ನ್ಯೂಸ್

ಮರೆಯಲು ಒಪ್ಪದ ಅಪ್ಪನ ನೆನಪು!

ಮೋಹನ್​ ಶೆಟ್ಟಿ

ದು ನಾನು ಎಲ್ಲೋ ಓದಿದ ಒಂದು ಹೃದಯರ್ಸ³ ಘಟನೆ. ಕಣ್ಣಂಚಿನಲ್ಲಿ ನೀರು ತಂದ ಕಥೆ. ರಮೇಶನ ಮುದಿ ಅಪ್ಪ ವಯಸ್ಸಹಜವಾದ ದೌರ್ಬಲ್ಯದಿಂದ ಸ್ವತಂತ್ರವಾಗಿ ನಡೆಯಲು ಸಾಧ್ಯವಾಗದೆ ಮನೆಯೊಳಗೆ ಗೋಡೆ ಹಿಡಿದುಕೊಂಡು ಬಚ್ಚಲು ಮನೆಯ ಕಡೆ ನಿಧಾನವಾಗಿ ನಡೆಯುತ್ತಿದ್ದರು. ಅವರು ಕೈ ಇಟ್ಟಲ್ಲೆಲ್ಲ ಗೋಡೆಯ ಬಣ್ಣ ಸ್ವಲ್ಪ ಮಸುಕಾಗುತ್ತಿತ್ತು. ಇದನ್ನು ಕಂಡ ಸೊಸೆಯ ಮುಖದಲ್ಲಿ ಕೆಟ್ಟ ಕೋಪವೊಂದು ಎದ್ದು ಕಾಣುತ್ತಿತ್ತು.

ಅದೊಂದು ದಿನ ಈ ಮುದಿಯಪ್ಪ ಎಂದಿನಂತೆ ಗೋಡೆಯ ಮೇಲೆ ಕೈ ಇಟ್ಟುಕೊಂಡು ನಡೆಯಲಾರಂಭಿಸಿದರು. ಆದರೆ ಆ ದಿನ ಇವರು ತನ್ನ ಕೈಯಿಂದ ಮಂಡಿ ನೋವಿನ ಎಣ್ಣೆ ಹಚ್ಚಿಕೊಂಡಿದ್ದರೇನೋ ಎಣ್ಣೆಯಿಂದ ಒದ್ದೆಯಾಗಿದ್ದ ಅವರ ಕೈ ಗುರುತು ಗೋಡೆಯ ಮೇಲೆ ಅಚ್ಚಳಿಯದೆ ಅಂಟಿಕೊಂಡಿತು.ಇದನ್ನು ನೋಡಿ ಸಹಿಸಲಾಗದ ಸೊಸೆ ತನ್ನ ಗಂಡನ ಜೊತೆ, ಮುದುಕನಿಗೂ ಕೇಳುವಂತೆ ಜಗಳವಾಡಿಯೇ ಬಿಟ್ಟಳು: ‘ಅಲ್ಲ ಈ ಮುದುಕನಿಗೆ ಇತ್ತೀಚೆಗಷ್ಟೇ ಸಾವಿರಾರು ರೂಪಾಯಿ ಖರ್ಚು ಮಾಡಿ ಪೇಂಟಿಂಗ್ ಮಾಡಿಸಿದ ಗೋಡೆಯ ಅಂದ ಹಾಳಾಗುತ್ತೆ ಎಂಬ ಕಾಮನ್​ಸೆನ್ಸ್ ಇಲ್ಲ, ಡರ್ಟಿ ಫೆಲೋ’ - ಇದನ್ನು ಕೇಳಿದ ರಮೇಶನಿಗೂ ಅಂದು ಏನಾಯಿತೋ ಏನೋ, ಅಪ್ಪನ ರೂಮಿಗೆ ಹೋಗಿ ‘ಏನಪ್ಪಾ ನಿಮಗೆ ಗೋಡೆ ಹಿಡಿಯದೆ ನಡೆಯಲಾಗದೇ?’ ಎಂದು ಜೋರಾದ ಧ್ವನಿಯಲ್ಲಿ ಕೇಳಿಯೇ ಬಿಟ್ಟ.

ಇದನ್ನು ಕೇಳಿದ 80 ವರ್ಷದ ಅಪ್ಪನ ಮುಖ ಚಿಕ್ಕ ಮಗು ತಪ್ಪು ಮಾಡಿದಂತಿತ್ತು. ಆತ ಮರು ಮಾತನಾಡದೆ ತಲೆ ತಗ್ಗಿಸಿದ. ಅಷ್ಟರಲ್ಲಿ ಒಂದು ಅಪರಾಧಿ ಭಾವನೆ ಅವನಲ್ಲಿ ಮೂಡಿತ್ತು. ಅಂದಿನ ನಂತರ ಆತ ಗೋಡೆ ಹಿಡಿದು ನಡೆಯುವ ಗೋಜಿಗೇ ಹೋಗಲಿಲ್ಲ. ಪರಿಣಾಮವಾಗಿ ಅದೊಂದು ದಿನ ನಡೆಯುವಾಗ ಆಯತಪ್ಪಿ ಬಿದ್ದು ತಲೆಗೆ ಏಟು ಮಾಡಿಕೊಂಡ. ತಕ್ಷಣ ಚಿಕಿತ್ಸೆ ಕೊಡಿಸಿದರೂ ಒಂದೆರಡು ದಿನಗಳಲ್ಲಿ ಆತ ಇಹಲೋಕವನ್ನೇ ತ್ಯಜಿಸಿಬಿಟ್ಟ. ಗೋಡೆಯ ಮೇಲೆ ಮೂಡಿದ್ದ ಅವನ ಕೈ ಗುರುತು ಮಾತ್ರ ಇವನ ಸಾವಿನ ಕಾರಣವನ್ನು ಹೇಳುವ ಮೂಕ ಸಾಕ್ಷಿಯಂತಿತ್ತು. ಮುಂದೆ ವರ್ಷಗಳು ಕಳೆದಂತೆ ರಮೇಶನೂ ಮುದುಕನಾದ. ನಡೆಯುವಾಗ ಆತನಿಗೆ ಮೈ ವಾಲಲು ಶುರುವಾಯಿತು. ಆದರೂ ಗೋಡೆಗೆಲ್ಲಿ ಕೈ ತಾಕೀತೋ ಎಂಬ ಭಯದಿಂದ ಗೋಡೆ ಬಿಟ್ಟು ದೂರದಲ್ಲಿ ನಡೆಯುತ್ತಿದ್ದ. ಹೀಗೆ ನಡೆಯುವಾಗ ಅದೊಂದು ದಿನ ಆತನು ಆಯುತಪ್ಪಿ ಇನ್ನೇನು ಬೀಳುವುದರಲ್ಲಿದ್ದ. ಇದನ್ನು ನೋಡಿದ ಅವನ  ಹಿರಿಯ ಮಗ ತಕ್ಷಣ ಓಡಿ ಬಂದು ಅವನನ್ನು ಎತ್ತಿ ಹಿಡಿದು ಹೇಳಿದ: ‘ಅಪ್ಪ ನಿನಗೆ ಈಗ ವಯಸ್ಸಾಗಿದೆ. ಗೋಡೆ ಹಿಡಿದುಕೊಂಡು ನಡೆಯಬಾರದೇ?’ ಈ ಮಾತನ್ನು ಕೇಳಿದ ರಮೇಶನಿಗೆ ತಾನು ತನ್ನ ಅಪ್ಪನಿಗೆ ಗದರಿಸಿ ಹೇಳಿದ ಮಾತು ನೆನಪಾಯಿತು. ತಾನು ಅಪ್ಪನಿಗೆ ಗದರಿಸದೆ ಇದ್ದಿದ್ದರೆ ಅಪ್ಪ ಕೆಳಗೆ ಬಿದ್ದು ಸಾಯುತ್ತಿರಲಿಲ್ಲ; ಇನ್ನೂ ಕೆಲವು ವರ್ಷ ಬದುಕುತ್ತಿದ್ದರೋ ಏನೋ.

ಎಂತಹ ತಪ್ಪು ಕೆಲಸ ಮಾಡಿಬಿಟ್ಟೆ ಎಂಬ ದುಃಖ ಉಮ್ಮಳಿಸಿ ಬಂತು. ಹಾಗೂ ಅಪ್ಪನ ಸಾವಿಗೆ ನಾನೇ ಕಾರಣನಾದನಲ್ಲ ಎಂಬ ಪಾಪ ಪ್ರಜ್ಞೆ ಕಾಡತೊಡಗಿತು. ಅಷ್ಟರಲ್ಲಿ ಓಡಿ ಬಂದ ಎಂಟು ವರ್ಷದ ಮೊಮ್ಮಗಳು, ‘ತಾತ ಇನ್ನು ಮುಂದೆ ನನ್ನ ಹೆಗಲು ಹಿಡಿದು ನಡೆಯಿರಿ’ ಎಂದು ಹೇಳಿದಾಗ ಹೃದಯ ತುಂಬಿ ಬಂತು. ಮತ್ತೆ ತನ್ನ ಕೈಯನ್ನು ಅವಳು ಹೆಗಲ ಮೇಲೆ ಇಟ್ಟಾಗ ಏನೋ ಒಂದು ಅಪೂರ್ವ ಆನಂದದ ಅನುಭವವಾಯಿತು. ತನ್ನ ಮಗನಿಗೆ, ಮೊಮ್ಮಗಳಿಗೆ ನನ್ನ ಮೇಲೆ ಇರುವ ಕಾಳಜಿ ಮತ್ತು ಪ್ರೀತಿ ತನಗೆ ತನ್ನ ಅಪ್ಪನ ಮೇಲೆ ಇಲ್ಲವಾಯಿತಲ್ಲ- ಎಂಬುದು ಅರಿವಾಗುತ್ತಿದ್ದಂತೆ ಮಗ ಮತ್ತು ಮೊಮ್ಮಗಳ ಎದುರು ತಾನು ತೀರ ಚಿಕ್ಕವನಾದಂತೆ ಭಾಸವಾಯಿತು. ರಮೇಶ ರೂಮಿಗೆ ಹೋಗಿ ಬಾಗಿಲು ಮುಚ್ಚಿ ಅಪ್ಪನ ಫೋಟೋ ಎದುರು, ‘ಅಪ್ಪ ನನ್ನನ್ನು ಕ್ಷಮಿಸಿ ಬಿಡಿ’ ಎನ್ನುತ್ತಾ ಮನಸ್ಸು ಹಗುರಾಗುವವರೆಗೂ ಅತ್ತ. ಆದರೂ ಮನಸ್ಸು ಹಗುರವಾಗಲೇ ಇಲ್ಲ.; ಮರೆಯಲು ಒಪ್ಪಲೇ

ಇಲ್ಲ ಅಪ್ಪನ ನೆನಪು!

ತಾತ್ಪರ್ಯ ಇಷ್ಟೇ: ಜೀವದಲ್ಲಿ ಇದ್ದಾಗ ಸೇವೆ ಮಾಡದ ಮಕ್ಕಳು ಹೆತ್ತವರು ಸತ್ತಮೇಲೆ ಅವರ ಫೋಟೋಗೆ ಹಾರ ಹಾಕಿ, ದೀಪ ಬೆಳಗಿ ಕೈ ಮುಗಿದರೆ ಏನು ಬಂತು? ವೃದ್ಧರಿಗೆ ಬೇಕಾದದ್ದು ಬರೆ ಊಟ ತಿಂಡಿ ಉಪಚಾರಗಳಲ್ಲ; ಒಂದಿಷ್ಟು ಪ್ರೀತಿಯೂ ಕೂಡ! ಈ ಜಗತ್ತಿನಲ್ಲಿ ನಮ್ಮನ್ನು ಪ್ರೀತಿಸುವವರು ಇಲ್ಲವಾದರೆ ಬದುಕೇ ಭಾರವಾದೀತು; ಅರ್ಥಹೀನವಾದೀತು. ಆದುದರಿಂದ ಪ್ರೀತಿಯನ್ನು ಕೊಟ್ಟು ಪ್ರೀತಿಯನ್ನು ಗಳಿಸಿಕೊಳ್ಳೋಣ.