ಸಾಂದರ್ಭಿಕ ಚಿತ್ರ 
ನ್ಯೂಸ್

ಅಪರಾಧಿಗಳ ಪತ್ತೆಗೆ ಅಸ್ತ್ರವಾದ ಫಾಸ್ಟ್ಯಾಗ್

ಹೆದ್ದಾರಿಗಳಲ್ಲಿ ಟೋಲ್ ಶುಲ್ಕ ಸಂಗ್ರಹವನ್ನು ಸುಗಮಗೊಳಿಸಲು ಆರಂಭವಾದ ಫಾಸ್ಟಾ್ಯಗ್ ವ್ಯವಸ್ಥೆ, ಇಂದು ದೇಶದ ರಾಷ್ಟ್ರೀಯ ಭದ್ರತೆ ಮತ್ತು ಅಪರಾಧ ತನಿಖೆಯ ಪ್ರಮುಖ ‘ಡಿಜಿಟಲ್ ಪತ್ತೇದಾರಿ ಆಯುಧ’ವಾಗಿ ಬದಲಾಗುತ್ತಿರುವ ರೀತಿ ಅತ್ಯಂತ ಕುತೂಹಲಕಾರಿಯಾಗಿದೆ. ಮೊದಲು, ನಗದು ಅಥವಾ ಯುಪಿಐ ಮೂಲಕ ಟೋಲ್ ಶುಲ್ಕ ಪಾವತಿಸಲು ಎಲ್ಲ ವಾಹನಗಳೂ ನಿಲ್ಲುತ್ತಿದ್ದವು. ಅದರಿಂದ ಕಿಲೋಮೀಟರ್​ಗಟ್ಟಲೆ ಸರತಿ ಸಾಲು ಸೃಷ್ಟಿಯಾಗುತ್ತಿತ್ತು. ಹಾಗಾಗಿ, ವಾಹನಗಳು ಟೋಲ್​ಗೆ ಬರುತ್ತಿದ್ದಂತೆಯೇ ಆಟೋಮ್ಯಾಟಿಕ್ ಆಗಿ ಶುಲ್ಕ ಕಡಿತವಾಗುವಂಥ ತಂತ್ರಜ್ಞಾನ ಆಧಾರಿತ ‘ಫಾಸ್ಟ್ಯಾಗ್’ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು. 


ಅದೇ ಈಗ ರಾಷ್ಟ್ರೀಯ ಭದ್ರತೆ ಮತ್ತು ಅಪರಾಧ ತನಿಖೆಯ ಪ್ರಮುಖ ಅಸ್ತ್ರವಾಗಿ ಬದಲಾಗಿದೆ. ನಂಬರ್ ಪ್ಲೇಟ್ ಬದಲಿಸಿದರೂ ಅಪರಾಧಿಗಳು ತನಿಖಾ ಸಂಸ್ಥೆಗಳ ಜಾಲಕ್ಕೆ ಸಿಕ್ಕಿಬೀಳುವುದು ಹೇಗೆ? ಇಲ್ಲಿದೆ ಸಂಪೂರ್ಣ ವಿಶ್ಲೇಷಣಾತ್ಮಕ ಮಾಹಿತಿ.

ಮಧ್ಯರಾತ್ರಿಯ ಸಮಯ. ರಾಷ್ಟ್ರೀಯ ಹೆದ್ದಾರಿಯಲ್ಲಿ ಅತ್ಯಂತ ವೇಗವಾಗಿ ಧಾವಿಸುತ್ತಿದ್ದ ಕಪ್ಪು ಬಣ್ಣದ ಎಸ್​ಯುುವಿ ಕಾರೊಂದು ಟೋಲ್ ಪ್ಲಾಜಾವನ್ನು ತಲುಪುತ್ತದೆ. ಚಾಲಕ ಕಾರಿನ ಗಾಜನ್ನು ಕೆಳಗಿಳಿಸುವುದಿಲ್ಲ, ಹಣವನ್ನೂ ನೀಡುವುದಿಲ್ಲ. ಕೇವಲ ಎರಡು ಸೆಕೆಂಡುಗಳಲ್ಲಿ ಟೋಲ್​ನ ಬ್ಯಾರಿಕೇಡ್ ತೆರೆದುಕೊಳ್ಳುತ್ತದೆ, ವಾಹನ ಮಿಂಚಿನ ವೇಗದಲ್ಲಿ ಮುಂದೆ ಸಾಗುತ್ತದೆ. ತಾವಿನ್ನು ಪೊಲೀಸರ ಕಣ್ಣು ತಪ್ಪಿಸಿ ಸುರಕ್ಷಿತವಾಗಿ ಪಾರಾದೆವು ಎಂದು ಕಾರಿನಲ್ಲಿದ್ದವರು ಭಾವಿಸುತ್ತಾರೆ. 

ಆದರೆ, ಅದೇ ಸೆಕೆಂಡಿನಲ್ಲಿ ದೆಹಲಿಯ ಕೇಂದ್ರ ಕಂಟ್ರೋಲ್ ರೂಂ ಮತ್ತು ರಾಜ್ಯ ಪೊಲೀಸ್ ಕೇಂದ್ರಸ್ಥಾನದಲ್ಲಿ ‘ರೆಡ್ ಅಲರ್ಟ್’ ಬೆಳಗುತ್ತದೆ! ಏಕೆಂದರೆ, ಆ ಕಾರಿನ ವಿಂಡ್​ಶೀಲ್ಡ್ ಮೇಲಿದ್ದ ಸಣ್ಣ ಫಾಸ್ಟ್ಯಾಗ್ ಸ್ಟಿಕ್ಕರ್ ಮತ್ತು ಟೋಲ್ ಪ್ಲಾಜಾದಲ್ಲಿದ್ದ ಹೈಟೆಕ್ ಕ್ಯಾಮರಾಗಳು ಆ ವಾಹನದ ಪ್ರತಿಯೊಂದು ವಿವರವನ್ನೂ ತನಿಖಾ ಸಂಸ್ಥೆಗಳಿಗೆ ಕ್ಷಣಾರ್ಧದಲ್ಲಿ ಕಳಿಸಿರುತ್ತವೆ. ಮುಂದಿನ ಟೋಲ್ ತಲುಪುವ ಹೊತ್ತಿಗೆ ಆ ಕಾರು ಭದ್ರತಾ ಪಡೆಗಳ ವಶದಲ್ಲಿರುತ್ತದೆ!


ಹೆದ್ದಾರಿ ಟೋಲ್​ಗಳಲ್ಲಿ ಸುದೀರ್ಘ ಸಾಲುಗಳನ್ನು ತಪ್ಪಿಸಲು ಮತ್ತು ನಗದುರಹಿತ ವಹಿವಾಟಿಗೆಂದು ಕೆಲವು ವರ್ಷಗಳ ಹಿಂದೆ ಪರಿಚಯಿಸಲಾದ ಫಾಸ್ಟಾ್ಯಗ್ ವ್ಯವಸ್ಥೆ, ಇಂದು ಪ್ರಮುಖ ಡಿಜಿಟಲ್ ಕಣ್ಗಾವಲು ಆಯುಧವಾಗಿ ಮಾರ್ಪಟ್ಟಿದೆ. ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಜಾರಿಗೊಳಿಸಿರುವ ಹೊಸ ನಿಯಮಗಳ ಪ್ರಕಾರ, ತನಿಖಾ ಸಂಸ್ಥೆಗಳಿಗೆ ಫಾಸ್ಟಾ್ಯಗ್ ಡೇಟಾದ ಸೀಮಿತ ಆಕ್ಸೆಸ್ ನೀಡಲಾಗುತ್ತಿದ್ದು, ಇದು ಅಪರಾಧ ತನಿಖೆಯ ಚಿತ್ರಣವನ್ನೇ ಬದಲಾಯಿಸುತ್ತಿದೆ.

ರಿಯಲ್​ಟೈಮ್ ಮಾಹಿತಿ ರವಾನೆ

ಕೇಂದ್ರ ಸರ್ಕಾರ ಹೆದ್ದಾರಿಗಳಲ್ಲಿ ಸಾಗುವ ವಾಹನಗಳ ಚಲನವಲನದ ಮೇಲೆ ಕಣ್ಣಿಡಲು ಮತ್ತು ಶಂಕಿತ ಅಪರಾಧ ಚಟುವಟಿಕೆಗಳನ್ನು ತಡೆಯಲು ಹೆದ್ದಾರಿ ಕಣ್ಣಾವಲು ವ್ಯವಸ್ಥೆಯನ್ನು ಬಲಪಡಿಸಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ನಿರ್ದೇಶನದಂತೆ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ), ಜಾರಿ ನಿರ್ದೇಶನಾಲಯ (ಇಡಿ), ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ), ರಾಜ್ಯಗಳ ಪೊಲೀಸ್ ಇಲಾಖೆಗಳು ಹಾಗೂ ವಿವಿಧ ಕೇಂದ್ರ ಗುಪ್ತಚರ ಸಂಸ್ಥೆಗಳಿಗೆ ಫಾಸ್ಟಾ್ಯಗ್ ಡೇಟಾಬೇಸ್​ನ ಕೆಲವಷ್ಟು ಮಹತ್ವದ ಮಾಹಿತಿಯನ್ನು ರಿಯಲ್ ಟೈಮ್ಲ್ಲಿ ಒದಗಿಸಲಾಗುತ್ತಿದೆ. 

ಕೃತ್ಯ ನಡೆದ ತಕ್ಷಣವೇ ತನಿಖಾ ಸಿಬ್ಬಂದಿಗೆ ಅಲರ್ಟ್ ಸಿಗಬೇಕು ಎಂಬುದು ಈ ಹೊಸ ವ್ಯವಸ್ಥೆಯ ಮುಖ್ಯ ಉದ್ದೇಶ. ಯಾವುದೇ ಪ್ರಮುಖ ಅಪರಾಧ ಪ್ರಕರಣದಲ್ಲಿ ಭಾಗಿಯಾದ ವಾಹನ ಅಥವಾ ಭಯೋತ್ಪಾದನೆಯ ಶಂಕಿತ ವಾಹನವನ್ನು ತನಿಖಾಧಿಕಾರಿಗಳು ಒಮ್ಮೆ ಬ್ಲಾ್ಯಕ್​ಲಿಸ್ಟ್ ಅಥವಾ ವಾಚ್​ಲಿಸ್ಟ್ಗೆ ಸೇರಿಸಿದರೆ, ಆ ವಾಹನ ದೇಶದ ಯಾವುದೇ ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾ ದಾಟಿದರೂ ಅದೇ ಕ್ಷಣದಲ್ಲೇ ಸಂಬಂಧಪಟ್ಟ ತನಿಖಾ ತಂಡಕ್ಕೆ ಸ್ವಯಂಚಾಲಿತ ಸಂದೇಶ ಮತ್ತು ವಾಹನದ ಜಿಯೋ ಲೋಕೇಶನ್ ರವಾನೆಯಾಗುತ್ತದೆ.

ನಂಬರ್​ಪ್ಲೇಟ್ ಬದಲಿಸಿದರೂ ಬಚಾವಾಗಲು ಸಾಧ್ಯವಿಲ್ಲ!

ಫಾಸ್ಟಾ್ಯಗ್ ಮೂಲಕ ಅಪರಾಧಿಗಳನ್ನು ಪತ್ತೆಹಚ್ಚುವ ಪ್ರಕ್ರಿಯೆಯ ಹಿಂದೆ ಅತ್ಯಂತ ಸಂಕೀರ್ಣವಾದ, ಆದರೆ ಅತ್ಯಂತ ಪರಿಣಾಮಕಾರಿಯಾದ ತಾಂತ್ರಿಕ ಹಂತಗಳಿವೆ:


ಆರ್​ಎಫ್​ಐಡಿ (ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್) ತಂತ್ರಜ್ಞಾನ: ಫಾಸ್ಟಾ್ಯಗ್ ಸ್ಟಿಕ್ಕರ್ ವಾಹನದ ಗಾಜಿನ ಮೇಲಿರುತ್ತದೆ. ಪ್ರತಿಯೊಂದು ಫಾಸ್ಟಾ್ಯಗ್ ಚಿಪ್​ನಲ್ಲೂ ವಾಹನದ ವಿಶಿಷ್ಟ ಗುರುತಿನ ಸಂಖ್ಯೆ ಮತ್ತು ಚಾಸಿಸ್ ಸಂಖ್ಯೆಗೆ ಲಿಂಕ್ ಆದ ಖಾತೆ ಮುದ್ರಿತವಾಗಿರುತ್ತದೆ. ವಾಹನವು ಟೋಲ್ ಲೇನ್ ಪ್ರವೇಶಿಸುತ್ತಿದ್ದಂತೆ ಆರ್​ಎಫ್​ಐಡಿ ಸ್ಕಾ್ಯನರ್ ಈ ಮಾಹಿತಿಯನ್ನು ಗ್ರಹಿಸುತ್ತದೆ.
ಎಎನ್​ಪಿಆರ್ (ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್) ಕ್ಯಾಮೆರಾಗಳು: ಇತ್ತೀಚಿನ ದಿನಗಳಲ್ಲಿ ಟೋಲ್ ಪ್ಲಾಜಾಗಳಲ್ಲಿ ಕೇವಲ ಆರ್​ಎಫ್​ಐಡಿ ಸ್ಕಾ್ಯನರ್ ಅಷ್ಟೇ ಅಲ್ಲದೆ, ಅತಿ ಹೆಚ್ಚಿನ ಸಾಮರ್ಥ್ಯದ ಆಟೋಮ್ಯಾಟಿಕ್ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾಗಳು ಅತಿ ವೇಗದಲ್ಲಿ ಚಲಿಸುವ ವಾಹನದ ನಂಬರ್ ಪ್ಲೇಟ್, ವಾಹನದ ಬಣ್ಣ ಮತ್ತು ಮಾದರಿಯನ್ನು ಹೈಡೆಫನಿಷನ್ ಚಿತ್ರದ ರೂಪದಲ್ಲಿ ಸೆರೆಹಿಡಿಯುತ್ತವೆ.
ವಾಹನ್ (ವಿಎಎಚ್​ಎಎನ್) ರಾಷ್ಟ್ರೀಯ ಡೇಟಾಬೇಸ್: ಅಪರಾಧಿಗಳು ತನಿಖೆಯ ಕಣ್ಣು ತಪ್ಪಿಸಲು ನಕಲಿ ನಂಬರ್ ಪ್ಲೇಟ್ ಹಾಕುವುದು ಸಾಮಾನ್ಯ. ಆದರೆ, ಎಎನ್​ಪಿಆರ್ ಕ್ಯಾಮರಾ ಸ್ಕಾ್ಯನ್ ಮಾಡಿದ ನಂಬರ್ ಪ್ಲೇಟ್ ವಿವರ ಮತ್ತು ಆರ್​ಎಫ್​ಐಡಿ ಸ್ಕಾ್ಯನ್ ಮಾಡಿದ ಫಾಸ್ಟಾ್ಯಗ್​ನ ‘ವಾಹನ್’ ಡೇಟಾಬೇಸ್ ವಿವರ ತಾಳೆಯಾಗದಿದ್ದರೆ, ತಕ್ಷಣವೇ ಅದನ್ನು ‘ಶಂಕಿತ ವಾಹನ’ ಎಂದು ಗುರುತಿಸಿ ತನಿಖಾ ಸಂಸ್ಥೆಗಳಿಗೆ ಅಲರ್ಟ್ ರವಾನೆಯಾಗುತ್ತದೆ. ಅಂದರೆ, ನಂಬರ್ ಪ್ಲೇಟ್ ಬದಲಿಸಿದರೂ ಅಪರಾಧಿಗಳು ಪಾರಾಗಲು ಸಾಧ್ಯವಿಲ್ಲ!

ವಿಬೀಡ್ ಎಂದರೆ ವೆಹಿಕಲ್ ಬೋರ್ನ್ ಇಂಪ್ರೂವೈಸ್ಡ್ ಎಕ್ಸ್ ಪ್ಲೋಸಿವ್ ಡಿವೈಸ್ (ವಿಬಿಐಇಡಿ). ಅಂದರೆ, ವಾಹನಗಳಿಗೆ ಅಳವಡಿಸಿದ ಸುಧಾರಿತ ಸ್ಪೋಟಕ ಸಾಧನಗಳು. ಉಗ್ರಗಾಮಿಗಳು ಸ್ಪೋಟಕಗಳನ್ನು ಹೊತ್ತೊ ಯ್ಯುವ ಸನ್ನಿವೇಶಗಳಲ್ಲಿ ಫಾಸ್ಟಾ್ಯಗ್ ಕಣ್ಣಾವಲು ಕೂಡ ಈಗ ಗೇಮ್ ಚೇಂಜರ್ ಎನಿಸಿದೆ. ಕಳುವಾದ ಕಾರುಗಳು ಅಥವಾ ಶಂಕಿತ ಉಗ್ರರ ವಾಹನಗಳು ಸೂಕ್ಷ್ಮ ಪ್ರದೇಶ ಪ್ರವೇಶಿಸುವುದನ್ನು ತಡೆಯಲು ಮತ್ತು ಘಟನೆ ನಡೆದ ನಂತರ ಅವರ ಚಲನವಲನದ ನಕ್ಷೆಯನ್ನು (ಮೂವ್​ವೆುಂಟ್ ಮ್ಯಾಪಿಂಗ್) ತಯಾರಿಸಲು ತನಿಖಾ ಸಂಸ್ಥೆಗಳಿಗೆ ಈ ಡೇಟಾ ಅತ್ಯಂತ ಉಪಯುಕ್ತವಾಗಿದೆ.

ಎರಡು ನೈಜ ಪ್ರಕರಣಗಳಿವು...

ಫಾಸ್ಟಾ್ಯಗ್ ತಂತ್ರಜ್ಞಾನ ದಿಂದ ಅಪರಾಧ ಪತ್ತೆ ಎಂಬುದು ಕೇವಲ ಕಾಗದದ ಮೇಲಿನ ಯೋಜನೆಯಾಗಿ ಉಳಿದಿಲ್ಲ. ಘಟನೆಗಳ ತನಿಖೆಯಲ್ಲಿ ಅಧಿಕಾರಿಗಳಿಗೆ ಇದು ಈಗ ಅತ್ಯಂತ ನೆಚ್ಚಿನ ಅಸ್ತ್ರ. ಅಂತಹ ಒಂದೆರಡು ನೈಜ ಪ್ರಕರಣಗಳ ವಿವರ ಇಲ್ಲಿದೆ.


ಕೋಟಿ ರೂ. ದರೋಡೆ ಪ್ರಕರಣ: ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ನಡೆದ 1 ಕೋಟಿ ರೂ. ದರೋಡೆ ಪ್ರಕರಣದಲ್ಲಿ, ದುಷ್ಕರ್ವಿುಗಳು ಕೃತ್ಯ ಎಸಗಿದ ನಂತರ ಕಾರಿನ ನಂಬರ್ ಪ್ಲೇಟ್ ಬದಲಿಸಿ ತಮಿಳುನಾಡು ಮತ್ತು ಕೇರಳದ ಗಡಿಯತ್ತ ಪರಾರಿಯಾಗಲು ಯತ್ನಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕಾರಿನ ವಿವರಗಳನ್ನು ಸಂಗ್ರಹಿಸಿ ಫಾಸ್ಟಾ್ಯಗ್ ಡೇಟಾ ಜತೆ ತಾಳೆ ಹಾಕಿ ವಿಶ್ಲೇಷಿಸಿದರು. ನಂಬರ್ ಪ್ಲೇಟ್ ಬದಲಾಗಿದ್ದರೂ, ಆ ಕಾರಿನಲ್ಲಿದ್ದ ಫಾಸ್ಟಾ್ಯಗ್ ಪ್ರತಿ ಟೋಲ್ ಪ್ಲಾಜಾದಲ್ಲಿ ಸ್ಕಾ್ಯನ್ ಆಗಿ ತನ್ನ ಡಿಜಿಟಲ್ ಫುಟ್​ಪ್ರಿಂಟ್ ಮೂಡಿಸಿತ್ತು. ಇದರ ಆಧಾರದ ಪೊಲೀಸರು 10ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಮುಂಬೈ-ಪುಣೆ ಹೆದ್ದಾರಿ ದರೋಡೆ ಕೇಸ್: ಮುಂಬೈನಲ್ಲಿ ಕೋಟ್ಯಂತರ ರೂ. ದರೋಡೆ ನಡೆಸಿ ಪರಾರಿಯಾಗುತ್ತಿದ್ದ ಆರೋಪಿಗಳು ಹೆದ್ದಾರಿಯಲ್ಲಿ ಅತಿ ವೇಗವಾಗಿ ಸಾಗುತ್ತಿದ್ದರು. ಪೊಲೀಸರು ಘಟನೆ ನಡೆದ ಕೇವಲ 2 ಗಂಟೆಗಳಲ್ಲಿ ಟೋಲ್ ಪ್ಲಾಜಾಗಳ ಫಾಸ್ಟಾ್ಯಗ್ ಟೈಮ್್ಟಾ್ಯಂಪ್ ವಿಶ್ಲೇಷಿಸಿ, ಅಪರಾಧಿಗಳು ಯಾವ ಟೋಲ್ ಕಡೆಗೆ ಸಾಗುತ್ತಿದ್ದಾರೆ ಎಂಬುದನ್ನು ನಿಖರವಾಗಿ ಅಂದಾಜಿಸಿ ಮುಂದಿನ ಚೆಕ್​ಪೋಸ್ಟ್​ನಲ್ಲಿ ಬಲೆ ಬೀಸಿ ಹಿಡಿದರು.

ಜನರ ಪ್ರೖೆವಸಿಗೆ ಧಕ್ಕೆ ಇಲ್ಲ

ಯಾವುದೇ ಡಿಜಿಟಲ್ ಕಣ್ಣಾವಲು ವ್ಯವಸ್ಥೆ ಜಾರಿಗೆ ಬಂದಾಗ ನಾಗರಿಕರ ಖಾಸಗಿತನ ಮತ್ತು ಡೇಟಾ ದುರುಪ ಯೋಗದ ಪ್ರಶ್ನೆಗಳು ಮೂಡುವುದು ಸಹಜ. ಸಾರ್ವಜನಿಕರ ದೈನಂದಿನ ಪ್ರಯಾಣದ ಮಾಹಿತಿ ದುರ್ಬಳಕೆ ಆಗದಂತೆ ತಡೆಯಲು ರಸ್ತೆ ಸಾರಿಗೆ ಸಚಿವಾಲಯ ಕಠಿಣ ಸ್ಟಾ್ಯಂಡರ್ಡ್ ಆಪರೇಟಿಂಗ್ ಪೊ›ಸೀಜರ್ (ಎಸ್​ಒಪಿ) ರೂಪಿಸಿದೆ. ಪೊಲೀಸ್ ವರಿಷ್ಠಾಧಿಕಾರಿ ಅಥವಾ ತನಿಖಾ ಸಂಸ್ಥೆಗಳ ಉನ್ನತ ಮಟ್ಟದ ಅಧಿಕಾರಿಗಳು ನಿರ್ದಿಷ್ಟ ಎಫ್​ಐಆರ್ ಅಥವಾ ತನಿಖಾ ಕೋರಿಕೆಯ ಆಧಾರದ ಮೇಲೆ ಮನವಿ ಸಲ್ಲಿಸಿದಾಗ ಮಾತ್ರವೇ ಫಾಸ್ಟಾ್ಯಗ್ ಡೇಟಾ ನೀಡ ಲಾಗುತ್ತದೆ. ಸಾಮಾನ್ಯ ನಾಗರಿಕರ ಚಲನವಲನದ ಮೇಲೆ ಅನಗತ್ಯ ಬೇಹು ಗಾರಿಕೆ ನಡೆಸುವುದಕ್ಕೆ ಅವಕಾಶ ಇಲ್ಲ.

ಬರಲಿದೆ ಉಪಗ್ರಹ ಕಣ್ಗಾವಲು

ಕೇಂದ್ರ ಸರ್ಕಾರ ಮುಂದಿನ ದಿನಗಳಲ್ಲಿ ‘ಉಪಗ್ರಹ ಆಧಾರಿತ ಟೋಲ್ ವ್ಯವಸ್ಥೆ’ ಜಾರಿಗೆ ತರಲು ಸಜ್ಜಾಗಿದೆ. ಅದರಲ್ಲಿ ಟೋಲ್ ಪ್ಲಾಜಾಗಳ ಬ್ಯಾರಿಕೇಡ್​ಗಳ ಬದಲು, ಉಪಗ್ರಹದ ಮೂಲಕವೇ ವಾಹನಗಳ ಟೋಲ್ ಪಾವತಿ ಲೆಕ್ಕಾಚಾರ ನಡೆಯುತ್ತದೆ. ಆಗ ದೇಶದ ಪ್ರತಿಯೊಂದು ನೋಂದಾಯಿತ ವಾಹನದ ರಿಯಲ್ ಟೈಮ್ ಸ್ಥಳದ ಮಾಹಿತಿ ಲಭ್ಯವಾಗುತ್ತದೆ. ವಾಹನ ಕಳವು, ಸರಕು ಕಳ್ಳಸಾಗಣೆ, ಅಪಹರಣ ಮತ್ತು ಉಗ್ರ ಚಟುವಟಿಕೆಗಳಿಗೆ ಕಡಿವಾಣ ಬೀಳುವ ನಿರೀಕ್ಷೆಯಿದೆ.

ಸವಾಲುಗಳು, ಇತಿಮಿತಿಗಳು

ಫಾಸ್ಟಾ್ಯಗ್ ಕಣ್ಗಾವಲು ವ್ಯವಸ್ಥೆ ಎಷ್ಟೇ ಶಕ್ತಿಶಾಲಿಯಾಗಿದ್ದರೂ ಕೆಲವು ಪ್ರಾಯೋಗಿಕ ಸವಾಲುಗಳು ಇದ್ದೇ ಇವೆ. ಅಪರಾಧಿಗಳು ವಾಹನದ ಫಾಸ್ಟಾ್ಯಗ್ ಸ್ಟಿಕ್ಕರ್ ಕಿತ್ತುಹಾಕಿದರೆ ಅಥವಾ ಬೇರೆ ವಾಹನದ ಫಾಸ್ಟಾ್ಯಗ್ ಕ್ಲೋನ್ ಮಾಡಿ ಅಂಟಿಸಿದರೆ ತಕ್ಷಣದ ಪತ್ತೆಗೆ ತೊಡಕಾಗಬಹುದು. ರಾಷ್ಟ್ರೀಯ ಹೆದ್ದಾರಿಯ ಟೋಲ್ ಪ್ಲಾಜಾಗಳನ್ನು ಹೊರತುಪಡಿಸಿ, ಗ್ರಾಮೀಣ ರಸ್ತೆಗಳು ಅಥವಾ ರಾಜ್ಯ ಹೆದ್ದಾರಿಗಳ ಮೂಲಕ ಅಪರಾಧಿಗಳು ಪರಾರಿಯಾದರೆ ಟೋಲ್ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುತ್ತದೆ.