ನ್ಯೂಸ್

ವಿದ್ಯುತ್ ಪೂರೈಕೆ ಅಸ್ತವ್ಯಸ್ತದಿಂದ ಅನ್ನದಾತರು ಅಯೋಮಯ: ಕಾರಜೋಳ ಆತಂಕ

ಬೆಂಗಳೂರು: ರಾಜ್ಯದಲ್ಲಿ ವಿದ್ಯುತ್ ಪ್ರಸರಣ ಮಾರ್ಗದ ಎಲ್ ಟಿ ವಾಹಕಗಳು ತುಂಡಾಗಿ ಅಥವಾ ಜೋತು ಬಿದ್ದು ಒಂದಿಲ್ಲೊಂದು ಜನ ಬಲಿಯಾಗುತ್ತಿದ್ದಾರೆ. ವಿದ್ಯುತ್ ವಿತರಣಾ ವ್ಯವಸ್ಥೆ ಅಸ್ತವ್ಯಸ್ತವಾಗಿ ನೀರಾವರಿ ಪಂಪ್ ಸೆಟ್ ಅವಲಂಬಿತ ಅನ್ನದಾತರ ಪರಿಸ್ಥಿತಿ ಅಯೋಮಯವಾಗಿದೆ ಎಂದು ಬಿಜೆಪಿ ಸಂಸದ ಗೋವಿಂದ ಕಾರಜೋಳ ಆತಂಕ ವ್ಯಕ್ತಪಡಿಸಿದರು‌.

ಪಕ್ಷದ ರಾಜ್ಯ ಕಚೇರಿಯಲ್ಲಿ ಭಾನುವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕ ವಿದ್ಯುತ್ ಒತ್ತಡದಿಂದ ಟ್ರಾನ್ಸಫಾರ್ಮರ್ ಗಳು ಸುಡುತ್ತಿವೆ. ಬೆನ್ನಲ್ಲೇ ವಿದ್ಯುತ್ ಪೂರೈಕೆ ಏರುಪೇರಾಗಿ ನೀರಾವರಿ ಪಂಪ್ ಸೆಟ್ ಗಳು ಸುಟ್ಟು ರೈತರು ಅಪಾರ ನಷ್ಟದಿಂದ ಕೈಸುಟ್ಟುಕೊಳ್ಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ವಿದ್ಯುತ್ ಉಪ ಕೇಂದ್ರಗಳನ್ನು 33 ಕೆವಿಯಿಂದ 66, ಹಾಗೆಯೇ 66 ಇದ್ದದ್ದು 110 ಕೆವಿಗೆ ಉನ್ನತೀಕರಿಸಿ ಒಟ್ಟಾರೆ ವಿದ್ಯುತ್ ಪ್ರಸರಣ, ವಿತರಣ ವ್ಯವಸ್ಥೆಯ ಜಾಲ ಸುಧಾರಿಸಿ ಬಲವರ್ಧನೆ ಮಾಡುವುದಾಗಿ ಸರ್ಕಾರ ಹೇಳಿದ್ದು, ಈವರೆಗೆ ಕಾರ್ಯಗತವಾಗಿಲ್ಲ ಎಂದು ಗೋವಿಂದ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದರು.

ಹೊಸ ಸಬ್ ಸ್ಟೇಷನ್ ಗಳಿಲ್ಲ

ಕಾಂಗ್ರೆಸ್ ಅಧಿಕಾರಕ್ಕೆ ಬಂದು ಒಂದೂವರೆ ವರ್ಷ ಕಳೆದಿದೆ. ಒಂದೇ ಒಂದು ಹೊಸ ಸಬ್ ಸ್ಟೇಷನ್ ಗೆ ಅಡಿಗಲ್ಲು ಹಾಕಿಲ್ಲ. ಹೊಸ ಸಬ್ ಸ್ಟೇಷನ್ ಗಳ ಸ್ಥಾಪನೆಗೆ ಕೆಪಿಟಿಸಿಎಲ್ ಟೆಂಡರ್ ಕರೆದದ್ದನ್ನೂ ನೋಡಿಲ್ಲ. ಸುಟ್ಟ ಟಿ.ಸಿ.ಗಳನ್ನು 24 ತಾಸಿನಲ್ಲಿ ಬದಲಾಯಿಸಬೇಕು. ಆದರೆ ಹೆಚ್ಚುವರಿ ವಿದ್ಯುತ್ ಪರಿವರ್ತಕಗಳನ್ನು ಎಸ್ಕಾಂಗಳ ಆಯಾ ವಿಭಾಗದಲ್ಲಿ ದಾಸ್ತಾನು ಇಟ್ಟಿಲ್ಲವೆಂದು ದೂರಿದರು‌‌.

ಈ ಬಾರಿ ಭರಪೂರ ಮಳೆಯಿಂದ ನದಿ, ಹಳ್ಳಗಳು ತುಂಬಿ ಹರಿದಿವೆ. ಕೆರೆಕುಂಟೆಗಳು ಭರ್ತಿಯಾಗಿವೆ. ಅಂತರ್ಜಲವೂ ವೃದ್ಧಿಸಿದೆ. ಬೇಸಿಗೆ ಬೆಳೆ ಬಿತ್ತಬೇಕೆಂಬ ಉತ್ಸಾಹದಲ್ಲಿರುವ ರೈತರಿಗೆ ವಿದ್ಯುತ್ ಸಮಸ್ಯೆಯಿದೆ ಚಿಂತೆಯಾಗಿದೆ ಎಂದರು.

ಗರಿಷ್ಠ ಅವಧಿಯ ವಿದ್ಯುತ್ ಬೇಡಿಕೆ ಕಳೆದ ವರ್ಷ 17,500 ಮೆಗಾ ವಾಟ್ ಗೆ ತಲುಪಿತ್ತು‌. ಈ ವರ್ಷ 20 ಸಾವಿರ ಮೆಗಾ ವಾಟ್ ದಾಟುವ ಸಾಧ್ಯತೆಯಿದೆ. ರಾಜ್ಯದ ಸ್ಥಾಪಿತ ಒಟ್ಟು ವಿದ್ಯುತ್ ಸಾಮರ್ಥ್ಯ 32 ಸಾವಿರ ಮೆಗಾ‌ವಾಟ್ ಗಳಷ್ಟಿದೆ. ಆದರೆ ಒಟ್ಟು ವಿದ್ಯುತ್ ಸಾಗಣೆ, ವಿತರಣೆ ವ್ಯವಸ್ಥೆ ದುರ್ಬಲವಾಗಿರುವ ಕಾರಣ ರೈತರನ್ನು ಅಸಹಾಯಕ ಸ್ಥಿತಿಗೆ ತಳ್ಳುವ ಲಕ್ಷಣಗಳು ಕಂಡು ಬರುತ್ತಿವೆ ಎಂಬ ಸಂದೇಹ ವ್ಯಕ್ತಪಡಿಸಿದರು‌.

ಅಕ್ರಮ ಸಕ್ರಮ, ಶೀಘ್ರ ಸಂಪರ್ಕ ಯೋಜನೆಗಳು ರದ್ದು. ನೀರಾವರಿ ಪಂಪ್ ಸೆಟ್ ಗಳಿಗೆ ತ್ವರಿತ ವಿದ್ಯುತ್ ಸಂಪರ್ಕಕ್ಕೆ ಐದು ಲಕ್ಷ ರೂ ಕಟ್ಟಬೇಕೆಂಬ ಷರತ್ತು. ಅರ್ಜಿ ಸಲ್ಲಿಸಿದವರು ವಿದ್ಯುತ್ ಸಂಪರ್ಕಕ್ಕೆ ಕಾಯುತ್ತಿದ್ದು, ಅನಧಿಕೃತ ಸಂಪರ್ಕ ಪಡೆದವರ ಮೇಲೆ ದಾವೆ ಹೂಡುತ್ತಿದ್ದಾರೆ. ರೈತ ವಿರೋಧಿ ನೀತಿಯನ್ನು ರಾಜ್ಯ ಸರ್ಕಾರ ಅನುಸರಿಸುತ್ತಿದೆ ಎಂದು ಗೋವಿಂದ ಕಾರಜೋಳ ಆಕ್ರೋಶ ವ್ಯಕ್ತಪಡಿಸಿದರು.