ನ್ಯೂಸ್

ತಂದೆಯಿಂದಲೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ; ತಾಯಿಯಿಂದ ದೂರು | daughter

ವಿಜಯಪುರ: ಗಣಪತಿ ನೋಡಿಕೊಂಡು ಬರಲೆಂದು ಹೋಗಿದ್ದ ಮಗಳ ಮೇಲೆ ತಂದೆಯೇ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಇಂಡಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿರುವ ಮಗಳು ಮತ್ತು ಆಕೆಯ ತಾಯಿ ಕೌಟುಂಬಿಕ ಕಲಹದಿಂದಾಗಿ ತಂದೆಯಿಂದಲೇ ದೂರವಿದ್ದರು. ಇದೀಗ ಗಣಪತಿ ನೋಡಲೆಂದು ಹೋದಾಗ ಗಣಪತಿ ತೋರಿಸುವುದಾಗಿ ಕರೆದೊಯ್ದ ತಂದೆ ನಿರ್ಜನ ಪ್ರದೇಶದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದು, ಯಾತನೆಯಿಂದ ಕಂಗಾಲಾದ ಮಗು ಮನೆಗೆ ಬಂದು ತಾಯಿಗೆ ತಿಳಿಸಲಾಗಿ ಆಕೆ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾನುವಾರ (ಆ.31) ದೂರು ದಾಖಲಿಸಿದ್ದಾಳೆ.

ಶನಿವಾರ ರಾತ್ರಿ 8ರ ಸುಮಾರಿಗೆ ಓಣಿಯಲ್ಲಿನ ಗಣಪತಿ ನೋಡಿಕೊಂಡು ಬರಲು ಸಹೋದರಿಯ ಜೊತೆಗೆ ಹೋಗಿದ್ದ ಐದು ವರ್ಷದ ಹೆಣ್ಣು ಮಗುವಿನ ಮೇಲೆ ತಂದೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಂದು ಆ ಮಗುವಿನ ತಾಯಿಯೇ ದೂರು ದಾಖಲಿಸಿದ್ದಾರೆ.

ಅಲ್ಲದೇ ಈ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸಹ ಸ್ವಯಂಪ್ರೇರಿತ ದೂರು ದಾಖಲು ಮಾಡಿಕೊಳ್ಳುವುದಾಗಿ ಆಯೋಗದ ಸದಸ್ಯ ಶಶಿಧರ ಕೋಸುಂಬೆ ತಿಳಿಸಿದ್ದು, ಈಗಾಗಲೇ ದೂರವಾಣಿ ಮೂಲಕ ಸಂಬಂಧಿಸಿದ ಪೊಲೀಸ್ ಠಾಣೆ ಸಿಬ್ಬಂದಿಯೊಂದಿಗೆ ಮಾತನಾಡಿದ್ದಾರೆ ಎನ್ನಲಾಗಿದೆ. ಮಗುವಿನ ವೈದ್ಯಕೀಯ ಪರೀಕ್ಷೆ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ವಿಳಂಬವಿಲ್ಲದೇ ಮಾಡುವಂತೆ ಸೂಚಿಸಲಾಗಿದೆ ಎಂದು ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.

(ಏಜೆನ್ಸೀಸ್)