- ತಂದೆ-ಮಗ ಎರಡೇ ಪಾತ್ರಗಳ ನಡುವೆ ನಡೆಯುವ ಕಥೆ, ಉಳಿದ ಪಾತ್ರಗಳು ನಾಮಕಾವಸ್ತೆ
- ಕಥೆಯಲ್ಲಿ ಬದುಕಿನ ಫಿಲಾಸಫಿ ಜತೆಗೆ ಒಬ್ಬರು ಇನ್ನೊಬ್ಬರನ್ನು ಅರಿಯುವ ಅಂಶಗಳಿವೆ
- ಮೊದಲರ್ಧ ಆಸಕ್ತಿಕರವಾಗಿದೆ, ದ್ವಿತೀಯಾರ್ಧದಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಬೇಕಿತ್ತು
ನಿರ್ದೇಶನ: ರಾಜಾರಾಮ್ ರಾಜೇಂದ್ರನ್
ತಾರಾಗಣ: ಅಜಿತ್ ಹಂಡೆ, ಹರ್ಷಿಲ್ ಕೌಶಿಕ್, ಅಲೋಕ್, ಅರುಣ್ ರಾಮ್‌ದಾಸ್ ಮತ್ತಿತರರು.
ರೋಡ್ ಜರ್ನಿಯಲ್ಲಿ ಬದುಕಿನ ಫಿಲಾಸಫಿ ತಿಳಿಸುವ ಹಲವು ಸಿನಿಮಾಗಳು ಕನ್ನಡದಲ್ಲಿ ಬಂದಿವೆ. ಈಗಾಗಲೇ ‘ಪಾರು, ಪಾರ್ವತಿ’, ‘ಎಲ್ಲೋ ಜೋಗಪ್ಪ ನಿನ್ನರಮನೆ’, ‘ದೂರ ತೀರ ಯಾನ’, ‘ರತ್ನನ್ ಪ್ರಪಂಚ’, ‘ತೀರ್ಥರೂಪ ತಂದೆಯವರಿಗೆ’ ಹೀಗೆ ಸಾಗುತ್ತದೆ. ಇದಕ್ಕೆ ಹೊಸ ಸೇರ್ಪಡೆ ರಾಜಾರಾಮ್ ರಾಜೇಂದ್ರನ್ ನಿರ್ದೇಶನದ ‘ಫಾದರ್ಸ್ ಡೇ’. ಇದೊಂದು ತಂದೆ- ಮಗನ ಭಾವನಾತ್ಮಕ ಪಯಣ ಎಂಬ ಕಾರಣಕ್ಕೆ ವಿಶೇಷವಾಗಿ ನಿಲ್ಲುತ್ತದೆ.
30 ವರ್ಷಗಳ ಹಿಂದೆ ಬಿಟ್ಟು ಹೋದ ತಂದೆಯನ್ನು ಕಾಣಬೇಕೆಂದು ಸುಶಾಂತ್ (ಹರ್ಷಿಲ್) ಬೈಕ್‌ನಲ್ಲಿ ತೆರಳುತ್ತಾನೆ. ತಂದೆ ಸುಧೀರ್ (ಅಜಿತ್) ಬೈಕರ್ ಆದ ಕಾರಣ ಬೈಕ್ ಮೂಲಕವೇ ತಂದೆಯನ್ನು ತಲುಪಬೇಕು ಎಂಬುದು ಆತನ ಮನದ ಇಂಗಿತ. ಅಂತೆಯೇ, ತಂದೆ ಗೆಳೆಯನ ಮಗನ ಮದುವೆಗೆ ಬರಲಿದ್ದಾರೆ ಎಂಬುದನ್ನು ತಿಳಿದು ಸುಶಾಂತ್ ಅಲ್ಲಿಗೆ ತಲುಪುತ್ತಾನೆ. ಮೊದಲಿಗೆ ಪರಿಚಯ ಬಳಿಕ ಆಸಕ್ತಿಗಳ ಕುರಿತಂತೆ ಚರ್ಚೆ. ಇಬ್ಬರಿಗೂ ಬೈಕ್ ಆಸಕ್ತಿ ಇರುವ ಕಾರಣ ವಾಪಸ್ ಹೋಗುವಾಗ ಜತೆಗೆ ಹೋಗೋಣ ಎಂದು ನಿರ್ಧರಿಸುತ್ತಾರೆ. ಅಲ್ಲಿಯವರೆಗೂ ಸುಧೀರ್‌ಗೆ ಪಕ್ಕದಲ್ಲಿರುವ ಯುವಕ ತನ್ನ ಮಗ ಎನ್ನುವುದೇ ತಿಳಿದಿರುವುದಿಲ್ಲ. ಅದರ ನಡುವೆ ಇಬ್ಬರೂ ಒಂದು ಸಂಕಷ್ಟಕ್ಕೆ ಸಿಲುಕಿ, ಬಚ್ಚಿಟ್ಟುಕೊಳ್ಳಬೇಕಾಗುತ್ತದೆ. ಆಗ ಸುಶಾಂತ್ ಇಡೀ ಸತ್ಯವನ್ನು ಬಿಚ್ಚಿಡುತ್ತಾನೆ. ಪಕ್ಕದಲ್ಲಿರುವವನೇ ನನ್ನ ಮಗ ಎಂದು ತಿಳಿದು ಸುಧೀರ್ ಭಾವುಕನಾಗುತ್ತಾನೆ. ಮುಂದೆ ನಡೆಯುವ ಇಬ್ಬರ ಜರ್ನಿಯೇ ಫಾದರ್ಸ್ ಡೇ’. ತಂದೆ-ಮಗ ಎರಡೇ ಪಾತ್ರಗಳ ನಡುವೆ ನಡೆಯುವ ಕಥೆ ಇದು. ಬೇರೆ ಪಾತ್ರಗಳು ಇದ್ದರೂ ಹಾಗೆ ಬಂದು ಹೀಗೆ ಹೋಗುತ್ತವಷ್ಟೇ. ಬದುಕಿನ ಫಿಲಾಸಫಿ ಜತೆಗೆ ಒಬ್ಬರು ಇನ್ನೊಬ್ಬರನ್ನು ಅರಿಯುವ ಅಂಶಗಳಿವೆ. ಇಲ್ಲಿ ತಂದೆಯಿಂದ ಮಗ ಮಾನವೀಯತೆಯ ಪಾಠ ಕಲಿತರೆ, ಮಗನಿಂದ ತಂದೆ ತಂತ್ರಜ್ಞಾನದ ಪಾಠ ಹೇಳಿಸಿಕೊಳ್ಳುತ್ತಾನೆ. ಇದೊಂದು ಭಾವನಾತ್ಮಕತೆಯ ಜತೆಗೆ ಕಲಿಕೆಯ ಕಥೆ ಎನ್ನಬಹುದು. ಮೊದಲರ್ಧ ಆಸಕ್ತಿಕರವಾಗಿ ನೋಡಿಸಿಕೊಳ್ಳುತ್ತದೆ, ದ್ವಿತೀಯಾರ್ಧದಲ್ಲಿ ಕೆಲ ದೃಶ್ಯಗಳಿಗೆ ಕತ್ತರಿ ಪ್ರಯೋಗ ಬೇಕಿತ್ತು ಅನಿಸುತ್ತದೆ. ಅಜಿತ್ ಹಂದೆ, ಹರ್ಷಿಲ್ ಕೌಶಿಕ್ ಇಬ್ಬರೂ ಲವಲವಿಕೆಯಿಂದ ನಟಿಸಿ, ಪಾತ್ರಗಳಿಗೆ ಜೀವ ತುಂಬಿದ್ದಾರೆ. ಜೋ ಪಣಿಕ್ಕರ್ ಸಂಗೀತ ಖುಷಿ ಕೊಡುತ್ತದೆ.