ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮದ ಸ.ನಂ 156ರಲ್ಲಿ ಸೂಡಾ ಲೇಔಟ್ ನಿರ್ಮಿಸುವ ಕುರಿತು ಸೂಡಾ ಕಚೇರಿಯಲ್ಲಿ ಅಧ್ಯಕ್ಷ ಎಚ್.ಎಸ್.ಸುಂದರೇಶ್ ರೈತರೊಂದಿಗೆ ಸಮಾಲೋಚನೆ ನಡೆಸಿದರು. ವಿಶ್ವನಾಥ ಮುದಜ್ಜಿ, ರಾಜೀವ್, ವಿಜಯಕುಮಾರ್ ಸಂತೇಕಡೂರು ಇದ್ದರು. 
ನ್ಯೂಸ್

ಸೋಗಾನೆಯಲ್ಲಿ ರೈತರನ್ನು ಒಕ್ಕಲೆಬ್ಬಿಸುವುದಿಲ್ಲ

ಶಿವಮೊಗ್ಗ: ಸೋಗಾನೆಯಲ್ಲಿ ಸೂಡಾದಿಂದ ಅಭಿವೃದ್ಧಿಪಡಿಸಲು ಉದ್ದೇಶಿಸಿರುವ ಲೇಔಟ್ ಕುರಿತು ರೈತರಲ್ಲಿನ ತಪ್ಪು ತಿಳಿವಳಿಕೆ ನಿವಾರಣೆ ಆಗಬೇಕು. ಅಲ್ಲಿ ಯಾವುದೇ ಬಗರ್‌ಹುಕುಂ ರೈತರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ತಿಳಿಸಿದರು.

ಸೂಡಾ ಕಚೇರಿ ಸಭಾಂಗಣದಲ್ಲಿ ಶನಿವಾರ ಶಿವಮೊಗ್ಗ ತಾಲೂಕು ಸೋಗಾನೆ ಗ್ರಾಮದ ಸ.ನಂ 156ರಲ್ಲಿ ಸೂಡಾ ಲೇಔಟ್ ನಿರ್ಮಿಸುವ ಕುರಿತು ರೈತರೊಂದಿಗೆ ಸಮಾಲೋಚನೆ ನಡೆಸಿದ ಅವರು, ಸೋಗಾನೆಯಲ್ಲಿ ಸಾರ್ವಜನಿಕರ ಹಿತಾಸಕ್ತಿಗಾಗಿ ಸೂಡಾದಿಂದ ನಿವೇಶನ ನಿರ್ಮಿಸಲು ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿ ಅವರಿಗೆ ಪತ್ರ ಬರೆದು 200 ಎಕರೆ ಜಾಗ ಮಂಜೂರು ಮಾಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ನಿವೇಶನ ನಿರ್ಮಿಸಲು ಸರ್ವೇ ನಂ.156ರಲ್ಲಿ 96 ಎಕರೆ ಜಾಗ ಮಂಜೂರಾಗಿದೆ ಎಂದರು.

ಈಗಾಗಲೇ ಅಲ್ಲಿ 600 ಎಕರೆ ಕೆಐಎಡಿಬಿ ವಶದಲ್ಲಿದೆ. ಉದ್ದೇಶಿತ ಪ್ರದೇಶದಲ್ಲಿ ಪ್ರಸ್ತುತ 49 ಎಕರೆ ಜಾಗದಲ್ಲಿ ರೈತರು ಸಾಗುವಳಿ ಮಾಡುತ್ತಿದ್ದಾರೆ. 2 ಎಕರೆ ಸ್ಮಶಾನ ಜಾಗವಿದೆ. ಮತ್ತೆ ಕೆಲ ರೈತರು ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದ್ದರಿಂದ ಎಷ್ಟು ಜನ ರೈತರು ಬಗರ್‌ಹುಕುಂ ಅರ್ಜಿಗಳನ್ನು ಸಲ್ಲಿಸಿದ್ದಾರೆ, ತೋಟ, ಗದ್ದೆ ಎಷ್ಟಿದೆ ಎಂದು ಸರ್ವೇ ಕಾರ್ಯ ಮಾಡಿದ ನಂತರವೇ ಹಾಗೂ ಸಾಧಕ ಬಾಧಕಗಳನ್ನು ನೋಡಿ, ಅಗತ್ಯ ಕ್ರಮ ಕೈಗೊಂಡು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಕ್ರಮವಹಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ರೈತರ ಬೇಡಿಕೆಯಂತೆ ರೈತರಿಗೆ ಬಗರ್‌ಹುಕುಂ ಸಮಿತಿಯಿಂದ ಹಕ್ಕುಪತ್ರ ಕೊಡಿಸಲು ಸಹಕರಿಸುತ್ತೇವೆ ಎಂದು ಸೂಡಾ ಅಧ್ಯಕ್ಷ ಎಚ್.ಎಸ್.ಸುಂದರೇಶ್ ರೈತರಿಗೆ ಭರವಸೆ ನೀಡಿದರು. ಹಕ್ಕುಪತ್ರ ಪಡೆದ ನಂತರ ಆ ಭೂಮಿಯನ್ನು ಖಾಸಗಿಯಾಗಿ ಯಾರಿಗೇ ಆಗಲಿ 20 ವರ್ಷ ಪರಭಾರೆ ಮಾಡಲು ಬರುವುದಿಲ್ಲ. ಆದರೆ ಸರ್ಕಾರಿ ಉದ್ದೇಶಕ್ಕೆ ನೀಡಬಹುದಾಗಿದೆ. ಹಾಗೆ ರೈತರು ನೀಡಿದ ಭೂಮಿಯನ್ನು 50:50 ಅನುಪಾತದಲ್ಲಿ ಪಡೆಯಲಾಗುವುದು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ತಿಳಿಸಿದರು. ಎಂಎಲ್‌ಸಿ ಬಲ್ಕೀಶ್ ಬಾನು, ಸೂಡಾ ಆಯುಕ್ತ ವಿಶ್ವನಾಥ ಮುದಜ್ಜಿ, ತಹಸೀಲ್ದಾರ್ ರಾಜೀವ್, ಸೂಡಾ ಸದಸ್ಯರು, ಮುಖಂಡರು, ರೈತರು ಹಾಜರಿದ್ದರು.