podi, haddubastu application pending 
ನ್ಯೂಸ್

ಜಮೀನು ಪೋಡಿ, ಹದ್ದುಬಸ್ತುಗೆ ರೈತರ ಗೋಳಾಟ: 3 ವರ್ಷದಲ್ಲಿ 3.73 ಲಕ್ಷ ಅರ್ಜಿಗಳ ಬಾಕಿ- 3.73 Lakhs podi, haddubastu Applications Pending

ಭೂಮಾಪನ ನಿಯಮಾವಳಿ ಪ್ರಕಾರ ಸರ್ವೇ ಕೋರಿ ರೈತರು ಸಲ್ಲಿಸುವ ಅರ್ಜಿಗಳನ್ನು ತಿಂಗಳದೊಳಗೆ ಇತ್ಯರ್ಥಪಡಿಸಬೇಕು. ತಾಲೂಕು ಕಚೇರಿಯಲ್ಲಿ ಅರ್ಜಿಗೆ ದೀರ್ಘಕಾಲ ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಭೂದಾಖಲೆಗಳ ಉಪ ನಿರ್ದೇಶಕರಿಗೆ ಅಥವಾ ಇ- ಆಡಳಿತದ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ರೈತರು ದೂರು ಸಲ್ಲಿಸಬಹುದು. ಸಕಾಲ ಕಾಯ್ದೆ ವ್ಯಾಪ್ತಿಗೆ ಪೋಡಿ, ಹದ್ದುಬಸ್ತು ಸೇವೆ ತಂದಿದ್ದರೂ ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾದಿದ್ದರೆ ಮೇಲಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು.

ಬೆಂಗಳೂರು: ( 3.73 Lakhs podi, haddubastu Applications Pending) ಪ್ರಸ್ತುತ ಬರಗಾಲದಿಂದ ದಯನೀಯ ಸ್ಥಿತಿ ಅನುಭವಿಸುತ್ತಿರುವ ರೈತರು, ಭೂಮಿ ನಕ್ಷೆ (ಪೋಡಿ), ಗಡಿ ಗುರುತು (ಹದ್ದುಬಸ್ತು) ಮಾಡಿಸಿಕೊಳ್ಳಲು ಕಂದಾಯ ಮತ್ತು ಸರ್ವೇ ಕಚೇರಿಗಳಿಗೆ ಅರ್ಜಿ ಸಲ್ಲಿಸಿ ವರ್ಷಗಟ್ಟಲೆ ಕಾಯುವ ಶಿಕ್ಷೆ ಅನುಭವಿಸುತ್ತಿದ್ದಾರೆ.

ದರಖಾಸ್ತು ಮಂಜೂರಾತಿ ಪತ್ರ ಮತ್ತು ಮೂಲ ವಂಶವೃಕ್ಷಕ್ಕೆ ಹಳೆಯ ದಾಖಲೆ ಪತ್ರ ತಾಳೆಯಾಗದಿರುವುದೂ ಸೇರಿ ಸಣ್ಣಪುಟ್ಟ ತಾಂತ್ರಿಕ ನೆಪವೊಡ್ಡಿ ಅಧಿಕಾರಿಗಳು, ಅರ್ಜಿ ತಿರಸ್ಕಾರ ಅಥವಾ ಬಾಕಿ ಇಡುತ್ತಿದ್ದಾರೆ. ರೈತರ ಅಸಹಾಯಕತೆಯನ್ನೇ ಬಂಡವಾಳ ಮಾಡಿಕೊಂಡಿರುವ ದಲ್ಲಾಳಿಗಳು ಮತ್ತು ಮಧ್ಯವರ್ತಿಗಳ ಕಾಟವೂ ವಿಪರೀತವಾಗಿ ಹೆಚ್ಚಿದೆ. ರಾಜ್ಯಾದ್ಯಂತ 3 ವರ್ಷಗಳಲ್ಲಿ 1.66 ಲಕ್ಷ ಪೋಡಿ, 2.07 ಲಕ್ಷ ಹದ್ದುಬಸ್ತು ಮತ್ತು 5,525 ಭೂ ದಾಖಲೆಗಳ ತಿದ್ದುಪಡಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳು ವಿಲೇವಾಗದೆ ಬಾಕಿ ಉಳಿದಿವೆ ಎಂದು ಸರ್ಕಾರ ನೀಡಿರುವ ಅಂಕಿ-ಅಂಶಗಳಿಂದ ಬಹಿರಂಗವಾಗಿದೆ. ಭೂಮಿ ಪೋರ್ಟಲ್, ಭೂಮಾಪನ ಇಲಾಖೆ, ನೆಮ್ಮದಿ ಕೇಂದ್ರ, ಕರ್ನಾಟಕ ಒನ್ ಕೇಂದ್ರ ಮತ್ತು ಸೇವಾ ಸಿಂಧು ವೆಬ್‌ಸೈಟ್‌ನಲ್ಲಿ ಶುಲ್ಕ ಪಾವತಿಸುವ ಮೂಲಕ ಲಕ್ಷಾಂತರ ರೈತರು, ಹದ್ದುಬಸ್ತು ಮತ್ತು ಪೋಡಿಗಾಗಿ ಅರ್ಜಿ ಸಲ್ಲಿಸಿದ್ದಾರೆ.

ಭೂ ಸುಧಾರಣೆ ಕಾಯಿದೆ ಅನ್ವಯ ಗೇಣಿಹಕ್ಕಿನಡಿ ಜಮೀನು ಪಡೆದ ಸಾವಿರಾರು ರೈತರ ಸಾಗುವಳಿ ಜಮೀನು ಸರ್ವೆ ಇನ್ನು ಅಂತಿಮಗೊಂಡಿಲ್ಲ. ಭೂ ಸುಧಾರಣೆ ಕಾಯಿದೆಯಡಿ ಸಾಗುವಳಿ ಜಮೀನು ಹಕ್ಕು ಪಡೆದ ಸಾವಿರಾರು ರೈತರ ಬಳಿ ಇಂದಿಗೂ ಸಮರ್ಪಕ ಭೂ ದಾಖಲೆ ಇಲ್ಲವಾಗಿದೆ. ಗೇಣಿ ಪ್ರದೇಶದ ಭೂ ಹಕ್ಕಿಗಾಗಿ ಫಾರಂ-7, ಫಾರಂ-7(ಎ)ಅಡಿ ಅರ್ಜಿ ಸಲ್ಲಿಸಿದ ಸಾವಿರಾರು ಪ್ರಕರಣಗಳು ಉಪವಿಭಾಗಾಧಿಕಾರಿ ಅಧ್ಯಕ್ಷತೆಯ ಭೂ ನ್ಯಾಯ ಮಂಡಳಿಯಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಇತ್ಯರ್ಥ ಆಗದ, ಇತ್ಯರ್ಥ ಆದ ಪ್ರಕರಣಗಳ ವ್ಯಾಪ್ತಿಗೆ ಸೇರಿದ ರೈತರ ಪಾಲಿಗೆ ಸರ್ವೆ ಪೋಡಿ ಮುಕ್ತ ಅಭಿಯಾನ ನೆರವಿಗೆ ಬಂದಿಲ್ಲ. ಭೂ ಸುಧಾರಣೆ, ದರಖಾಸ್ತು, ಬಗರ್‌ಹುಕುಂ ಭೂ ಸಾಗುವಳಿ ಸಕ್ರಮ, ಸ್ವಂತ ಹಿಡುವಳಿ, ಕ್ರಯ, ವಿಭಾಗಕ್ಕೆ ಸಂಬಂಧಿಸಿದ ಸರ್ವೆಗೆ ಸರ್ಕಾರ ರೈತರಿಗೆ ಉಪಯುಕ್ತ ನಿಯಮ ರೂಪಿಸಿದರೂ ಅಷ್ಟೇನೂ ಪ್ರಗತಿಯಾಗಿಲ್ಲ

ಏನಿದು ಹದ್ದುಬಸ್ತು/ ಪೋಡಿ?

ಜಮೀನಿನ ಅಧಿಕೃತ ನಕಾಶೆ ಪ್ರಕಾರ ಭೂಮಿಯ ನೈಜ ಗಡಿ ಗುರುತಿಸಿ 4 ಮೂಲೆಗಳಿಗೆ ಗಡಿಕಲ್ಲು ನೆಡುವ ಪ್ರಕ್ರಿಯೆಗೆ ಹದ್ದುಬಸ್ತು ಎನ್ನಲಾಗುತ್ತದೆ. ಪಕ್ಕದ ಜಮೀನಿನವರೊಂದಿಗೆ ಗಡಿ ವಿವಾದ ಉಂಟಾದಾಗ ಅಥವಾ ಜಮೀನು ಮಾರಾಟ/ಖರೀದಿ ಮಾಡುವಾಗ ಇದು ಅತ್ಯಗತ್ಯ. ಜಮೀನಿನ ಸರ್ವೆ ನಂಬರ್ ವಿಭಜಿಸಿ, ಪ್ರತ್ಯೇಕ ಹಿಸ್ಸೆ ಅಥವಾ ನಕ್ಷೆ ತಯಾರಿಸಿ ಪ್ರತ್ಯೇಕವಾಗಿ ಗುರುತಿಸುವುದನ್ನು ‘ಪೋಡಿ’ ಅಥವಾ ಭೂಮಿ ದುರಸ್ತಿ ಎನ್ನಲಾಗುತ್ತದೆ. ಇದರಿಂದ ಜಮೀನಿನ ನಿಖರ ಮಾಲೀಕತ್ವ, ವಿಸ್ತೀರ್ಣ, ಮೇಲ್ಮೈ ನಕ್ಷೆ ಪಡೆಯಲು ಅನುಕೂಲವಾಗಲಿದೆ. ಜತೆಗೆ, ಬ್ಯಾಂಕ್‌ಗಳಿಂದ ಕೃಷಿ ಸಾಲ ಪಡೆಯಲು ಮತ್ತು ಜಮೀನಿನ ಗಡಿ ವಿವಾದ ನಿವಾರಣೆಯಾಗಲಿದೆ.

ಮೇಲಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಿ

ಭೂಮಾಪನ ನಿಯಮಾವಳಿ ಪ್ರಕಾರ ಸರ್ವೇ ಕೋರಿ ರೈತರು ಸಲ್ಲಿಸುವ ಅರ್ಜಿಗಳನ್ನು ತಿಂಗಳದೊಳಗೆ ಇತ್ಯರ್ಥಪಡಿಸಬೇಕು. ತಾಲೂಕು ಕಚೇರಿಯಲ್ಲಿ ಅರ್ಜಿಗೆ ದೀರ್ಘಕಾಲ ಸ್ಪಂದನೆ ಸಿಗದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಭೂದಾಖಲೆಗಳ ಉಪ ನಿರ್ದೇಶಕರಿಗೆ ಅಥವಾ ಇ- ಆಡಳಿತದ ಸಾರ್ವಜನಿಕ ಕುಂದುಕೊರತೆ ವಿಭಾಗಕ್ಕೆ ರೈತರು ದೂರು ಸಲ್ಲಿಸಬಹುದು. ಸಕಾಲ ಕಾಯ್ದೆ ವ್ಯಾಪ್ತಿಗೆ ಪೋಡಿ, ಹದ್ದುಬಸ್ತು ಸೇವೆ ತಂದಿದ್ದರೂ ನಿಗದಿತ ಅವಧಿಯೊಳಗೆ ಅರ್ಜಿ ವಿಲೇವಾದಿದ್ದರೆ ಮೇಲಧಿಕಾರಿಗಳಿಗೆ ಮೇಲ್ಮನವಿ ಸಲ್ಲಿಸಬಹುದು.

* ಬಹುತೇಕ ರೈತರು ಅರ್ಜಿಗಳ ವಿಲೇಗೆ 3 ವರ್ಷಗಳಿಂದ ಗೋಳಾಟ

* ತಹಸೀಲ್ದಾರ್, ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕ, ಶಿರಸ್ತೇದಾರರ ನಡುವೆ ಸಮನ್ವಯತೆ ಕೊರತೆ

* ಅರ್ಜಿಯ ಸ್ಥಿತಿ ತಿಳಿದುಕೊಳ್ಳಲು ರೈತರ ಹರಸಾಹಸ

* ಲಂಚಕ್ಕಾಗಿ ಕಡತ ವಿಲೇ ಮಾಡದ ಕೆಲ ಅಧಿಕಾರಿಗಳು

* ನಿಗದಿತ ಸಮಯದಲ್ಲಿ ಸ್ಥಳಕ್ಕೆ ಬಾರದ ಭೂಮಾಪಕರು

* ಹಾರಿಕೆ ಉತ್ತರ ನೀಡುವ ತಹಸೀಲ್ದಾರ್‌ಗಳು

* ಸಾರ್ವಜನಿಕರ ಕೈಗೆ ಸಿಗದ ಗ್ರಾಮಲೆಕ್ಕಾಧಿಕಾರಿಗಳು

* ಸರ್ವೇಯಿಂದ ಜಮೀನು ಭದ್ರಪಡಿಸಲು ಅವಕಾಶ

* ಒತ್ತುವರಿ ಆಗಿದೆಯೇ ಅಥವಾ ಇಲ್ಲವೋ ಎಂಬುದು ಗೊತ್ತಾಗಲಿದೆ

* ಮಕ್ಕಳಿಗೆ, ಅಣ್ಣತಮ್ಮಂದಿರಿಗೆ ಜಮೀನು ಹಂಚಿಕೆಗೆ ಅನುಕೂಲ

* ಜಮೀನಿನ ನಿರ್ದಿಷ್ಟ ವಿಸ್ತೀರ್ಣ ಸುತ್ತಳತೆ ಸಿಗಲಿದೆ

* ತಾಲೂಕು ಕಚೇರಿಗಳಲ್ಲಿ ರೈತರನ್ನು ಪೀಡಿಸುವ ಅಧಿಕಾರಿಗಳು

* ಜಮೀನಿನ ಪೋಡಿ, ಖಾತೆ ಬದಲಾವಣೆ, ಮ್ಯುಟೇಷನ್‌ಗೆ ಇಂತಿಷ್ಟು ಲಂಚ ನಿಗದಿ

ಜಿಲ್ಲಾವಾರು ಅರ್ಜಿಗಳ ಬಾಕಿ

ಜಿಲ್ಲೆ ಪೋಡಿ ಹದ್ದುಬಸ್ತು

ತುಮಕೂರು 14816 17660

ಬೆಳಗಾವಿ 8760 17158

ಹಾಸನ 9840 12626

ವಿಜಯಪುರ 4088 10666

ಮಂಡ್ಯ 11231 8999

ಮೈಸೂರು 8077 9970

ಕಲಬುರಗಿ 7248 7314

ರಾಯಚೂರು 8199 5169

ವಿಜಯನಗರ 2528 5936

ಶಿವಮೊಗ್ಗ 6080 5705

ಹಾವೇರಿ 1579 9235

ಚಿಕ್ಕಬಳ್ಳಾಪುರ 5205 7697

ಉಡುಪಿ 6751 2965

ಉತ್ತರ ಕನ್ನಡ 1826 5046

ಕೊಪ್ಪಳ 4663 3578

ಕೋಲಾರ 7930 6305

ಗದಗ 1366 4103

ಬೆಂ.ಗ್ರಾಮಾಂತರ5212 6535

ಬೆಂಗಳೂರು ನಗರ6534 4019

ಬೆಂ.ದಕ್ಷಿಣ 6220 7105

ಚಿಕ್ಕಮಗಳೂರು 5071 4163

ಚಿತ್ರದುರ್ಗ 5043 7154

ಚಾಮರಾಜನಗರ 1652 2257

ಯಾದಗಿರಿ 3982 2549

ದಾವಣಗೆರೆ 4342 7524

ಧಾರವಾಡ 1347 5885

ಬಳ್ಳಾರಿ 2161 5123

ಬಾಗಲಕೋಟೆ 1447 7258

ದಕ್ಷಿಣ ಕನ್ನಡ 5640 1779

ಕೊಡಗು 348 607

3 ವರ್ಷದ ಹಿಂದೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಹಗರೆ ನಾಡ ಕಚೇರಿಯಲ್ಲಿ ಶುಲ್ಕ ಪಾವತಿಸಿ ಪೋಡಿಗಾಗಿ ಅರ್ಜಿ ಸಲ್ಲಿಸಿದ್ದೆ. ಎರಡೂವರೆ ವರ್ಷ ಕಳೆದರೂ ಅರ್ಜಿ ವಿಲೇವಾಗುತ್ತಿಲ್ಲ. ಸಾಕಷ್ಟು ಅಧಿಕಾರಿಗಳನ್ನು ಭೇಟಿ ಮಾಡಿದ್ದರೂ ಪ್ರಯೋಜನವಾಗಲಿಲ್ಲ. ಈ ಬಗ್ಗೆ ದಿಕ್ಕು ತೋಚದೆ ಅಂತಿಮವಾಗಿ ಹಾಸನದ ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆ. ಮನವಿ ಸ್ವೀಕರಿಸಿದ ಡಿಸಿಯವರು ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ಕಳುಹಿಸಿದ್ದರು. ಬಳಿಕ, ಹದ್ದುಬಸ್ತುಗೆ ಅರ್ಜಿ ಸಲ್ಲಿಸುವಂತೆ ಬೇಲೂರು ತಾಲೂಕು ಕಚೇರಿಯ ಅಧಿಕಾರಿಗಳು ಹೇಳಿದ್ದರು.ಅದರಂತೆ, ಅರ್ಜಿ ಸಲ್ಲಿಸಿ ಆರೇಳು ತಿಂಗಳು ಕಳೆದರೂ ವಿಲೇವಾಗುತ್ತಿಲ್ಲ.

ಚನ್ನೇಗೌಡ, ರೈತ.