ನ್ಯೂಸ್

ಹೆಚ್ಚುವರಿ ಶುಲ್ಕ ವಸೂಲಿ: ಕಠಿಣ ಕ್ರಮದ ಎಚ್ಚರಿಕೆ ನೀಡಿದ ಶುಲ್ಕ ನಿಯಂತ್ರಣ ಸಮಿತಿ

ಬೆಂಗಳೂರು: ಹೆಚ್ಚುವರಿ ಶುಲ್ಕ ವಸೂಲಿಗೆ ಪ್ರಯತ್ನಿಸಿದ ವಿವಿಧ ಶಿಕ್ಷಣ ಸಂಸ್ಥೆಗಳ ವಿರುದ್ಧ ಶುಲ್ಕ ನಿಯಂತ್ರಣ ಸಮಿತಿಯು ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ನೀಡಿದ ನಂತರ ಆ ಸಂಸ್ಥೆಗಳು ಹಿಂದೆ ಸರಿದಿದ್ದು, ಸರ್ಕಾರ ನಿಗದಿಪಡಿಸಿರುವ ಶುಲ್ಕಕ್ಕೇ ತಮ್ಮ ಕಾಲೇಜುಗಳಲ್ಲಿ ಪ್ರವೇಶ ಕಲ್ಪಿಸಿವೆ.

ಎಂಬಿಎ, ಎಂಸಿಎ ಮತ್ತು ನರ್ಸಿಂಗ್ ಕೋರ್ಸ್‌ಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಪ್ರಸಕ್ತ ಸಾಲಿನಲ್ಲಿ ಸೀಟು ಹಂಚಿಕೆಯಾಗಿದ್ದ 25 ವಿದ್ಯಾರ್ಥಿಗಳಿಂದ ನಿಗದಿಗಿಂತ ಹೆಚ್ಚುವರಿಯಾಗಿ 55 ಸಾವಿರದಿಂದ 4 ಲಕ್ಷ ರೂ.ವರೆಗೆ ಶುಲ್ಕ ವಸೂಲಿಗೆ ಬೇಡಿಕೆ ಇಟ್ಟಿದ್ದು, ಅಷ್ಟೂ ಮಂದಿ ನ್ಯಾಯಮೂರ್ತಿ ಬಿ.ಶ್ರೀನಿವಾಸಗೌಡ ಅಧ್ಯಕ್ಷತೆಯ ಶುಲ್ಕ ನಿಯಂತ್ರಣ ಸಮಿತಿಗೆ ದೂರು ಸಲ್ಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ನ್ಯಾಯಮೂರ್ತಿಗಳು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಲಿಗಳ ಜತೆ ಮಾತಕತೆ ನಡೆಸಿ, ಹೆಚ್ಚುವರಿ ಶುಲ್ಕ ವಸೂಲಿಗೆ ಕಡಿವಾಣ ಹಾಕಿದ್ದಾರೆ. ಬದಲಿಗೆ ಎಲ್ಲ ವಿದ್ಯಾರ್ಥಿಗಳಿಗೂ ಪ್ರವೇಶ ಮಾಡಿಸುವಲ್ಲಿಯೂ ಯಶಸ್ವಿಯಾಗಿದ್ದಾರೆ.

ಆಚಾರ್ಯ ಕಾಲೇಜಿಗೆ ನೋಟಿಸ್:

ಸಮಿತಿಯ ಸೂಚನೆ ನಂತರವೂ ಮೂವರು ವಿದ್ಯಾರ್ಥಿಗಳನ್ನು ಎಂಬಿಎ ಕೋರ್ಸ್‌ಗೆ ಪ್ರವೇಶ ಕಲ್ಪಿಸಿರುವ ಮಾಗಡಿ ರಸ್ತೆಯ ಆಚಾರ್ಯ ಬೆಂಗಳೂರು ಬಿಜಿನೆಸ್ ಸ್ಕೂಲ್, ಹೆಚ್ಚುವರಿ ಶುಲ್ಕ ಕಟ್ಟಲೇಬೇಕು ಎನ್ನುವ ಬೇಡಿಕೆ ಇಟ್ಟಿದೆ. ಈ ಸಂಬಂಧ ಕಾರಣ ಕೇಳಿ ಆ ಸಂಸ್ಥೆಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ನ್ಯಾ. ಶ್ರೀನಿವಾಸಗೌಡ ತಿಳಿಸಿದ್ದಾರೆ.

ಪ್ರೆಸಿಡೆನ್ಸಿ ಯೂನಿವರ್ಸಿಟಿ, ಎಐಎಂಎಸ್ ಐಬಿಎಸ್ ಸ್ಕೂಲ್, ಆಚಾರ್ಯ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಆೃಂಡ್ ಸೈನ್ಸ್, ಆಕ್ಸ್‌ಫರ್ಡ್ ಕಾಲೇಜು, ಬೃಂದಾವನ ಕಾಲೇಜು, ಅಲೆಯನ್ಸ್ ಯೂನಿವರ್ಸಿಟಿ, ಐಎಫ್‌ಐಎಂ ಕಾಲೇಜು, ಕ್ರೈಸ್ಟ್ ಅಕಾಡೆಮಿ ಇನ್‌ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ, ದಕ್ಷ್ ಪ್ರಥಮ ದರ್ಜೆ ಕಾಲೇಜು, ಡಾನ್ ಬಾಸ್ಕೊ ಇನ್‌ಸ್ಟಿಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸ್ಟಡೀಸ್ ಸಂಸ್ಥೆಗಳು ಹೆಚ್ಚುವರಿ ಶುಲ್ಕಕ್ಕೆ ಬೇಡಿಕೆ ಇಟ್ಟಿದ್ದವು.

ಹಾಗೆಯೇ ಉನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿ ಬರುವ ತುಮಕೂರು ಮತ್ತು ದಾವಣಗೆರೆ ವಿಶ್ವವಿದ್ಯಾಲಯಗಳು ಕೂಡ ಹೆಚ್ಚುವರಿ ಶುಲ್ಕ ವಸೂಲಿ ಮಾಡಲು ಪ್ರಯತ್ನಿಸಿದ್ದು, ಬಳಿಕ ಅವು ಕೂಡ ಹಿಂದೆ ಸರಿದಿವೆ ಎಂದು ಅವರು ತಿಳಿಸಿದ್ದಾರೆ.

2.12 ಲಕ್ಷ ರೂ.ವಾಪಸ್:

ಸಿಇಟಿ ಮೂಲಕ ಸೀಟು ಹಂಚಿಕೆಯಾದ ನಂತರ ಕಾಮೆಡ್- ಕೆ ಸೀಟಿಗೆ ಪಾವತಿಸಿದ್ದ ಶುಲ್ಕ ಹಿಂದಿರುಗಿಸಲು ನಿರಾಕರಿಸಿದ್ದ ಡಾ. ಅಂಬೇಡ್ಕರ್ ಇಂಜಿನಿಯರಿಂಗ್ ಕಾಲೇಜು, ಶುಲ್ಕ ನಿಯಂತ್ರಣ ಸಮಿತಿಯ ಮಧ್ಯಪ್ರವೇಶದಿಂದ ವಿದ್ಯಾರ್ಥಿನಿ ಮೇಘಾನಾ ಎಂಬುವರಿಗೆ 2.12 ಲಕ್ಷ ರೂ. ಶುಲ್ಕವನ್ನು ಹಿಂದಿರುಗಿಸಿದೆ.

ಟಿ.ಜಾನ್ ಕಾಲೇಜ್ ಆಫ್ ಫಾರ್ಮಸಿಯಲ್ಲಿ 2022-23ನೇ ಸಾಲಿನಲ್ಲಿ ಬಿ-ಫಾರ್ಮಾ ಕೋರ್ಸ್‌ಗೆ ಪ್ರವೇಶ ಪಡೆದ ಚೈತನ್ಯಾ ಎಂಬ ವಿದ್ಯಾರ್ಥಿಯಿಂದ ಹೆಚ್ಚುವರಿ ತರಬೇತಿ ಕೊಡುವುದಾಗಿ ಹೇಳಿ ಸಂಗ್ರಹಿಸಿದ್ದ 50 ಸಾವಿರ ರೂ.ವನ್ನು ಶುಲ್ಕ ನಿಯಂತ್ರಣ ಸಮಿತಿ ವಾಪಸ್ ಕೊಡಿಸಲಾಗಿದೆ ಎಂದು ಶ್ರೀನಿವಾಸಗೌಡ ತಿಳಿಸಿದ್ದಾರೆ.