ನ್ಯೂಸ್

ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿದ ತಂದೆ-ಮಗನ ಬಂಧನ; ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ವಿಡಿಯೋ

ಉತ್ತರಪ್ರದೇಶ: ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಪಾಕಿಸ್ತಾನದ ಧ್ವಜ ಹಾರಿಸಿರುವ ಪ್ರಕರಣವೊಂದು ಭಾರೀ ವಿವಾದಕ್ಕೆ ಕಾರಣವಾಗಿದೆ. ಮನೆಯ ಮೇಲೆ ಪಾಕಿಸ್ತಾನದ ಧ್ವಜ ಹಾರಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್​ ಆಗಿದ್ದು, ಪೊಲೀಸರು ಕ್ರಮ ಕೈಗೊಳ್ಳುವಂತೆ ಅನೇಕರು ಕಾಮೆಂಟ್​​ ಮಾಡಿದ್ದಾರೆ.


ಘಟನೆಯನ್ನು ತೀವ್ರವಾಗಿದ ಪರಿಗಣಿಸಿದ ಪೊಲೀಸರು ಇದೀಗ, ಮನೆಯಿಂದ ಪಾಕಿಸ್ತಾನದ ಧ್ವಜವನ್ನು ತೆಗೆದು ದೇಶದ್ರೋಹದ ಆರೋಪದ ಮೇಲೆ ತಂದೆ-ಮಗ ಇಬ್ಬರನ್ನು ಬಂಧಿಸಿದ್ದಾರೆ.


ತಂದೆ ಮಗ ಇಬ್ಬರ ಬಂಧನ:
ಮುರಾದಾಬಾದ್‌ನ ಭಗತ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಬುಧನ್‌ಪುರ ಅಲಿಗಂಜ್ ಗ್ರಾಮದಲ್ಲಿ ಘಟನೆ ನಡೆದಿದೆ. ಜವಳಿ ಉದ್ಯಮಿ ರಯೀಸ್ ಅವರ ಮನೆಯಲ್ಲಿ ಪಾಕಿಸ್ತಾನದ ಧ್ವಜವನ್ನು ಪ್ರದರ್ಶಿಸಲಾಗುತ್ತಿದೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾಹಿತಿ ದೊರೆತ ಪೊಲೀಸರು, ತಕ್ಷಣ ಸ್ಥಳಕ್ಕೆ ತಲುಪಿದಾಗ ಆತನ ಮನೆಯ ಮೇಲ್ಛಾವಣಿಯಲ್ಲಿ ಪಾಕಿಸ್ತಾನದ ಧ್ವಜ ರಾರಾಜಿಸುತ್ತಿರುವುದು ಕಂಡು ಬಂದಿದೆ.


ಪೊಲೀಸರು ಸಾಕ್ಷ್ಯಕ್ಕಾಗಿ ಛಾಯಾಗ್ರಹಣ ಮತ್ತು ವೀಡಿಯೊಗ್ರಫಿ ನಡೆಸಿ ನಂತರ ಧ್ವಜವನ್ನು ತಗೆದು ಹಾಕಿದ್ದಾರೆ. ನಂತರ, ರಯೀಸ್ ಮತ್ತು ಅವರ ಮಗ ಸಲ್ಮಾನ್ ಇಬ್ಬರನ್ನೂ ಅಲ್ಲೇ ಬಂಧಿಸಿದ್ದಾರೆ.

ಇಬ್ಬರ ಮೇಲೂ ದೇಶದ್ರೋಹದ ಪ್ರಕರಣ ದಾಖಲು:
ಇಬ್ಬರೂ ಆರೋಪಿಗಳ ವಿರುದ್ಧ ದೇಶದ್ರೋಹದ ಆರೋಪದ ಮೇಲೆ (ಐಪಿಸಿ) ಸೆಕ್ಷನ್ 153 ಎ ಮತ್ತು 153 ಬಿ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ವಿಚಾರಣೆಯ ಜೊತೆಗೆ, ಅವರನ್ನು ಸ್ಥಳೀಯ ಗುಪ್ತಚರ ಘಟಕ (LIU) ಸಹ ತನಿಖೆ ನಡೆಸುತ್ತಿದೆ.
ಸದ್ಯ ಇಬ್ಬರೂ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಅವರ ಮನೆಯ ಮೇಲೆ ಪಾಕಿಸ್ತಾನದ ಧ್ವಜವನ್ನು ಹಾರಿಸಲು ಕಾರಣವೇನು ಎಂದು ಪೊಲೀಸರು ಅವರನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಇಬ್ಬರೂ ಆರೋಪಿಗಳು ಸದ್ಯಕ್ಕೆ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.