ಬೆಂಗಳೂರು ರೈತರು ಕೃಷಿ ಜತೆಗೆ ತೋಟಗಾರಿಕೆ, ಪಶುಸಂಗೋಪನೆ, ಅರಣ್ಯ ಮುಂತಾದ ಆದಾಯ ನೀಡುವ ಕಸುಬುಗಳನ್ನು ಅನುಸರಿಸುತ್ತಿರುವ ಕಾರಣ ಒಂದೇ ಸೂರಿನಡಿ ಮಾಹಿತಿ ದೊರೆಯುವ ‘ಸಮಗ್ರ ಕೃಷಿ ವಿಶ್ವವಿದ್ಯಾಲಯಗಳು ಅವಶ್ಯಕ’ ಎಂದು ಭಾರತ್ ಬಯೋಟೆಕ್‌ನ ವ್ಯವಸ್ಥಾಕ ನಿರ್ದೇಶಕ ಹಾಗೂ ಅಧ್ಯಕ್ಷ ಡಾ. ಕೃಷ್ಣ ಎಲ್ಲಾ ಅಭಿಪ್ರಾಯ ವ್ತಕ್ತಪಡಿಸಿದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಳಯವು ಜಿಕೆವಿಕೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಾನ್ವಿತ ಮತ್ತು ಉನ್ನತ ಸಾಧನೆಗೈದ ಹಳೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ‘ಪ್ರತಿಭಾ ಪುರಸ್ಕಾರ’ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೊಸ ಅನ್ವೇಷಣೆಗಳು ಹಾಗೂ ಕೈಗಾರಿಕೆಗಳಿಗೆ ಆದ್ಯತೆ ನೀಡಿದಾಗ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದರು.
ಭವಿಷ್ಯದಲ್ಲಿ ಆಹಾರ ಭದ್ರತೆಯು ಸವಾಲಾಗಿದ್ದು, ಈ ದಿಶೆಯಲ್ಲಿ ಯುವಕರು ಕೃಷಿಯಲ್ಲಿ ತೊಡಗಿಸಿಕೊಳ್ಳುವುದು ಅತ್ಯವಶ್ಯಕವಾಗಿದೆ. ಕೃಷಿಯಲ್ಲಿ ಅತ್ಯುತ್ತಮ ಮಾರುಕಟ್ಟೆ, ಯಾಂತ್ರೀಕರಣ ಹಾಗೂ ಆಧುನಿಕ ತಂತ್ರಜ್ಞಾನಗಳನ್ನು ಸಮರ್ಪಕವಾಗಿ ಬೆಳೆಸಿಕೊಂಡಾಗ ರೈತರ ಆತ್ಮಹತ್ಯೆಗಳನ್ನು ತಡೆಗಟ್ಟಬಹುದು ಎಂದರು.
ಮಹಾರಾಷ್ಟ್ರದ ನಾಗಪುರ ಜಿಲ್ಲೆ ಹಾಗೂ ಕರ್ನಾಟಕದ ಕೋಲಾರ ಜಿಲ್ಲೆಗಳು ಒಂದೇ ರೀತಿಯ ಬೆಳೆಯ ಪ್ರಮಾಣವನ್ನು ಹೊಂದಿವೆ. ಆದರೆ, ನಾಗಪುರ ಜಿಲ್ಲೆಯಲ್ಲಿನ ಹೆಚ್ಚಿನ ರೈತರು ಏಕ ಬೆಳೆ ಪದ್ಧತಿಯನ್ನು ಅನುಸರಿಸುತ್ತಿರುವ ಕಾರಣ ಆತ್ಮಹತ್ಯೆ ಸಂಖ್ಯೆ ಹೆಚ್ಚಿದೆ ಎಂದು ಹೇಳಿದರು.
ಕೋಲಾರ ಜಿಲ್ಲೆಯಲ್ಲಿ ರೈತರು ಮಾರುಕಟ್ಟೆ ಬೇಡಿಕೆ ಅನ್ವಯ ಬಹು ಬೆಳೆ ಪದ್ಧತಿಯನ್ನು ಅನುಸರಿಸುತ್ತಿರುವುದರಿಂದ ಆತ್ಮಹತ್ಯೆ ಸಂಖ್ಯೆಯ ಪ್ರಮಾಣ ಕಡಿಮೆ ಇದೆ. ಆದ್ದರಿಂದ ರೈತರು ಹೆಚ್ಚು ಲಾಭ ತರುವ ಬಹು ಬೆಳೆ ಪದ್ಧತಿಗಳು ಮತ್ತು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಳ್ಳು ಮುಂದಾಗಬೇಕಿದೆ ಎಂದರು.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ವಿ. ಸುರೇಶ್ ಮಾತನಾಡಿ, ಸಮಸ್ಯೆಗಳನ್ನೇ ಅವಕಾಶಗಳನ್ನಾಗಿ ಪರಿವರ್ತಿಸಿಕೊಳ್ಳುವ ಚತುರತೆಯನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕಿದೆ. ಸೋತಾಗ ಕುಗ್ಗದೆ ಎದ್ದು ನಿಲ್ಲುವ ಗುಣವನ್ನು ಅಣವಡಿಸಿಕೊಂಡಾಗ ಎಂತಹ ಪರಿಸ್ಥಿತಿಯನ್ನು ಸಹ ಎದುರಿಸಬಹುದು. ಮೊಬೈಲ್ ಮೇಲೆ ಹೆಚ್ಚು ಅವಲಂಬಿತರಾಗದೆ ಹೆಚ್ಚು ಪುಸ್ತಕಗಳನ್ನು ಓದುವ ಮತ್ತು ಪ್ರತಿ ನಿತ್ಯದ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳಲು ದಿನಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳುವಂತೆ ಕರೆ ನೀಡಿದರು.
ಐಎಎಸ್ ಸೇವೆಗೆ ಆಯ್ಕೆಯಾಗಿರುವ ಆರ್. ರಮ್ಯಾ, ಐಎ್ಎಸ್ ಗೆ ಆಯ್ಕೆಯಾಗಿರುವ ಆರ್. ರಾಹುಲ್‌ಗೌಡ ಮತ್ತು ಎಚ್.ವಿ. ಚಿದಾನಂದ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿವಿ ಕುಲಸಚಿವ ಡಾ. ಬಸವೇಗೌಡ, ಆಡಳಿತ ಮಂಡಳಿ ಸದಸ್ಯರಾದ ಡಾ. ಟಿ.ಕೆ. ಪ್ರಭಾಕರ ಶೆಟ್ಟಿ, ಡಾ. ಎಚ್.ಎಲ್. ಹರೀಶ್ ಉಪಸ್ಥಿತರಿದ್ದರು.