ಸಾಗರ: ರಾಜ್ಯ ರೈತ ಸಂಘ (ಚೂನಪ್ಪ ಪೂಜಾರಿ ಬಣ)ದೊಂದಿಗೆ ಡಾ. ಎಚ್.ಗಣಪತಿಯಪ್ಪ ರೈತ ಸಂಘ ವಿಲೀನವಾಗಿದೆ. ಈ ಬಣಕ್ಕೆ ಸೇರಲು ಗಣಪತಿಯಪ್ಪ ಅವರ ಪುತ್ರ ಹೊಯ್ಸಳ ಗಣಪತಿಯಪ್ಪ, ಜಿಲ್ಲಾ ಮತ್ತು ತಾಲೂಕು ಸಂಘದ ಪದಾಧಿಕಾರಿಗಳು ಒಪ್ಪಿ ಸಹಿ ಮಾಡಿದ್ದಾರೆ ಎಂದು ರೈತ ಸಂಘದ ಜಿಲ್ಲಾ ಉಪಾಧ್ಯಕ್ಷ ರಮೇಶ್ ಕೆಳದಿ ತಿಳಿಸಿದರು.
ಬಣವನ್ನು ವಿಲೀನಗೊಳಿಸುವ ನಿರ್ಧಾರವನ್ನು ಏಕಾಏಕಿ ತೆಗೆದುಕೊಂಡಿದ್ದಲ್ಲ. ಸಂಘಟನಾ ಶಕ್ತಿ ಮೂಲಕ ರೈತರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತೇವೆ. ರೈತ ಸಂಘವು ಅ.21ರಂದು ಮುಳುಗಡೆ ಸಂತ್ರಸ್ತರು, ಬಗರ್‌ಹುಕುಂ, ಅರಣ್ಯಭೂಮಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುತ್ತಿರುವುದರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಪಾದಯಾತ್ರೆ ಸಂದರ್ಭ ಹೊಯ್ಸಳ ಗಣಪತಿಯಪ್ಪ ಸಹ ಪಾಲ್ಗೊಂಡು ಸ್ವಲ್ಪದೂರ ಹೆಜ್ಜೆ ಹಾಕಿ ವಾಪಸ್ ಹೋಗಿದ್ದರು. ಹೊಯ್ಸಳ ಗಣಪತಿಯಪ್ಪ ವೈಯಕ್ತಿಕ ಸಮಸ್ಯೆಯಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಅವರು ಪಾದಯಾತ್ರೆ ದಿನ ರಾತ್ರಿ ಆಡಿಯೋವೊಂದನ್ನು ಹರಿದು ಬಿಡುವ ಮೂಲಕ ಸಂಘದ ಜತೆ ಅಂತರ ಕಾಯ್ದುಕೊಂಡಿದ್ದರು. ಇದರಿಂದ ಬೇಸರಗೊಂಡ ದಿನೇಶ್ ಶಿರವಾಳ ಅವರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನ.8ರಂದು ರಾಜೀನಾಮೆ ನೀಡಲು ಮುಂದಾಗಿದ್ದರು. ಆದರೆ ಇದನ್ನು ಯಾರೂ ಒಪ್ಪಿಲ್ಲ. ಸದ್ಯ ಹೊಯ್ಸಳ ಮತ್ತು ಕಿರಣ್ ಮಾತ್ರ ಸಂಘಟನೆಯಿಂದ ಹೊರ ಹೋಗಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರೈತ ಸಂಘದ ತಾಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ ಮನೆಘಟ್ಟ ಮಾತನಾಡಿ, ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ ರಾಜೀನಾಮೆ ಕೊಡಲು ಮುಂದಾದಾಗ ಹೊಯ್ಸಳ ಗಣಪತಿಯಪ್ಪ ಸೇರಿ ಎಲ್ಲರೂ ಮನವೊಲಿಸುವ ಪ್ರಯತ್ನ ಮಾಡಿದ್ದೇವೆ. ಎಲ್ಲ ರೈತ ಸಂಘಟನೆಗಳು ಒಂದೇ ವೇದಿಕೆಯಲ್ಲಿ ತರಬೇಕು ಎನ್ನುವ ಹೊಯ್ಸಳ ಅವರ ಆಶಯಕ್ಕೆ ಜಿಲ್ಲಾಧ್ಯಕ್ಷರಾದಿಯಾಗಿ ಎಲ್ಲರೂ ಸಹಮತ ಸೂಚಿಸಿದ್ದೆವು. ಆದರೆ ಹೊಯ್ಸಳ ಏಕಾಏಕಿ ಪ್ರತ್ಯೇಕ ಹಾದಿ ತುಳಿದಿರುವುದು ಬೇಸರ ತರಿಸಿದೆ ಎಂದು ಹೇಳಿದರು.
ಗಣಪತಿ ತಾಳಗುಪ್ಪ, ಅಣ್ಣಪ್ಪ ಗುಡ್ಡೆಮನೆ, ಚಂದ್ರಪ್ಪ ಆಲಳ್ಳಿ, ಚಂದ್ರು ಪೂಜಾರಿ, ಸುರೇಂದ್ರ, ನಾಗರಾಜ್ ಸುದ್ದಿಗೋಷ್ಠಿಯಲ್ಲಿದ್ದರು.