ಮದ್ದೂರು : ಪ್ರಸ್ತುತ ದಿನಗಳಲ್ಲಿ ಮನುಷ್ಯನಿಗೆ ಅನ್ನ, ಅಕ್ಷರದಷ್ಟೇ ಆರೋಗ್ಯಕ್ಕೂ ಪ್ರಾಮುಖ್ಯತೆ ಇದ್ದು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಜನರು ಆದ್ಯತೆ ನೀಡಬೇಕೆಂದು ಕೆಂಗೇರಿ ವಿಶ್ವ ಒಕ್ಕಲಿಗ ಮಹಾಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಎಸ್.ಬಿ.ಎಂ. ರಸ್ತೆಯಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದಿರುವ ಮದ್ದೂರು ಹೆಲ್ತ್ ಕೇರ್ ಸಲ್ಯೂಷನ್ ಲಿಮಿಟೆಡ್‌ನ ಅಂಗಸಂಸ್ಥೆ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಶನಿವಾರಲೋಕಾರ್ಪಣೆ ಮಾಡಿ ಮಾತನಾಡಿದರು.
ರೈತಾಪಿ ವರ್ಗ ಅದರಲ್ಲೂ ಗ್ರಾಮೀಣ ಭಾಗದ ಜನರು ತಮ್ಮ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದರೊಟ್ಟಿಗೆ ಶ್ರೀಮಠ, ಸರ್ಕಾರಗಳು, ಸಂಘ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು ರೈತರ ಆರೋಗ್ಯಕ್ಕೆ ಒತ್ತು ನೀಡುತ್ತಿವೆ. ಇಲ್ಲವಾದಲ್ಲಿ ದೇಶದ ಆರ್ಥಿಕ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದರು.
ಖಾಸಗಿ ಆರೋಗ್ಯ ಸಂಸ್ಥೆಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಜನರಿಗೆ ನೀಡುವ ಜತೆಗೆ ಕಡಿಮೆ ದರದಲ್ಲಿ ಚಿಕಿತ್ಸೆ ಒದಗಿಸಬೇಕು ಎಂದು ಸಲಹೆ ನೀಡಿದರು.
ಶಸ್ತ್ರ ಚಿಕಿತ್ಸಾ ಘಟಕಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕ ಕೆ.ಎಂ.ಉದಯ್. ನೂತನ ಘಟಕವು ಜನಪರ ಸೇವೆಯ ಮೂಲಕ ಜನಮನ್ನಣೆಗಳಿಸುವಂತೆ ತಾವು ಸೇರಿದಂತೆ ಸ್ಥಳೀಯವಾಗಿ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.
ಎಂಎಲ್ಸಿ ಮಧು ಜಿ.ಮಾದೇಗೌಡ, ಪುರಸಭೆ ಅಧ್ಯಕ್ಷೆ ಕೋಕಿಲಾ, ಮದ್ದೂರು ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಬಿ.ಬಸವರಾಜು, ಸಂಸ್ಥೆಯ ಮುಖ್ಯಸ್ಥರಾದ ಡಾ.ಡಿ.ಕೆ.ಪ್ರಸನ್ನ, ಮನೋಜ್ ಎಸ್. ಗೌಡ, ಉದ್ಯಮಿ ವಿ.ಗೋವಿಂದು, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ ವನಿತಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ಜಿ.ಪಂ. ಮಾಜಿ ಸದಸ್ಯೆ ಸುಕನ್ಯಾ ಹನುಮಂತೇಗೌಡ ಇದ್ದರು.