ಪ್ರೇಮದ ಊರಲ್ಲಿ 
ನ್ಯೂಸ್

Premada Ooralli - "ಪ್ರೇಮದ ಊರಲ್ಲಿ' ಚಿತ್ರದ ಅಪ್ಪ-ಮಗನ ಬಾಂಧವ್ಯದ ಹಾಡು ವೈರಲ್​

Premada Ooralli - ತಾಯಿಯ ಕುರಿತು, ಅಮ್ಮ & ಮಗನ ಸೆಂಟಿಮೆಂಟ್​ ಬಗ್ಗೆ ಹಲವು ಹಾಡುಗಳು ಬಂದಿವೆ. ಅದೇ ತಂದೆ ಹಾಗೂ ತಂದೆ & ಮಗನ ಭಾವನಾತ್ಮಕ ಹಾಡುಗಳು ಕಡಿಮೆಯಿದ್ದರೂ, "ಅಪ್ಪ ಐ ಲವ್​ ಯೂ ಪಾ' (ಚೌಕ), "ಅಪ್ಪ ಅಪ್ಪ ನಂಗೆ ನೀನು ಬೇಕಪ್ಪಾ' (ಮನೆದೇವು), "ನನ್ನ ಪರಪಂಚ ನೀನೆ' (ಕೋಟಿಗೊಬ್ಬ 2), "ಜೀವ ಜೀವ' (ಮಾಣಿಕ್ಯ)... ಹೀಗೆ ಕೆಲ ಹಾಡುಗಳು ಆಗೊಮ್ಮೆ, ಈಗೊಮ್ಮೆ ಸದ್ದು ಮಾಡಿವೆ. ಇದೀಗ ಈ ಸಾಲಿಗೆ ಹೊಸ ಸಾಂಗ್​ ಸೇರಿಕೊಂಡಿದೆ. ಹೌದು, ಇದೇ ತಿಂಗಳ 21ರ ಅಪ್ಪಂದಿರ ದಿನಾಚರಣೆಗೆ ಎರಡು ವಾರ ಮುನ್ನವೇ "ಪ್ರೇಮದ ಊರಲಿ' ತಂಡ ಹಾಡಿನ ಉಡುಗೊರೆ ನೀಡಿದೆ. "ಅವ್ವನಂತ ಅಪ್ಪನಿವನು' ಎಂದು ಸಾಗುವ ಸಾಂಗ್​ ರಿಲೀಸ್​ ಮಾಡಿದೆ. "ಪ್ರೇಮದ ಊರಲ್ಲಿ' ಮ್ಯೂಸಿಕಲ್​ ಲವ್​ಸ್ಟೋರಿ ಕಥಾಹಂದರ ಹೊಂದಿದ್ದು, "ಅ' ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಮನೋಜ್​ ಕುಮಾರ್​ ಆ್ಯಕ್ಷನ್​&ಕಟ್​ ಹೇಳಿದ್ದಾರೆ. ಇತ್ತೀಚೆಗಷ್ಟೆ ರಿಲೀಸ್​ ಆದ ಈ ಅಪ್ಪ & ಮಗನ ಬಾಂಧವ್ಯದ ಕುರಿತ ಹಾಡಿಗೂ ಅವರೇ ಸಾಹಿತ್ಯ ರಚಿಸಿದ್ದು, ಸುನಾದ್​ ಗೌತಮ್​ ಸಂಗೀತದಲ್ಲಿ ಸಿದ್ಧಾರ್ಥ್​ ಸುಂದರ್​ ಧ್ವನಿಯಾಗಿದ್ದಾರೆ. ಅಪ್ಪನಾಗಿ ರಂಗಾಯಣ ರು ಮತ್ತು ಮಗನಾಗಿ ಶ್ರೀರಾಮ್​ ನಟಿಸಿದ್ದಾರೆ. ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಟಿಸಿದ್ದಾರೆ. "ಭುಜದ ಮೇಲೆ ಹೊತ್ತ ದೊರೆಯೋ, ಉಸಿರ ಕೊಟ್ಟು ಹರಸೋ ಧರೆಯೋ, ಗುಡುಗಿ ಸುರಿಯೋ ಪ್ರೀತಿಯ ಮಳೆಯೋ, ಹಸಿರಿಗೆ ನಾವಿಟ್ಟು ಹರಿಯೋ ನದಿಯೋ' ಎಂದು ಸಾಗುವ "ಅವ್ವನಂತ ಅಪ್ಪನಿವನು' ಹಾಡು ವಿಶೇಷವಾಗಿದೆ. ಅದಕ್ಕೆ ಕಾರಣ, ಸಾಮಾನ್ಯವಾಗಿ ತಾಯಿಯನ್ನು ಭೂಮಿಗೆ, ಪ್ರಕೃತಿಗೆ ಹೋಲಿಸಿ ಹಾಡುಗಳು ಬಂದಿವೆ. ಆದರೆ, "ಪ್ರೇಮದ ಊರಲ್ಲಿ' ಚಿತ್ರದ ಈ ಹಾಡಿನಲ್ಲಿ ತಂದೆಯನ್ನು ಪ್ರಕೃತಿಗೆ ಹೋಲಿಸಲಾಗಿದೆ. ಎಲ್ಲವೂ ಅಂದುಕೊಂಡಂತಾದರೆ, ಜುಲೈ ಅಥವಾ ಆಗಸ್ಟ್​ನಲ್ಲಿ ಸಿನಿಮಾ ಬಿಡುಗಡೆ ಮಾಡುವ ಆಲೋಚನೆ ಚಿತ್ರತಂಡದ್ದು.