ನ್ಯೂಸ್

ಕಸ ಗುಡಿಸುವ ವಿಚಾರಕ್ಕೆ ಜಗಳ: ದೊಣ್ಣೆಯಿಂದ ವೃದ್ಧೆಯ ತಲೆಗೆ ಮಾರಣಾಂತಿಕ ಹಲ್ಲೆ

ಮಂಜುನಾಥ.ಕೆ

ಬೆಂಗಳೂರು: ಮನೆ ಎದುರು ಕಸ ಗುಡಿಸುವ ವಿಚಾರಕ್ಕೆ ಜಗಳ ನಡೆದು ಎದುರು ಮನೆಯ ವ್ಯಕ್ತಿಯೊಬ್ಬ ದೊಣ್ಣೆಯಿಂದ ವೃದ್ಧೆಯ ತಲೆಗೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಇಸ್ಲಾಂಪುರ ನಿವಾಸಿ ದಿಲ್‌ಷಾದ್ ಬೇಗಂ(೬೦) ಹಲ್ಲೆಗೊಳಗಾದವರು. ಈ ಸಂಬಂಧ ಗಾಯಾಳುವಿನ ಪುತ್ರ ರೆಹಮತ್ ಎಂಬುವವರು ನೀಡಿದ ದೂರಿನ ಮೇರೆಗೆ ಎದುರು ಮನೆಯ ನಿವಾಸಿ ಕಲೀಂ(೪೩) ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದಿಲ್‌ಷಾದ್ ಬೇಗಂ ಭಾನುವಾರ ರಾತ್ರಿ ೧೦ ಗಂಟೆ ಸುಮಾರಿಗೆ ಮನೆಯ ಎದುರು ಕಸ ಗುಡಿಸುತ್ತಿದ್ದರು. ಈ ವೇಳೆ ಎದುರು ಮನೆಯ ಕಲೀಂ ರಸ್ತೆಯಲ್ಲಿ ವಾಕಿಂಗ್ ಮಾಡುತ್ತಿದ್ದ. ಕಸ ಗುಡಿಸುವುದರಿಂದ ಧೂಳು ಮೇಲೆ ಏಳುತ್ತಿದೆ ಎಂದು ಜಗಳ ತೆಗೆದಿದ್ದಾನೆ. ಹೀಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಕಲೀಂ ಮನೆಯಿಂದ ದೊಣ್ಣೆ ತಂದು ದಿಲ್‌ಷಾದ್ ಬೇಗಂ ಅವರ ತಲೆಗೆ ಹಲ್ಲೆ ಮಾಡಿದ್ದಾನೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡು ಕುಸಿದು ಬಿದ್ದ ದಿಲ್‌ಷಾದ್ ಬೇಗಂ ಅವರನ್ನು ಕುಟುಂದವರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸದ್ಯ ಚಿಕಿತ್ಸೆ ಮುಂದುವರಿದಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಈ ಸಂಬಂಧ ದಿಲ್‌ಷಾದ್ ಬೇಗಂ ಪುತ್ರ ರೆಹಮತ್ ನೀಡಿದ ದೂರಿನ ಮೇರೆಗೆ ಎಚ್‌ಎಎಲ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ಕಲೀಂನನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿ ಕಲೀಂನ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ತಿಳಿದು ಬಂದಿದೆ. ಕಸ ಗುಡಿಸುವ ವಿಚಾರಕ್ಕೆ ಹಿಂದೆ ಸಹ ಕಲೀಂ ಕಿರಿಕ್ ಮಾಡಿದ್ದ ಎನ್ನಲಾಗಿದೆ. ಹೀಗಾಗಿ ಆತನನ್ನು ನಿಮ್ಹಾನ್ಸ್‌ಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.