ಬನ್ನೂರು: ಸಮೀಪದ ಗಾಡಿಜೋಗಿಹುಂಡಿ ಹಾಗೂ ಮಾದಿಗಹಳ್ಳಿ ಮಧ್ಯ ಭಾಗದಲ್ಲಿರುವ ಕೆರೆಯ ಮೇಲ್ಭಾಗ ರಸ್ತೆ ವಿಸ್ತರಣೆ ಕಾಮಗಾರಿ ಸಮರ್ಪಕವಾಗಿ ನಡೆಯುತ್ತಿಲ್ಲ ಎಂದು ಆರೋಪಿಸಿ, ರೈತ ಸಂಘದ ಕಾರ್ಯಕರ್ತರು ಶ್ರುಕವಾರ ಪ್ರತಿಭಟನೆ ನಡೆಸಿದರು.
ಗಾಡಿಜೋಗಿಹುಂಡಿ ಕೆರೆಯ ಮೇಲ್ಭಾಗದ ರಸ್ತೆ ಬಹಳಷ್ಟು ಕಿರಿದಾಗಿದ್ದು, ಅದನ್ನು ವಿಸ್ತರಣೆ ಮಾಡಬೇಕೆಂಬ ಸಾರ್ವಜನಿಕರ ಒತ್ತಾಯದ ಮೇರೆಗೆ ಕೆಲಸ ಆರಂಭಿಸಲಾಗಿದೆ. ಆದರೆ ಕಾಮಗಾರಿ ಬೇಕಾಬಿಟ್ಟಿ ನಡೆಯುತ್ತಿದೆ. ಕೇವಲ ಅರ್ಧ ಭಾಗಕ್ಕೆ ತಡೆಗೋಡೆ ನಿರ್ಮಿಸಿರುವುದರಿಂದ ರಸ್ತೆಯ ಮೇಲ್ಭಾಗ ಹಾಕುತ್ತಿರುವ ಮಣ್ಣು ಕೆಳಗೆ ಜಾರಿ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ವ್ಯವಸ್ಥಿತವಾಗಿ ಕಾಮಗಾರಿ ನಡೆಸಲು ಗುತ್ತಿಗೆದಾರರಿಗೆ ಸೂಚಿಸಬೇಕು. ಇಲ್ಲವಾದಲ್ಲಿ ಕಾವೇರಿ ನೀರಾವರಿ ನಿಗಮದ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಪ್ರತಿಭಟನಾನಿರತರು ಎಚ್ಚರಿಸಿದರು.
ರೈತ ಸಂಘದ ಅಧ್ಯಕ್ಷ ಹುಚ್ಚೇಗೌಡ, ಕರೋಹಟ್ಟಿ ಕುಮಾರಸ್ವಾಮಿ, ಮಹದೇವಸ್ವಾಮಿ, ರಾಮಚಂದ್ರೇಗೌಡ, ಶಾಂತರಾಜು, ಮಾದಿಗಹಳ್ಳಿ ಮಹೇಶ್, ಬೇವಿನಹಳ್ಳಿ ರವಿ, ಸೀಹಳ್ಳಿ ರಾಜು, ಸೀಹಳ್ಳಿ ರವಿ, ಚಂದ್ರು, ಮಲ್ಲೇಶ್, ಪುಟ್ಟೇಗೌಡ, ಸತೀಶ್, ಸಿದ್ದೇಗೌಡ ಮೊದಲಾದವರು ಇದ್ದರು.