ಶಿವಮೊಗ್ಗ: ನವದೆಹಲಿಯಲ್ಲಿ ಶಾಂತಿಯುತ ಚಳವಳಿ ನಡೆಸುತ್ತಿರುವ ರೈತರ ಮೇಲೆ ಕೇಂದ್ರ ಸರ್ಕಾರ ಅಮಾನವೀಯ ವರ್ತನೆ ತೋರುತ್ತಿದೆ ಎಂದು ಆರೋಪಿಸಿ ಮತ್ತು ಗ್ರಾಮೀಣ ಭಾರತ ಬಂದ್‌ಗೆ ಬೆಂಬಲಿಸಿ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆ ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೇಂದ್ರ ಸರ್ಕಾರ ರೈತರ ಚಳವಳಿಗೆ ಅವಕಾಶ ಕೊಡದೇ ಅಶ್ರುವಾಯು ಸಿಡಿಸಿ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ರೈತರ ಮೇಲೆ ಲಾಠಿ ಪ್ರಹಾರ, ರಬ್ಬರ್ ಬುಲೆಟ್‌ಗಳನ್ನು ಹಾರಿಸಿ ಭಯ ಹುಟ್ಟಿಸುವ ಕೆಲಸ ಮಾಡುತ್ತಿದೆ. ಇದೊಂದು ಅಮಾನವೀಯ ಕೃತ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಬದಲು ಸರ್ವಾಧಿಕಾರಿ ಧೋರಣೆ ತೋರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಪೊರೇಟ್ ಪರವಾದ ಯೋಜನೆಗಳನ್ನು ರದ್ದುಪಡಿಸಿ ಎಂಎಸ್‌ಪಿ(ಕನಿಷ್ಠ ಬೆಂಬಲ ಬೆಲೆ) ಹಾಗೂ ಖರೀದಿ ಖಾತ್ರಿ ಒದಗಿಸವ ಶಾಸನ ಜಾರಿಗೊಳಿಸಬೇಕು. ಈ ಹಿಂದೆ ದೆಹಲಿ ರೈತ ಹೋರಾಟದ ಸಂದರ್ಭದಲ್ಲಿ ನೀಡಿದ್ದ ಭರವಸೆಗಳ ಜಾರಿಗೊಳಿಸಬೇಕು. ಅರಣ್ಯ ಹಕ್ಕು ಕಾಯ್ದೆ ತಿದ್ದುಪಡಿ ಮಾಡಿ 15 ವರ್ಷಕ್ಕೂ ಹೆಚ್ಚು ಕಾಲ ಸಾಗುವಳಿ ಮಾಡಿದ ರೈತರಿಗೆ ಹಕ್ಕುಪತ್ರ ಕೊಡಬೇಕು. ರೈತರ ಎಲ್ಲ ರೀತಿಯ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಕೂಡ ರೈತ ವಿರೋಧಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು. ವಿದ್ಯುತ್ ಖಾಸಗೀಕರಣ ಮಾಡಬಾರದು. ಎಲ್ಲ ನೀರಾವರಿ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಬರಗಾಲ ಕಾಲಿಟ್ಟಿದ್ದು ರೈತರಿಗೆ ಪ್ರತಿ ಎಕರೆಗೆ 20 ಸಾವಿರ ರೂ. ಪರಿಹಾರ ನೀಡಬೇಕೆಂಬುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾಗೂ ಮುಖ್ಯಮಂತ್ರಿ ಸಿದ್ಧರಾಮಯ್ಯಗೆ ಮನವಿ ಮಾಡಿದರು.
ರೈತ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಪ್ರಮುಖರಾದ ಇ.ಬಿ.ಜಗದೀಶ್, ಟಿ.ಎಂ. ಚಂದ್ರಪ್ಪ, ಹಿಟ್ಟೂರು ರಾಜು, ಕಸೆಟ್ಟಿ ರುದ್ರೇಶ್, ಎಂ.ಮಂಜಪ್ಪ, ಪಿ.ಡಿ.ಮಂಜಪ್ಪ, ಕೆ.ರಾಘವೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿದ್ದರು.