ನ್ಯೂಸ್

ಫಾಸ್ಟ್ಯಾಗ್ ಪಥ ತಗಾದೆ, ಟೋಲ್ ಸಿಬ್ಬಂದಿ-ಚಾಲಕರ ವಾಗ್ವಾದ

ಬೆಂಗಳೂರು: ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಟೋಲ್​ಪ್ಲಾಜಾಗಳಲ್ಲಿ ಫಾಸ್ಟಾ್ಯಗ್ ಮೂಲಕ ಟೋಲ್​ಶುಲ್ಕ ವಸೂಲಿ ವ್ಯವಸ್ಥೆ ಕಡ್ಡಾಯಗೊಳಿಸಿದ ಮೊದಲ ದಿನ ವಾಹನ ಚಾಲಕರು ಮತ್ತು ಟೋಲ್ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.

ಟೋಲ್​ಪ್ಲಾಜಾಗಳಲ್ಲಿ ಉಂಟಾಗುವ ಸಂಚಾರ ದಟ್ಟಣೆ ನಿಯಂತ್ರಣ ಮತ್ತು ಅದರಿಂದ ವ್ಯಯವಾಗುತ್ತಿದ್ದ ಇಂಧನ ಉಳಿತಾಯಕ್ಕಾಗಿ ದೇಶದೆಲ್ಲ ಟೋಲ್​ಪ್ಲಾಜಾಗಳಲ್ಲಿ ಫಾಸ್ಟಾ್ಯಗ್ ಮೂಲಕವೇ ಶುಲ್ಕ ವಸೂಲಿಗೆ ಕ್ರಮ ಕೈಗೊಳ್ಳಲಾಗಿದೆ. ಮೂರು ಬಾರಿ ಗಡುವು ವಿಸ್ತರಿಸಿ, ಗುರುವಾರದಿಂದ ಕಡ್ಡಾಯಗೊಳಿಸಲಾಗಿದೆ. ಟೋಲ್​ಗಳಲ್ಲಿ ಒಂದು ಪಥವನ್ನು ನಗದು, ಉಳಿದಿದ್ದು ಫಾಸ್ಟಾ್ಯಗ್ ಪಥಗಳನ್ನಾಗಿ ನಿಗದಿ ಮಾಡಲಾಗಿದೆ. ಸ್ಟಿಕ್ಕರ್ ಇಲ್ಲದ ವಾಹನಗಳು ಫಾಸ್ಟಾ್ಯಗ್ ಪಥದಲ್ಲಿ ಸಂಚರಿಸಿದರೆ ದುಪ್ಪಟ್ಟು ಶುಲ್ಕ ಪಾವತಿಸಬೇಕು ಎಂದು ಹೆದ್ದಾರಿ ಪ್ರಾಧಿಕಾರ ತಿಳಿಸಿದೆ.

ಹೀಗಾಗಿ ಗುರುವಾರ ಫಾಸ್ಟಾ್ಯಗ್ ಪಥದಲ್ಲಿ ಬಂದ ಸ್ಟಿಕ್ಕರ್ ಇಲ್ಲದ ವಾಹನಗಳಿಂದ ಟೋಲ್ ಸಿಬ್ಬಂದಿ ದುಪ್ಪಟ್ಟು ಶುಲ್ಕ ವಸೂಲಿಗೆ ಮುಂದಾದರು. ರಾಜಧಾನಿಯ ನೆಲಮಂಗಲ, ಅತ್ತಿಬೆಲೆ, ಎಲೆಕ್ಟ್ರಾನಿಕ್ ಸಿಟಿ, ದಕ್ಷಿಣ ಕನ್ನಡ ಜಿಲ್ಲೆಯ ಕೆಲ ಟೋಲ್​ಗಳಲ್ಲಿ ದುಪ್ಪಟ್ಟು ಶುಲ್ಕ ಪಾವತಿಗೆ ವಾಹನ ಮಾಲೀಕರು ಒಪ್ಪಿಲ್ಲ. ಹೀಗಾಗಿ ಟೋಲ್ ಸಿಬ್ಬಂದಿ ಮತ್ತು ವಾಹನ ಮಾಲೀಕರ ನಡುವೆ ಕೆಲಕಾಲ ವಾಗ್ವಾದ ನಡೆಯಿತು.

ಬ್ಯಾರಿಕೇಡ್​ಗಳ ಅಳವಡಿಕೆ: ಫಾಸ್ಟಾ್ಯಗ್ ಸ್ಟಿಕ್ಕರ್ ಇರುವ ವಾಹನಗಳಿಗೆ ಅಡೆತಡೆ ಉಂಟಾಗುವುದನ್ನು ತಡೆಯಲು, ನಗದು ಪಥ ಮತ್ತು ಫಾಸ್ಟಾ್ಯಗ್ ಪಥಗಳ ನಡುವೆ ಬ್ಯಾರಿಕೇಡ್ ಅಳವಡಿಸಲು ಟೋಲ್​ಪ್ಲಾಜಾಗಳಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸೂಚನೆ ನೀಡಿದೆ. ಜತೆಗೆ ಪಥಗಳು ಆರಂಭವಾಗುವ ಸ್ಥಳದಲ್ಲಿ ಸಿಬ್ಬಂದಿ ನೇಮಿಸಿ, ಫಾಸ್ಟಾ್ಯಗ್ ಇಲ್ಲದ ವಾಹನಗಳನ್ನು ನಗದು ಪಥದಲ್ಲೇ ಸಂಚರಿಸುವಂತೆ ಮಾಡಬೇಕು ಎಂದು ತಿಳಿಸಲಾಗಿದೆ.

ಸರಿಯಾಗಿ ಕೆಲಸ ಮಾಡದ ಸ್ಕಾ್ಯನರ್: ಫಾಸ್ಟಾ್ಯಗ್ ಸ್ಟಿಕ್ಕರ್​ನಲ್ಲಿನ ಬಾರ್​ಕೋಡ್ ಸ್ಕಾ್ಯನ್ ಮಾಡುವಲ್ಲಿ ಸಮಸ್ಯೆಯಿದ್ದರೆ, ವಾಹನ ಮಾಲೀಕರು ಟೋಲ್​ಶುಲ್ಕ ಪಾವತಿಸದೆ ಸಂಚರಿಸಬಹುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ತಿಳಿಸಿದೆ. ಆದರೂ, ಚಿತ್ರದುರ್ಗ- ಹಿರಿಯೂರು ಮಾರ್ಗದ ಗುಯಿಲಾಳು ಟೋಲ್​ಪ್ಲಾಜಾದಲ್ಲಿ ಸ್ಕ್ಯಾನಿಂಗ್ ಸಮಸ್ಯೆ ಕಂಡುಬಂದಿದ್ದು, ಹ್ಯಾಂಡ್ ರೀಡರ್ ಬಳಸಲಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬ್ರಹ್ಮರಕೂಟ್ಲು, ತಲಪಾಡಿ, ಸುರತ್ಕಲ್ ಎನ್​ಐಟಿಕೆ, ಉಡುಪಿ ಜಿಲ್ಲೆಯ ಹೆಜಮಾಡಿ ಮತ್ತು ಸಾಸ್ತಾನಗಳಲ್ಲಿನ ಟೋಲ್​ನಲ್ಲೂ ಫಾಸ್ಟಾ್ಯಗ್ ಸ್ಕಾ್ಯನ್ ಸಮಸ್ಯೆ ಉಂಟಾಗಿತ್ತು. ಆದರೂ, ವಾಹನ ಮಾಲೀಕರಿಗೆ ವಿನಾಯಿತಿ ನೀಡದೆ ನಗದು ರೂಪದಲ್ಲಿ ಶುಲ್ಕ ವಸೂಲಿ ಮಾಡಲಾಯಿತು. ರಾಜ್ಯದ 36 ಟೋಲ್​ಗಳ ಪೈಕಿ ಶೇ.60ರಲ್ಲಿ ಸ್ಕಾ್ಯನಿಂಗ್ ಸಮಸ್ಯೆಯಿಂದ ಶುಲ್ಕ ಪಾವತಿಸಲು ಸಮಸ್ಯೆ ಉಂಟಾಗಿ, ಟ್ರಾಫಿಕ್ ಹೆಚ್ಚುವಂತಾಗಿತ್ತು.

ವಾಹನ ಚಾಲಕರಿಗೆ ನಷ್ಟ: ಈ ಹಿಂದೆ ವಾಹನಗಳು ಒಂದು ಟೋಲ್​ಪ್ಲಾಜಾ ಮೂಲಕ ಸಂಚರಿಸಿ ನಂತರ ಮುಂದಿನ 24 ಗಂಟೆಗಳಲ್ಲಿ ಅದೇ ಟೋಲ್​ನಿಂದ ವಾಪಸ್ ಬರುವಂತಾದರೆ ಎರಡೂ ಕಡೆ ಸಂಚಾರಕ್ಕೆ ಒಮ್ಮೆಲೆ ಶುಲ್ಕ ಪಾವತಿಸಿ ಟಿಕೆಟ್ ಪಡೆ ಯಬಹುದಾಗಿತ್ತು. ಈಗ ಫಾಸ್ಟಾ್ಯಗ್ ಮೂಲಕ ಒಂದು ಮಾರ್ಗದ ಸಂಚಾರಕ್ಕೆ ಶುಲ್ಕ ಪಾವತಿಸುವ ವ್ಯವಸ್ಥೆ ಜಾರಿಗೆ ತರಲಾಗಿದೆ. ಅದರಿಂದ ವಾಹನ ಚಾಲಕರಿಗೆ ನಷ್ಟ ಉಂಟಾಗುವಂತಾಗಿದೆ.

ಇಲ್ಲಿನ್ನೂ ಜಾರಿಯಾಗಿಲ್ಲ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಕನ್ನೇಗಾಲ ಟೋಲ್, ಹುಬ್ಬಳ್ಳಿ-ಧಾರವಾಡ ಬೈಪಾಸ್​ನಲ್ಲಿ ಫಾಸ್ಟಾ್ಯಗ್ ಮೂಲಕ ಶುಲ್ಕ ವಸೂಲಿ ವ್ಯವಸ್ಥೆ ಜಾರಿಯಾಗಿಲ್ಲ. ಹುಬ್ಬಳ್ಳಿಯ ಗಬ್ಬೂರ ಬೈಪಾಸ್ ಹಾಗೂ ನರೇಂದ್ರ ಬೈಪಾಸ್ ಟೋಲ್​ಗೇಟ್ ಮಧ್ಯೆ ಬರುವ 3 ಮಾರ್ಗಗಳಲ್ಲಿ ಇನ್ನೂ ಸ್ಕಾ್ಯನಿಂಗ್ ಉಪಕರಣ ಅಳವಡಿಸಿಲ್ಲ. ದಾವಣಗೆರೆಯ ಹೆಬ್ಬಾಳ್ ಟೋಲ್​ನಲ್ಲಿ ಗುರುವಾರ 153 ವಾಹನಗಳು ದುಪ್ಪಟ್ಟು ಶುಲ್ಕ ಪಾವತಿಸಿ ಸಂಚರಿಸಿವೆ. ಬೀದರ್​ನ ಮಂಗಲಗಿ ಬಳಿ ಟೋಲ್​ಪ್ಲಾಜಾದಲ್ಲಿ ಅರ್ಧಕ್ಕಿಂತ ಹೆಚ್ಚು ವಾಹನಗಳು ಫಾಸ್ಟಾ್ಯಗ್ ಇಲ್ಲದೆ ಬರುತ್ತಿದ್ದು, ದುಪ್ಪಟ್ಟು ಶುಲ್ಕ ಪಡೆಯಲಾಗುತ್ತಿದೆ. ಇದರಿಂದ ವಾಹನ ದಟ್ಟಣೆ ಹೆಚ್ಚುವಂತಾಗಿದೆ. ವಿಜಯಪುರ, ಮೈಸೂರು, ಹಾಸನ ಜಿಲ್ಲೆಯಲ್ಲಿ ಯಾವುದೇ ಸಮಸ್ಯೆ ಎದುರಾಗಿಲ್ಲ.