ತಂದೆ ಜತೆಗಿನ ಒಡನಾಟ, ಅನುಭವ, ಸ್ಮರಣೀಯ ಘಟನೆಗಳ ಕುರಿತ ಬರಹಗಳ ಆಹ್ವಾನಕ್ಕೆ ಓದುಗರಿಂದ ಪ್ರವಾಹೋಪಾದಿಯಲ್ಲಿ ಪ್ರತಿಕ್ರಿಯೆಗಳು ಹರಿದುಬಂದಿವೆ. ಅಪ್ಪನ ಪ್ರೀತಿ, ಮಮತೆ, ವಾತ್ಸಲ್ಯದ ಮಹಾಪೂರದಲ್ಲಿ ತೇಲಾಡಿರುವುದನ್ನು ಮಕ್ಕಳು ಸ್ಮರಿಸಿದ್ದಾರೆ. ನೂರಾರು ಬರಹಗಳ ಪೈಕಿ ಕೆಲವನ್ನು ಇಲ್ಲಿ ಆಯ್ದುಕೊಡಲಾಗಿದೆ.
ತಂದೆ ಎಂದರೆ ಶಕ್ತಿ, ಕೈ ಹಿಡಿದು ನಡೆಸುವಾತ, ಸುರಕ್ಷಿತ ಭಾವ, ತಿಂಡಿ-ತಿನುಸುಗಳ ಕೊಡಿಸುವಾತ. ದೈರ್ಯ ತುಂಬುವಾತ. ಇಂತಹ ತಂದೆಯ ಬಗ್ಗೆ ಏಷ್ಟು ಹೇಳಿದರೂ ಸಾಲದು. ನಾನು ಚಿಕ್ಕವನಿದ್ದಾಗ ನನ್ನನ್ನು ಎಂ.ಕೆ. ಹುಬ್ಬಳ್ಳಿ ನದಿಯಲ್ಲಿ ಈಜು ಕಲಿಸಿದ ನೆನಪು. ನಾನು ಕಿತ್ತೂರಿನ ದಾರಿಯಲ್ಲಿ ಹೋಗುತ್ತಿರುವಾಗ ಈಗಲೂ ನನಗೆ ನದಿಯ ದಂಡೆಯಲ್ಲಿ ಈಜಲು ಕಲಿಸಿದ ಆ ಕ್ಷಣ ಕಣ್ಣು ಮುಂದೆಯೇ ಬರುತ್ತದೆ. ಆಗ ನನಗೆ 3-4 ವರ್ಷವಿದ್ದಿರಬಹುದೇನೋ.. ಆದರೆ ಈಗ ನನಗೆ 54 ವರ್ಷ. ಆದರೂ ಆ ಹಾದಿ ನನ್ನ ತಂದೆಯವರನ್ನು ನೆನೆಪಿಸುತ್ತದೆ. ಚನ್ನಮ್ಮನ ಕಿತ್ತೂರಿನ ಅಲಂಕಾರ ಎಂಬ ಚಿಕ್ಕ ಹೊಟೇಲೊಂದರಲ್ಲಿ ಪೂರಿ-ಬಾಜಿ ತಿನಿಸಿದ ನೆನಪು, ಆ ರುಚಿ ಮತ್ತು ಸ್ವಾದ ಈಗ ರಾಜ್ಯಾದ್ಯಂತ ತಿರುಗುವ ನನಗೆ ಎಲ್ಲೋ ಅಪರೂಪ ಎಂಬಂತೆ ಸಿಕ್ಕರೆ, 50 ವರ್ಷದ ಹಿಂದಿನ ನೆನಪು ನನ್ನ ಮನದಲ್ಲಿ ಮೂಡುತ್ತದೆ.
| ಸಂಜಯ ಉಪರಿ