ನ್ಯೂಸ್

ಕಾವೇರಿ ಹೋರಾಟದ ಬಗ್ಗೆ ಧ್ವನಿಯೆತ್ತದ ಸ್ಯಾಂಡಲ್​ವುಡ್​​ ನಟರ ವಿರುದ್ಧ ರೈತರ ಆಕ್ರೋಶ: ಜಾಲತಾಣದಲ್ಲಿ ಟೀಕೆ

ಬೆಂಗಳೂರು: ಕರ್ನಾಟಕದಿಂದ ತಮಿಳುನಾಡಿಗೆ 15 ದಿನಗಳವರೆಗೆ ಪ್ರತಿದಿನ 5 ಸಾವಿರ ಕ್ಯೂಸೆಕ್​​ ನೀರನ್ನು ಹರಿಸಬೇಕೆಂಬ ಸೆ.12ರ ಕಾವೇರಿ ನೀರು ನಿಯಂತ್ರಣ ಸಮಿತಿ (CWRC)ಯ ಆದೇಶವನ್ನು ಪಾಲಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಸೆ.18ರಂದು ಆದೇಶ ಹೊರಡಿಸಿದ್ದು, ರಾಜ್ಯದಲ್ಲಿ ರೈತರ ಆಕ್ರೋಶ ಭುಗಿಲೆದ್ದಿದೆ. ಕಾವೇರಿ ಹೋರಟ ದಿನೇ ದಿನೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಈವರೆಗೂ ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿದ ಸ್ಯಾಂಡಲ್​ವುಡ್​ ನಟರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ತಮಿಳುನಾಡಿಗೆ ನೀರು ಬಿಡಬೇಕು ಎನ್ನುವ CWMA ಆದೇಶಕ್ಕೆ ನಾವು ಸುಪ್ರೀಂಕೋರ್ಟ್ ಮುಂದೆ ತಡೆಯಾಜ್ಞೆಗೆ ಮನವಿ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ದೆಹಲಿಯಲ್ಲಿ ಸಿಎಂ, ಡಿಸಿಎಂ ಸೇರಿದಂತೆ ಜನಪ್ರತಿನಿಧಿಗಳು ಸಭೆ ನಡೆಸಿದ್ದಾರೆ. ಇಂದು ಸಂಜೆ ಕೇಂದ್ರ ಜಲ ಸಂಪನ್ಮೂಲ ಸಚಿವರ ಜತೆ ಸಭೆ ನಡೆಸಿದ ಬಳಿಕ ಮುಂದಿನ ತೀರ್ಮಾನ ಮಾಡುತ್ತೇವೆ ಎಂದು ಸಿಎಂ ಹೇಳಿದ್ದಾರೆ.

ಇದರ ನಡುವೆ ಕನ್ನಡ ಚಿತ್ರರಂಗದ ನಟರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದೆ. ತಮ್ಮ ಸ್ವಾರ್ಥಕ್ಕಾಗಿ ರಾಜ್ಯದ ಹಿತಾಶಕ್ತಿಯನ್ನು ಬಲಿ ಕೊಡುತ್ತಿದ್ದಾರೆ ಮತ್ತು ಸ್ವಾಭಿಮಾನವನ್ನು ಮಾರಿಕೊಂಡಿದ್ದಾರೆ ಎಂದು ರೈತರು ಹಾಗೂ ರೈತ ಪರ ಸಂಘಟನೆಗಳು ನಟರಾದ ಶಿವರಾಜ್​ಕುಮಾರ್​, ಸುದೀಪ್​, ದರ್ಶನ್​ ಮತ್ತು ಯಶ್​ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಡಾ. ರಾಜ್​ಕುಮಾರ್​, ವಿಷ್ಣುವರ್ಧನ್​, ಅಂಬರೀಷ್​ ಕಾಲದಲ್ಲಿ ರಾಜ್ಯಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆ ಬಂದರೂ ಮುಂಚೂಣಿಯಲ್ಲಿ ನಿಲ್ಲುತ್ತಿದ್ದರು. ಆದರೆ, ಇಂದು ಯಾರೋಬ್ಬರು ಧ್ವನಿಗೂಡಿಸದೇ ಇರುವುದು ನಿಜಕ್ಕೂ ದುಃಖಕರ ಸಂಗತಿಯಾಗಿದೆ. ತಮ್ಮ ಸಿನಿಮಾಗಳ ಸ್ವಾರ್ಥ ಸಾಧನೆಗಾಗಿ ಈ ರೀತಿಯ ನಡೆ ಒಳ್ಳೆಯದಲ್ಲ ಎಂದು ರೈತರು ಆಕ್ರೋಶ ಹೊರಹಾಕಿದ್ದಾರೆ.

ನಟರ ಬಾಯಿಯನ್ನು ಮುಚ್ಚಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ನಟರ ವಿರುದ್ಧ ಸಿಡಿದಿದ್ದೆದ್ದಾರೆ. ನೀವು ನಿಜವಾಗಿಯೂ ಕನ್ನಡಿಗರಾಗಿದ್ದರೆ ಈಗಲಾದರೂ ಧ್ವನಿ ಎತ್ತಿ ಎಂದು ಆಗ್ರಹಿಸಿದ್ದಾರೆ. ಮೌನ ವಹಿಸಿದರೆ ಮುಂದಿನ ದಿನಗಳಲ್ಲಿ ಇದರ ಪರಿಣಾಮವನ್ನೂ ಎದುರಿಸಬೇಕಾಗುತ್ತದೆ ಮತ್ತು ಕನ್ನಡ ವಿರೋಧಿಗಳು ಎಂಬ ಕುಖ್ಯಾತಿಗೆ ಒಳಗಾಗಬೇಕಾಗುತ್ತದೆ ಎಂದಿದ್ದಾರೆ.

ಈ ವಿಚಾರದ ಬಗ್ಗೆ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್​ ಪ್ರತಿಕ್ರಿಯೆ ನೀಡಿದ್ದು, ನಾನು ಕನ್ನಡ ಚಿತ್ರರಂಗದಲ್ಲಿ 42 ವರ್ಷಕಾಲ ಸೇವೆಸಲ್ಲಿಸಿ ಕನ್ನಡಿಗರಪ್ರೀತಿ ಅಭಿಮಾನಕ್ಕೆ ಪಾತ್ರನಾಗಿದ್ದೇನೆ. ತಿಂಗಳ ಹಿಂದೆ ಕರ್ನಾಟಕ ರಾಜ್ಯ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಹಾಜರಾಗಿ ಮುಖ್ಯಮಂತ್ರಿಗಳು ಹಾಗೂ ಡಿಸಿಎಂ ಡಿಕೆಶಿ ಅವರ ಮುಂದೆ ಕಾವೇರಿ ನದಿಯ ನೀರಿನ ವಿಚಾರವಾಗಿ ನಮ್ಮ ಬೆಂಬಲ ಸದಾ ಕನ್ನಡಿಗರ ಪರವಾಗಿಯೇ ಇದೆ ಎಂದು ತಿಳಿಸಿ ಬಂದಿದ್ದೆ. ನಾಳೆ ದೆಹಲಿಯಲ್ಲಿ ಕರ್ನಾಟಕ ಭವನದಲ್ಲಿ ಸರ್ವಪಕ್ಷ ಸಭೆ ಆಯೋಜಿಸಲಾಗಿದೆ. ಅದರಲ್ಲೂ ಭಾಗಿಯಾಗಿ ಕಾವೇರಿ ನದಿಯ" ಪರವಾಗಿ ಹಾಗೂ ಕನ್ನಡದ ರೈತರ ಪರವಾಗಿ ನನ್ನ ಧ್ವನಿಯನ್ನು ಪ್ರಸ್ತಾಪಿಸುತ್ತೇನೆ ಎಂದು ಜಗ್ಗೇಶ್​ ಅವರು ನಿನ್ನೆ ಟ್ವೀಟ್​ ಮಾಡಿದ್ದರು.