ಶಿವಮೊಗ್ಗ: ಸೋಗಾನೆ ವಿಮಾನ ನಿಲ್ದಾಣಕ್ಕೆ ಜಮೀನು ನೀಡಿದ ರೈತರಿಗೆ ಒಪ್ಪಂದದಂತೆ ನಿವೇಶನ ವಿತರಿಸಲು ಸರ್ಕಾರ ವಿಳಂಬನೀತಿ ಅನುಸರಿಸುತ್ತಿದೆ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ನುಡಿದಂತೆ ನಡೆಯುವವರೆಗೂ ಗುರುವಾರದಿಂದ ಏರ್‌ಪೋರ್ಟ್ ಎದುರು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
ಗಾಂಧೀಜಿ ಅವರ ಭಾವಚಿತ್ರದೊಂದಿಗೆ ಸೋಗಾನೆ ಭೂಮಿ ಹಕ್ಕು ರೈತರ ಹೋರಾಟ ಸಮಿತಿ ನೇತೃತ್ವದಲ್ಲಿ ಶಾಂತಿಯುತ ಹೋರಾಟ ಆರಂಭಿಸಿರುವ ಸಂತ್ರಸ್ತರು, ವಿಮಾನ ನಿಲ್ದಾಣಕ್ಕಾಗಿ ನಾವು ಭೂಮಿಯನ್ನು ಕಳೆದುಕೊಂಡಿದ್ದೇವೆ. ನಮಗೆ ನಿವೇಶನ ನೀಡುವುದಾಗಿ ಸರ್ಕಾರದ ಆದೇಶವೂ ಆಗಿತ್ತು ಎಂದು ತಿಳಿಸಿದರು.
ನಿವೇಶನ ನೀಡುವಂತೆ ಕೋರ್ಟ್ ಆದೇಶ ನೀಡಿತ್ತು. ಏರ್‌ಪೋರ್ಟ್ ಉದ್ಘಾಟನೆಗೂ ಮುನ್ನ ನಿವೇಶನ ಹಂಚಿಕೆ ಮಾಡಬೇಕಿತ್ತು. ಆದರೆ ಹಂಚಿಕೆ ಮಾಡಲಿಲ್ಲ. ಜಿಲ್ಲಾಡಳಿತದಿಂದ ನಿವೇಶನ ಹಂಚಿಕೆಯ ಪತ್ರ ನೀಡಲಾಗಿತ್ತು. ನಿವೇಶನ ಹಂಚದಂತೆ ಕೆಲವರು ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದರು. ನಾವು ಕಾನೂನು ಹೋರಾಟ ನಡೆಸಿ ತಡೆಯಾಜ್ಞೆ ತೆರವು ಮಾಡಿಸಿದ್ದೆವು. ನಮಗೆ ನ್ಯಾಯ ಸಿಕ್ಕಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲಾಡಳಿತದ ಈ ವಿಳಂಬ ನೀತಿ ವಿರೋಧಿಸಿ ನಮಗೆ ನ್ಯಾಯ ಸಿಗುವವರೆಗೂ ಅನಿರ್ಧಿಷ್ಟ ಕಾಲಾವಧಿವರೆಗೆ ಪ್ರತಿಭಟನೆ ನಡೆಸುತ್ತೇವೆ. ಜಿಲ್ಲಾಡಳಿತದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗುವುದು. ಕಾನೂನು ಹೋರಾಟ ಮುಂದುವರಿಸುತ್ತೇವೆ. ಧರಣಿಯನ್ನೂ ನಡೆಸುತ್ತೇವೆ. ಜಿಲ್ಲಾಧಿಕಾರಿಗಳೇ ಸ್ಥಳಕ್ಕೆ ಬಂದು ಲಿಖಿತರೂಪದಲ್ಲಿ ಸೂಚನೆ ನೀಡುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಹೋರಾಟ ಸಮಿತಿ ಅಧ್ಯಕ್ಷ ಕೃಷ್ಣಪ್ಪ, ಸಂತ್ರಸ್ತರಾದ ಮಹಾದೇವ, ಶಿವಾನಂದ, ರಾಮಣ್ಣ, ನಾಗರಾಜ್, ಎನ್.ಟಿ. ಕುಮಾರ್, ವೀರಭದ್ರ, ರಾಘವೇಂದ್ರ, ಬಸವಲಿಂಗಪ್ಪ, ರಾಮಣ್ಣ, ರಂಗಪ್ಪ, ಅಂಬಿಕಾ, ನಾಗರತ್ನಮ್ಮ, ಸಾವಿತ್ರಮ್ಮ ಮುಂತಾದವರು ಧರಣಿಯಲ್ಲಿ ಭಾಗವಹಿಸಿದ್ದರು.