ಬೆಂಗಳೂರು: ಐಷಾರಾಮಿ ಕಾರಿನಲ್ಲಿ ಓಡಾಡುವ ತಿರುಕನ ಕನಸು ಕಂಡ ಮಕ್ಕಳಿಬ್ಬರು, ಸಿರಿವಂತ ತಂದೆಯನ್ನು ಕೊಂದು ತಾಯಿ ಕೊಲೆಗೂ ಸಂಚು ರೂಪಿಸಿ ಇದೀಗ ಕಂಬಿ ಎಣಿಸುವಂತಾಗಿದೆ.
ದಾಸರಹಳ್ಳಿಯ ಕೆಂಪೇಗೌಡನಗರದ ಮಂಜಣ್ಣ (55) ಕೊಲೆ ಪ್ರಕರಣದಲ್ಲಿ ಮೃತರ ಕಿರಿಯ ಪುತ್ರ ಅಭಿಷೇಕ್ (23) ಮತ್ತು ಈತನ ಸ್ನೇಹಿತ ಪ್ರವೀಣ್ ರೆಡ್ಡಿ (30)ಯನ್ನು ಬಾಗಲಗುಂಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಹಿರಿಯ ಮಗ ಮನೋಜ್ (26) ಬಂಧನಕ್ಕೆ ತೀವ್ರ ಶೋಧ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮಂಜಣ್ಣ ಅವರನ್ನು ಸೆ.2ರಂದು ಮಧ್ಯಾಹ್ನ ಮನೆಯ ಸೋಫಾದ ಮೇಲೆ ಮಲಗಿದ್ದಾಗ, ಮಗ ಮನೋಜ್ ಮತ್ತು ಆತನ ಸ್ನೇಹಿತ ಪ್ರವೀಣ್ ರೆಡ್ಡಿ ಕುತ್ತಿಗೆಗೆ ಟವಲ್ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದರು. ಬಳಿಕ ಹೃದಯಾಘಾತದಿಂದ ತಂದೆ ಮೃತಪಟ್ಟಿದ್ದಾರೆ ಎಂದು ಮನೋಜ್ ನಾಟಕವಾಡಿದ್ದ. ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ದೃಢಪಟ್ಟಿತ್ತು. ಬಳಿಕ ಪ್ರವೀಣ್ ರೆಡ್ಡಿ ಬಂಧಿಸಿ ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಇಬ್ಬರೂ ಪುತ್ರರೂ ಭಾಗಿಯಾಗಿದ್ದಾರೆ ಎಂದು ಬಾಯ್ಬಿಟ್ಟಿದ್ದ. ಈತನ ಹೇಳಿಕೆ ಆಧಾರದಲ್ಲಿ ಅಭಿಷೇಕ್‌ನನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆಸ್ತಿಯೇ ಮುಳುವಾಯಿತು:
ಮಂಜಣ್ಣ ಆರ್ಥಿಕವಾಗಿ ಸ್ಥಿತಿವಂತರಾಗಿದ್ದರು. ಐದಾರು ಬಿಲ್ಡಿಂಗ್, 4-5 ನಿವೇಶನಗಳು ಹಾಗೂ ಒಂದು ವುಡ್‌ವರ್ಕ್ಸ್ ಫ್ಯಾಕ್ಟರಿ ಹೊಂದಿದ್ದರು. ಇವರಿಬ್ಬರು ಮಕ್ಕಳಾದ ಮನೋಜ್ ಮತ್ತು ಅಭಿಷೇಕ್ ಹೆಚ್ಚಿಗೆ ಓದದೆ, ಯಾವುದೇ ಕೆಲಸ ಕಾರ್ಯ ಮಾಡದೇ ಸುತ್ತಾಡಿಕೊಂಡಿದ್ದರು. ಜತೆಗೆ ದುಶ್ಚಟಗಳಿಗೆ ದಾಸನಾಗಿದ್ದರು. ಆಗಾಗ ಹಣಕ್ಕಾಗಿ ತಂದೆಯನ್ನು ಪೀಡಿಸುತ್ತಿದ್ದರು. ತಂದೆ ಬೈದು ಬುದ್ಧಿ ಹೇಳುತ್ತಿದ್ದರೂ ಬದಲಾಗಿರಲಿಲ್ಲ ಎನ್ನಲಾಗಿದೆ.
ಬಾರ್‌ನಲ್ಲಿ ಸ್ಕೆಚ್:
ತಂದೆಯನ್ನು ಕೊಲೆ ಮಾಡಿದರೆ ತಮಗೆ ಆಸ್ತಿ ಬರಲಿದೆ ಎಂದು ಭಾವಿಸಿದ ಮಕ್ಕಳು, ಈ ವಿಚಾರವನ್ನು ಸ್ನೇಹಿತ ಪ್ರವೀಣ್ ರೆಡ್ಡಿಗೆ ತಿಳಿಸುತ್ತಾರೆ. ಅಲ್ಲದೆ, ಕೊಲೆಗೆ ಸಹಕರಿಸಿದರೆ ಸುಮಾರು 20 ಕೋಟಿ ರೂ. ಆಸ್ತಿ ಸಿಗಲಿದೆ. ಅದನ್ನು ಹಂಚಿಕೊಂಡು ಬಿಎಂಡಬ್ಲು ಅಥವಾ ಬೆನ್ಜ್ ಕಾರಿನಲ್ಲಿ ಓಡಾಡಬಹುದು. ಅದರಲ್ಲಿ 10 ಲಕ್ಷ ರೂ. ಕೊಡುವುದಾಗಿ ಪ್ರವೀಣ್ ರೆಡ್ಡಿಗೆ ಆಸೆ ಹುಟ್ಟಿಸುತ್ತಾರೆ. ಹಣದಾಸೆಗೆ ಪ್ರವೀಣ್ ಒಪ್ಪಿಕೊಂಡಿದ್ದ. ಬಾರ್‌ವೊಂದರಲ್ಲಿ ಕುಳಿತು ಪಾಲಕರ ಕೊಲೆಗೆ ಸ್ಕೆಚ್ ಹಾಕಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ತಾಯಿಗೂ ಮುಹೂರ್ತ
ತಂದೆ ಮಂಜಣ್ಣರನ್ನು ಕೊಲೆಗೈದ ಬಳಿಕ ತಾಯಿ ರುದ್ರಮ್ಮ ಓಡಾಡುವ ಮೆಟ್ಟಿಲುಗಳ ಮೇಲೆ ಅಡುಗೆ ಎಣ್ಣೆ ಚೆಲ್ಲುವುದು, ಅದನ್ನು ತುಳಿದು ಜಾರಿ ಬಿದ್ದು ಕಾಲು ಮುರಿದು ಮೂಲೆ ಸೇರುವ ಹಾಗೆ ಮಾಡಿ, ನಂತರ ಸಂಪೂರ್ಣ ಆಸ್ತಿಯನ್ನು ತಮ್ಮ ಹೆಸರಿಗೆ ವರ್ಗಾಹಿಸಿಕೊಳ್ಳುವ ಸಂಚನ್ನು ಇಬ್ಬರು ಸಹೋದರರು ರೂಪಿಸಿದ್ದರು. ಅಲ್ಲದೆ, ತಂದೆ ಕೊಲೆಗೆ ಅನುಕೂಲವಾಗಲೆಂದು ಕಿರಿಯ ಪುತ್ರ ಅಮ್ಮನನ್ನು ಆ ಸಮಯದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಗ್ಧ ತಾಯಿಯ ಗೋಳಾಟ
ಹಿರಿಯ ಮಗ ತನ್ನ ಪತಿಯನ್ನು ಕೊಂದಿರುವ ವಿಷಯ ತಿಳಿದು ಸಾಕಷ್ಟು ನೊಂದಿದ್ದ ತಾಯಿ, ಕೃತ್ಯದಲ್ಲಿ ಕಿರಿಯ ಮಗನೂ ಭಾಗಿಯಾಗಿದ್ದಾನೆ ಎಂದು ಗೊತ್ತಾದ ನಂತರ ಕಣ್ಣೀರು ಹಾಕಿ ಗೋಳಾಡಿದ್ದಾರೆ. ಒಂದೆಡೆ ಪತಿ ಕಳೆದುಕೊಂಡು, ಮತ್ತೊಂದೆಡೆ ಇಬ್ಬರು ಮಕ್ಕಳನ್ನು ಕಂಬಿಯ ಹಿಂದೆ ನೋಡಬೇಕಾದ ಪರಿಸ್ಥಿತಿ ಆ ತಾಯಿಯದ್ದಾಗಿದೆ.