ಬೆಂಗಳೂರು: ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿ ತಂದೆಗೆ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಎಫ್ ಟಿಎಸ್ ಸಿ-1ನೇ ನ್ಯಾಯಾಲಯ ತೀರ್ಪು ನೀಡಿದೆ.
ಮಗಧಲೇಔಟ್ ಕೂಡ್ಲೂ 1ನೇ ಕ್ರಾಸ್ ನಿವಾಸಿ 41 ವರ್ಷದ ಆಟೋ ಚಾಲಕ ಅಪರಾಧಿ. 2021ರ ಮಧ್ಯಾಹ್ನ 1.30ರಲ್ಲಿ ಮನೆಯ ಸ್ನಾನಗೃಹದಲ್ಲಿ ಬೆಕ್ಕಿಗೆ ಸ್ನಾನ ಮಾಡಿಸುತ್ತಿದ್ದ 12 ವರ್ಷದ ಪುತ್ರಿಯ ಮೇಲೆ ಅಪರಾಧಿ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದ.
ತಾಯಿಗೆ ಹೇಳಿದರೇ ಕೊಲೆ ಮಾಡುವುದಾಗಿ ಬೆದರಿಕೆ ಸಹ ಒಡ್ಡಿದ್ದ. ಇದಕ್ಕೂ ಮೊದಲು ಬಾಲಕಿ, 4ನೇ ತರಗತಿಯಲ್ಲಿ ಓದುತ್ತಿರುವಾಗ ಸಹ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದ. ಈ ಬಗ್ಗೆ ನೊಂದ ಬಾಲಕಿ ತಾಯಿ ಕೊಟ್ಟ ದೂರಿನ ಮೇರೆಗೆ ಪರಪ್ಪನ ಅಗ್ರಹಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದರು. ತನಿಖೆ ನಡೆಸಿ ತಂದೆ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.
ನ್ಯಾ. ಕೆ.ಎನ್.ರೂಪಾ, ವಾದ-ಪ್ರತಿವಾದ ಆಲಿಸಿ ಆರೋಪಿಯನ್ನು ಅಪರಾಧಿ ಎಂದು ಘೋಷಣೆ ಮಾಡಿದ್ದಾರೆ. 20 ವರ್ಷ ಜೈಲು ಶಿಕ್ಷೆ 1.75 ಲಕ್ಷ ರೂ. ದಂಡ ವಿಧಿಸಿದ್ದಾರೆ. ನೊಂದ ಬಾಲಕಿಗೆ ಡಿಎಲ್‌ಎಸ್‌ಎಯಿಂದ 7 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ಕೃಷ್ಣವೇಣಿ ವಾದ ಮಂಡಿಸಿದ್ದರು.