸಂಗಮನನ್ನಾಗಿ ಕಾಣುವುದು ಭಕ್ತಿಯ ಒಂದು ಮುಖವಾಗಿದೆ; ಬಹುಶಃ ಅದು ಭಕ್ತಿಯ ಪ್ರಾಥಮಿಕ ಮುಖವೂ ಇದ್ದೀತು. ಆದರೆ ಇಲ್ಲಿ ಲೋಕದ ಎಲ್ಲ ಅಪೇಕ್ಷಣೀಯ-ಅನಪೇಕ್ಷಣಿಯ ಎಂಬ ವಿಭಜನೆಗಳನ್ನು ಮೀರುವುದರಲ್ಲಿ ಕೂಡಲಸಂಗಮನ ನಿಜವಾದ ಕಾಣುವಿಕೆಯಿದೆ. ಹೀಗೆ ಭಾವದ ಮೂಲಕ ಭ್ರಾಂತಿಯನ್ನು ಪಲ್ಲಟಿಸುವುದರಲ್ಲೇ ಕೂಡಲಸಂಗಮನೆಂಬ ಹೆಸರಿಗೆ ಅನ್ವರ್ಥವಾದ ಸ್ಥಾಪನೆಯೂ ಇದೆ.