ನವದೆಹಲಿ : ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಇಂದಿನಿಂದ ದೆಹಲಿಯ ಜಂತರ್ ಮಂತರ್ನಲ್ಲಿ 'ಕಿಸಾನ್ ಸಂಸದ್' ನಡೆಸಲಿದ್ದಾರೆ. ಸಂಸತ್ ಅಧಿವೇಶನದ ಅವಧಿಯಲ್ಲಿ ಅದೇ ಮಾದರಿಯಲ್ಲಿ ಪ್ರತಿ ದಿನ 200 ಜನರ ಗುಂಪುಗಳಲ್ಲಿ ಸೇರಿ ವಿನೂತನವಾಗಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಸಿಂಘು ಗಡಿಯ ಪ್ರತಿಭಟನಾ ಧರಣಿ ಸ್ಥಳದಿಂದ ಪ್ರತಿದಿನ 200 ರೈತರು ಪೊಲೀಸರ ಬಂದೋಬಸ್ತಿನಲ್ಲಿ ಜಂತರ್ ಮಂತರ್ಗೆ ತೆರಳಿ, ಈ ಕಿಸಾನ್ ಸಂಸದ್ ನಡೆಸಲಿದ್ದಾರೆ. ಇಂದಿನಿಂದ ಆಗಸ್ಟ್ 9 ರವರೆಗೆ ಪ್ರತಿದಿನ ಬೆಳಿಗ್ಗೆ 11 ರಿಂದ ಸಂಜೆ 5 ಗಂಟೆವರೆಗೆ ಈ ಪ್ರತಿಭಟನೆಯನ್ನು ನಡೆಸಲು ದೆಹಲಿ ಸರ್ಕಾರ ಅನುಮತಿ ನೀಡಿದೆ. ಪ್ರತಿಭಟನಾಕಾರರು ಶಾಂತಿ ಕಾಪಾಡಬೇಕು ಮತ್ತು ಕೋವಿಡ್ ಪ್ರೊಟೊಕಾಲನ್ನು ಪಾಲಿಸಬೇಕೆಂಬ ಷರತ್ತು ವಿಧಿಸಲಾಗಿದೆ.
ಸಂಸತ್ತಿನ ರೀತಿನೀತಿಗಳನ್ನು ಅನುಸರಿಸಿ ಸಭೆ ನಡೆಸಲಾಗುವುದು. ಸ್ಪೀಕರ್, ಡೆಪ್ಯುಟಿ ಸ್ಪೀಕರ್ರಂತೆ ಕೆಲವು ನಾಯಕರು ಸಾರಥ್ಯ ವಹಿಸುವರು. ಸಂಸತ್ತನ್ನು ಹೇಗೆ ನಡೆಸಬೇಕು ಎಂಬುದನ್ನು ನಾವು ತೋರಿಸಿಕೊಡಲಿದ್ದೇವೆ ಎಂದು ಚಳುವಳಿಗಾರ ಯೋಗೇಂದ್ರ ಯಾದವ್ ಹೇಳಿದ್ದಾರೆ. ಕೇರಳ ಮತ್ತು ಕರ್ನಾಟಕ ಸೇರಿದಂತೆ ದೂರದೂರದಿಂದ ಇದಕ್ಕಾಗಿ ರೈತರು ಆಗಮಿಸಲಿದ್ದಾರೆ ಎಂದಿದ್ದಾರೆ. (ಏಜೆನ್ಸೀಸ್)