ಬೆಂಗಳೂರು: ಕಂಠ ಮಟ್ಟ ಮದ್ಯ ಸೇವಿಸಿ ಅಡ್ಡಾದಿಡ್ಡಿ ಕಾರು ಚಲಾಯಿಸಿಕೊಂಡು ಸರಣಿ ಅಪಘಾತ ಎಸಗಿ ತಪ್ಪಿಸಿಕೊಳ್ಳುವ ಬರದಲ್ಲಿ ಸಿಗ್ನಲ್‌ನಲ್ಲಿ ನಿಂತಿದ್ದ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಂದೆ-ಮಗ ಸಾವನ್ನಪ್ಪಿದ್ದಾರೆ. ಮೃತರ ಅಳಿಯ ಗಂಭೀರ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಿಂಗಾಪುರ ಲೇಔಟ್ ನಿವಾಸಿ ರಘುನಾಯಕ್ (55) ಮತ್ತು ಇವರ ಪುತ್ರ ಚಿರಂಜೀವಿ (26) ಮೃತರು. ಇವರ ಸಂಬಂಧಿ ವಾಸುದೇವ ನಾಯಕ್ (31) ಎಂಬುವರು ಗಾಯಗೊಂಡಿದ್ದು, ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ಕೋರಮಂಗಲದಲ್ಲಿ ಪುಸ್ತಕ ಮಾರಾಟ ಅಂಗಡಿಯನ್ನು ರಘುನಾಯಕ್ ನಡೆಸುತ್ತಿದ್ದರು. ಭಾನುವಾರ ರಾತ್ರಿ ವ್ಯಾಪಾರ ಮುಗಿಸಿಕೊಂಡು ಪುತ್ರ ಚಿರಂಜಿವಿ ಮತ್ತು ಸಂಬಂಧಿ ವಾಸುದೇವ ಜೊತೆಯಲ್ಲಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಆಗುತ್ತಿದ್ದರು.
ಸದಾಶಿವನಗರದ ಎಂ.ಎಸ್. ರಾಮಯ್ಯ ಆಸ್ಪತ್ರೆ ಮುಂಭಾಗದ ಇಸ್ರೋ ಸರ್ಕಲ್‌ನಲ್ಲಿ ತಡರಾತ್ರಿ 11.45ರಲ್ಲಿ ಸಿಗ್ನಲ್‌ನಲ್ಲಿ ನಿಲ್ಲಿಸಿಕೊಂಡಿದ್ದರು.ಪಬ್‌ನಲ್ಲಿ ಮದ್ಯ ಸೇವಿಸಿಕೊಂಡು ಐವರು ಯುವಕರು, ಇಕೋ ಕಾರಿನಲ್ಲಿ ಅತಿವೇಗವಾಗಿ ಚಾಲನೆ ಮಾಡಿಕೊಂಡು ಬರುತ್ತಿದ್ದಾಗ ಮಾರ್ಗಮಧ್ಯೆದಲ್ಲಿ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದಿದ್ದಾರೆ. ಆಟೋ ಪಲ್ಟಿಯಾಗಿದ್ದು, ತಪ್ಪಿಸಿಕೊಳ್ಳಲು ಮತ್ತಷ್ಟು ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಯುವಕರು ಬಂದಾಗ ರಸ್ತೆಬದಿ ನಿಲ್ಲಿಸಿದ್ದ 2 ಕಾರುಗಳಿಗೆ ಟಚ್ ಮಾಡಿಕೊಂಡು ಸಿಗ್ನಲ್‌ನಲ್ಲಿ ನಿಂತಿದ್ದ ಸ್ಕೂಟರ್‌ಗೆ ಗುದ್ದಿದ್ದಾರೆ. ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್‌ನಲ್ಲಿದ್ದ ತಂದೆ ಮತ್ತು ಮಗ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಆಟೋ ಚಾಲಕರು ಮತ್ತು ಸ್ಥಳೀಯರು ಸ್ಥಳಕ್ಕೆ ದೌಡಾಯಿಸಿ ಗಾಯಾಳು ವಾಸುದೇವ ನಾಯಕ್‌ನನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಅಪಘಾತ ಎಸಗಿದ ಕಾರಿನಲ್ಲಿದ್ದ ಆಕಾಶ್ ಎಂಬಾತನನ್ನು ಹಿಡಿದು ಸದಾಶಿವನಗರ ಪೊಲೀಸರಿಗೆ ಒಪ್ಪಿಸಿದ್ದಾರೆ. ಉಳಿದವರು ಅಪಘಾತ ಎಸಗಿದ ಮೇಲೆ ಕಾರಿನೊಂದಿಗೆ ಪರಾರಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸದಾಶಿವನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ಸೇವನೆ ದೃಢ :
ಆರ್‌ಎಂವಿ 2ನೇ ಹಂತ ನ್ಯೂಬಿಇಎಲ್ ರಸ್ತೆಯಲ್ಲಿ ಇರುವ ನೋ ರೋಲ್ಸ್ ಪಬ್‌ನಲ್ಲಿ ಮದ್ಯ ಸೇವನೆ ಮಾಡಿಕೊಂಡು ಕಾರಿನಲ್ಲಿ ಜಾಲಿರೈಡ್‌ಗೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ.
ಅಪಘಾತ ಎಸಗಿದ ಕಾರು ಸಂಚರಿಸುವ ಮತ್ತು ಆರೋಪಿತರ ಓಡಾಡಿರುವ ರಸ್ತೆಗಳಲ್ಲಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಲಾಗಿದೆ. ಪಬ್‌ನಿಂದ ಹೊರಗೆ ಬರುತ್ತಿರುವ ದೃಶ್ಯಾವಳಿ ಸೆರೆಸಿಕ್ಕಿದೆ. ಮಾರ್ಗಮಧ್ಯೆದಲ್ಲಿ ಕಾರು ಓಡಿಸಿರುವುದನ್ನು ಗಮನಿಸಿದರೇ ಕಾರು ಚಾಲಕ ಮದ್ಯ ಸೇವನೆ ಮಾಡಿರುವುದು ಗೊತ್ತಾಗಿದೆ. ಸ್ಥಳೀಯರು ಹಿಡಿದುಕೊಟ್ಟಿರುವ ಆರೋಪಿ ಮದ್ಯ ಸೇವನೆ ಮಾಡಿದ್ದು, ಆತ ಸಹ ತನ್ನ ಸ್ನೇಹಿತರು ಕುಡಿದಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಉದ್ದೇಶ ಪೂರ್ವಕವಲ್ಲದ ಕೊಲೆ :
ನಾಗರಬಾವಿ ನಿವಾಸಿ ಎನ್. ಆಕಾಶ್ (23) ಮತ್ತು ಬಸವೇಶ್ವರನಗರದ ಎನ್.ನಿಖಿತ್ (24) ಬಂಧಿತರು. ಮಾಗಡಿ ಮೂಲದ ಗುತ್ತಿಗೆದಾರ ನಂಜಯ್ಯ ಎಂಬುವರ ಪುತ್ರ ಆಕಾಶ್, ಸ್ಟಡಿ ಸೆಂಟರ್ ನಡೆಸುತ್ತಿದ್ದಾನೆ. ನಿಖಿತ್ ಫಾಸ್ಟ್ ಫುಡ್ ನಡೆಸುತ್ತಿದ್ದ. ಕಾರು ಚಾಲಕ ಆಕಾಶ್ ವಿರುದ್ಧ ಐಪಿಸಿ ಸೆಕ್ಷನ್ 304(ಎ) ಅನ್ವಯ ಪ್ರಕರಣ ದಾಖಲಿಸಲಾಗಿದೆ.
ಅಪಘಾತದ ಬಳಿಕ ಕಾರು ಚಾಲಕ ಆಕಾಶ್‌ನ್ನು ಸಾರ್ವಜನಿಕರು ಹಿಡಿದುಕೊಂಡು ಪ್ರಶ್ನೆ ಮಾಡುತ್ತಿದ್ದಾಗ ಸಾರ್ವಜನಿಕರ ಸೋಗಿನಲ್ಲಿ ನಿಖಿತ್ ಕಾರನ್ನು ಚಲಾಯಿಸಿಕೊಂಡು ಹೋಗಿದ್ದ. ಈ ಹಿನ್ನೆಲೆಯಲ್ಲಿ ಅಪರಾಧ ಪ್ರಕರಣದ ಸಾಕ್ಷ್ಯ ನಾಶ ಆರೋಪದಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.