ವಿಜಯವಾಣಿ ಸುದ್ದಿಜಾಲ ಪಟ್ಟನಾಯಕನಹಳ್ಳಿ
ಹೈನುಗಾರಿಕೆ ರೈತರ ಪಾಲಿಗೆ ವರದಾನವಾಗಿದ್ದು, ಆರ್ಥಿಕ ಸದೃಢತೆ ನೀಡಿದೆ. ಆಕಸ್ಮಿಕವಾಗಿ ಮೃತಪಟ್ಟ ಹಸುಗಳಿಗೆ 60 ಸಾವಿರ ರೂಪಾಯಿ ವಿಮೆ ಹಣ ನೀಡಲಾಗುತ್ತಿದ್ದು, ಹಸು ವಿಮೆ ಪರಿಹಾರವನ್ನು 1 ಲ ರೂ.ಗೆ ಸರ್ಕಾರ ಏರಿಕೆ ಮಾಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ದೆಹಲಿ ವಿಶೇಷ ಪ್ರತಿನಿಧಿ, ಶಾಸಕ ಡಾ.ಟಿ.ಬಿ.ಜಯಚಂದ್ರ ಹೇಳಿದರು.
ಶಿರಾ ತಾಲೂಕಿನ ಮೇಲ್ಕುಂಟೆಯಲ್ಲಿ ಸೋಮವಾರ ಪಶುಪಾಲನಾ ಮತ್ತು ಪಶುವೈದ್ಯಕಿಯ ಸೇವಾ ಇಲಾಖೆಯಿಂದ ಹಮ್ಮಿಕೊಂಡಿದ್ದ ಉಚಿತ ಕಾಲು ಬಾಯಿ ಲಸಿಕಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆ ಜತೆಗೆ ಕುರಿ ಸಾಕಾಣಿಕೆ ದಾರರಿಗೆ ಪೋತ್ಸಾಹಿಸುವ ಉದ್ದೇಶದಿಂದ 50 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಹೈಟೆಕ್ ಕಸಾಯಿ ಖಾನೆಯನ್ನು ಶ್ರೀದಲ್ಲೆ ಪ್ರಾರಂಭಿಸಲಾಗುವುದು. ಇದರಿಂದ ಕುರಿ ಸಾಕಾಣಿಕೆದಾರರಿಗೆ ಆರ್ಥಿಕ ಶಕ್ತಿ ದೊರೆಯಲಿದೆ ಎಂದರು.
22 ವರ್ಷದ ಹಿಂದೆ ಶಿರಾ ತಾಲೂಕಿಗೆ ಹೇಮಾವತಿ ನೀರು ಪಾದಾರ್ಪಣೆ ಮಾಡಿತು. ಈ ಬಾರಿ ತಾಲೂಕಿನ 15 ಕೆರೆಗಳು ಭರ್ತಿಯಾಗಿದ್ದು, ಮದಲೂರು ಕೆರೆ ಕೂಡ ಶ್ರೀದಲ್ಲಿ ಭರ್ತಿಯಾಗಲಿದೆ. ತಾಲೂಕಿಗೆ ಇನ್ನೂ 2 ತಿಂಗಳುಗಳ ಕಾಲ ಹೇಮಾವತಿ ನೀರು ಹರಿಯಲಿದ್ದು, ಸಾಕಷ್ಟು ಕೆರೆಗಳು ಭರ್ತಿಯಾಗಿ ಅಂತರ್ಜಲ ಮಟ್ಟ ಹೆಚ್ಚಳವಾಗಲಿದೆ ಎಂದರು. 150 ರಾಸುಗಳು ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡಿದ್ದವು. ಇದೇ ಸಂದರ್ಭದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ಮೇಲ್ಕುಂಟೆ ಗ್ರಾಪಂ ಸದಸ್ಯರಾದ ಉದಯಕುಮಾರ್, ಅಭಿಲೇಖ, ಡೇರಿ ಅಧ್ಯ ರಂಗನ್, ನಾಗರಾಜ್, ನಗರಸಭೆ ಸದಸ್ಯ ಅಜಯಕುಮಾರ್, ಕಾಂಗ್ರೆಸ್ ಮುಖಂಡ ರಾವೇಂದ್ರ, ಪಿಎಸ್ಐ ಭವಿತಾ, ಪಿಡಿಒ ಲಕ್ಷಿ$್ಮಬಾಯಿ, ತಾಲೂಕಿನ ವಿವಿಧ ಪಶು ಆಸ್ಪತ್ರೆಯ ವೈದ್ಯರಾದ ಡಾ.ನಾಗೇಶ್, ಡಾ.ಯೋಗೀಶ್, ಡಾ.ನಳಿನಾ, ಡಾ.ಸುಪ್ರಿಯಾ, ಡಾ.ರಮೇಶ್, ಡಾ.ಮಂಜುನಾಥ ಪಾಟೀಲ್, ಡಾ.ವಿದ್ಯಾಶ್ರೀ, ಡಾ.ವಸಂತ ಕುಮಾರ್, ಡಾ.ಮಹದೇವ್, ಡಾ.ಚೇತನ್ ಕುಮಾರ್, ಡಾ.ಗಿರೀಶ್, ಡಾ.ತಿಮ್ಮರಾಜು ಉಪಸ್ಥಿತರಿದ್ದರು.
ವಿಜಯವಾಣಿ ಸುದ್ದಿಜಾಲ ತುರುವೇಕೆರೆ
ರೈತರು ತಮ್ಮ ಎಲ್ಲ ಜಾನುವಾರುಗಳಿಗೆ ಕಡ್ಡಾಯವಾಗಿ ಕಾಲು ಬಾಯಿ ರೋಗದ ಲಸಿಕೆ ಹಾಕಿಸಬೇಕು ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಮನವಿ ಮಾಡಿದರು.
ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮದಲ್ಲಿ ವೈದ್ಯರ ತಂಡಗಳಿಗೆ ಲಸಿಕೆ ಕಿಟ್ ವಿತರಣೆ ಮಾಡಿ ಮಾತನಾಡಿ, ಕೊಬ್ಬರಿ ಬೆಲೆ ಕುಸಿತ ಕಂಡ ಸಂದರ್ಭದಲ್ಲಿ ರೈತರು ಹಸು ಸಾಕುವ ಮೂಲಕ ಆರ್ಥಿಕವಾಗಿ ಸದೃಢರಾಗಿದ್ದಾರೆ. ತಮ್ಮ ಜಾನುವಾರುಗಳ ಪೋಷಣೆ ಅತ್ಯವಶ್ಯಕವಾಗಿದ್ದು, ಆ ನಿಟ್ಟಿನಲ್ಲಿ ಸರ್ಕಾರ ಕಾಲುಬಾಯಿ
ಜ್ವರ ಮುಕ್ತ ಮಾಡುವ ಉದ್ದೇಶದಿಂದ ಅ.21ರಿಂದ ನ.20ರವರೆಗೆ 6ನೇ ಸುತ್ತಿನ ರಾಷ್ಟ್ರೀಯ ಕಾಲುಬಾಯಿ ಜ್ವರ ಕಾರ್ಯಕ್ರಮವನ್ನು ತಾಲೂಕಿನಲ್ಲಿ ಇಲಾಖಾ ಸಿಬ್ಬಂದಿ ಹಮ್ಮಿಕೊಂಡಿದೆ. ತಾಲೂಕಿನ ರೈತರು ತಮ್ಮ 3 ತಿಂಗಳ ಮೇಲ್ಪಟ್ಟ ಎಲ್ಲ ಜಾನುವಾರುಗಳಿಗೆ ಕಡ್ಡಾಯವಾಗಿ ಲಸಿಕೆ ಹಾಕೆಸಿ ನಮ್ಮ ತಾಲೂಕನ್ನು ಕಾಲುಬಾಯಿ ಜ್ವರಮುಕ್ತ ತಾಲೂಕನ್ನಾಗಿ ಮಾಡಲು ರೈತರು ಸಹಕರಿಸಬೇಕು ಎಂದರು. ಜಾನುವಾರು ಅಭಿವೃದ್ಧಿ ಅಧಿಕಾರಿ ಜೆ.ಸಿದ್ದಪ್ಪ ಸೇರಿದಂತೆ ತಾಲೂಕಿನ ಎಲ್ಲ ಪಶುವೈದ್ಯ ಪರೀಕ್ಷಕರು ಹಾಗೂ ಪಶು ಸಖಿಯರು ಹಾಗೂ ರೈತರು ಇದ್ದರು.